ಕ್ಯಾಲಿಫೋರ್ನಿಯಾದಲ್ಲಿ ಭಾರತದ ಧ್ವನಿ: ಗವರ್ನರ್ ಸ್ಥಾನಕ್ಕೆ ಭಾರತೀಯ ಮೂಲದ ಶುಭಂ ಗೋಯೆಲ್ ಸ್ಪರ್ಧೆ
ದೆಹಲಿ: ವಿಶ್ವಾಧ್ಯಂತ ಭಾರತೀಯರು ಎಲ್ಲ ಕ್ಷೇತ್ರದಲ್ಲೂ ತಮ್ಮ ಸಾಮರ್ಥ್ಯಗಳ ಮೂಲಕ ಉನ್ನತ ಸ್ಥಾನಕ್ಕೇರುತ್ತಿದ್ದಾರೆ. ವಿಶ್ವದ ನಾನಾ ದೇಶಗಳಲ್ಲಿ ವೈದ್ಯರು, ಎಂಜಿನಿಯರ್ ಗಳಷ್ಟೇ ಅಲ್ಲ ರಾಜಕಾರಣಿಗಳಾಗಿ ವಿದೇಶದಲ್ಲಿ ಭಾರತೀಯ ಮೂಲದವರು ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಿದ್ದಾರೆ. ಇದೀಗ 22 ವರ್ಷದ ಭಾರತೀಯ ಯುವಕ ಶುಭಂ ಗೋಯೆಲ್ ಕ್ಯಾಲಿಫೋರ್ನಿಯಾ ಗವರ್ನರ್ ಸ್ಥಾನಕ್ಕೆ ಸ್ಪರ್ಧಿಸುವ ಮೂಲಕ ಗಮನ ಸೆಳೆದಿದ್ದಾರೆ.
ಉತ್ತರ ಪ್ರದೇಶ ಮೂಲದ ಹಾಗೂ ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಶುಭಂ ಗೋಯೆಲ್ ವಿಭಿನ್ನ ಪ್ರಚಾರ ತಂತ್ರಗಳಿಂದ ಅಮೆರಿಕನ್ನರ ಗಮನ ಸೆಳೆಯುತ್ತಿದ್ದಾರೆ. ಮೆಗಾಫೋನ್ ಹಿಡಿದುಕೊಂಡು ರಸ್ತೆಗೆ ಹೋಗುವ ಶುಭಂ ಭವಿಷ್ಯದ ಯೋಜನೆ ವಿಶೇಷವಾಗಿ ವರ್ಚುವಲ್ ರಿಯಾಲಿಟಿ ತಂತ್ರಜ್ಞಾನದ ಬಳಕೆ ಕುರಿತು ಜನರಿಗೆ ಮನದಟ್ಟು ಮಾಡುತ್ತಿದ್ದಾರೆ. ಈ ತಂತ್ರಜ್ಞಾನ ವಿಶ್ವವನ್ನೇ ಬದಲಾಯಿಸಲಿದೆ. ಕ್ಯಾಲಿಫೋರ್ನಿಯಾದ ಶೈಕ್ಷಣಿಕ ತೊಂದರೆಗಳನ್ನು ನಿವಾರಿಸಬಹುದು ಎಂದು ತಿಳಿಸಿದ್ದಾರೆ.
ಮೀರತ್ ಮೂಲದ ಶುಭಂ ತಾಯಿ ಕರುಣಾ ಗೋಯೆಲ್ ಹಾಗೂ ತಂದೆ ವಿಪುಲ್ ಗೋಯೆಲ್ ಐಟಿ ಪದವೀಧರರಾಗಿದ್ದಾರೆ. ತಮ್ಮದೇ ಸಾಫ್ಟ್‌ವೇರ್ ಕಂಪನಿ ಆರಂಭಿಸಿ, ಅಲ್ಲಿಯೇ ನೆಲೆಯೂರಿದ್ದಾರೆ. ಕ್ಯಾಲಿಫೋರ್ನಿಯಾ ವಿವಿಯಲ್ಲಿ ಅರ್ಥಶಾಸ್ತ್ರ ಹಾಗೂ ಸಿನಿಮಾ ಕುರಿತು ಓದಿರುವ ಶುಭಂ ಗೋಯೆಲ್, ಕಳೆದ ವರ್ಷವೇ ಪದವಿ ಪೂರ್ಣಗೊಳಿಸಿದ್ದಾರೆ. 2017ರ ಅಕ್ಬೋಬರ್‌ನಿಂದ ಕೆಲಸ ಮಾಡಲು ಆರಂಭಿಸಿರುವ 22 ವರ್ಷದ ಯುವಕ ಕ್ಯಾಲಿಫೋರ್ನಿಯಾದ ಡ್ಯಾನ್‌ವಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ. ನಾನು ಕ್ಯಾಲಿಫೋರ್ನಿಯಾದಲ್ಲೇ ಹುಟ್ಟಿ ಬೆಳೆದಿದ್ದೇನೆ. ವರ್ಚುವಲ್ ರಿಯಾಲಿಟಿ ತಂತ್ರಜ್ಙಾನ ಪ್ರಚಾರಕ್ಕೆ
ಬಳಸುತ್ತಿರುವವರ ಪೈಕಿ ನಾನೇ ಮೊದಲು ಎಂದು ಹೇಳಿಕೊಂಡಿದ್ದಾರೆ.
ವರ್ಚುವಲ್ ರಿಯಾಲಿಟಿಗೆ ಸಂಬಂಧಿಸಿದ ಕಂಪನಿಯಲ್ಲೇ ಶುಭಂ ಗೋಯೆಲ್ ಕೆಲಸ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಸ್ವತಂತ್ರ ಧ್ವನಿಗಳ ಅಗತ್ಯವಿದೆ. ನಾನು ಯಾವುದೇ ಪಕ್ಷದ ಪರ ನಿಲುವು ಹೊಂದಿಲ್ಲ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹಣದ ಬದಲು ತಂತ್ರಜ್ಙಾನಕ್ಕೆ ಪ್ರಾಮುಖ್ಯತೆ ನೀಡಬೇಕಿದೆ ಎಂದು ಪ್ರಚಾರ ಆರಂಭಿಸಿದ್ದಾರೆ.
ಭಾರತೀಯ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ದೊರೆಯಲು ಧ್ವನಿ ಎತ್ತುತ್ತೇನೆ. ಯುವಕರು ಹಣ ಹಾಗೂ ಪ್ರಖ್ಯಾತಿಗಿಂತ ಸಮಾಜದಲ್ಲಿ ಬದಲಾವಣೆ ತರಲು ಮುಂದಾಗಬೇಕು. ಅವರನ್ನು ಪ್ರೋತ್ಸಾಹಿಸಲು ತಾನು ಕ್ಯಾಲಿಫೋರ್ನಿಯಾ ಗವರ್ನರ್ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
Leave A Reply