ಜೂನ್ 20 ರಂದು ಹಸೆಮಣೆ ಏರಬೇಕಿದ್ದ ಯೋಧ, ವೀರ ಮರಣ ಹೊಂದಿ ತ್ರಿವರ್ಣ ಧ್ವಜ ಹೊದ್ದು ಹುತಾತ್ಮನಾದ
ದೆಹಲಿ: ಯೋಧರು ದೇಶಕ್ಕಾಗಿ ತಮ್ಮ ಜೀವನವನ್ನೆ ಪಣಕ್ಕಿಟ್ಟು ಹೋರಾಡುತ್ತಾರೆ. ತಮ್ಮ ನೂರಾರು ಆಸೆ, ಆಕಾಂಕ್ಷೆಗಳನ್ನು ಬದಿಗೊತ್ತಿ ದೇಶಕ್ಕಾಗಿ ಗಡಿಯಲ್ಲಿ ವಿರೋಧಿ ರಾಷ್ಟ್ರದೊಂದಿಗೆ ಕಾದಾಟ ನಡೆಸಿ ಜೀವ ನೀಡುತ್ತಾರೆ. ಆದರೆ ಅವರ ಹಲವು ಆಸೆಗಳು ಈಡೇರುವುದಿಲ್ಲ ಎಂಬುದಕ್ಕೆ ಸೋಮವಾರ ಪಾಕಿಸ್ತಾನದ ಗಡಿ ನಿಯಮ ಉಲ್ಲಂಘಿಸಿ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ಯೋಧ ವಿಜಯ ಪಾಂಡೆ ಜ್ವಲಂತ ನಿದರ್ಶನವಾಗಿದ್ದಾರೆ.
ಪಾಕಿಸ್ತಾನದ ಅಪ್ರಚೋಧಿತ ದಾಳಿಗೆ ಸೋಮವಾರ ಬಲಿಯಾದ ಬಿಎಸ್ ಎಫ್ ಯೋಧ ವಿಜಯ ಪಾಂಡೆ ಮದುವೆ ಜೂನ್ 20 ರಂದು ನಿಶ್ಚಯವಾಗಿತ್ತು. ಜೂನ್ 15 ರಂದು ವಿಜಯ ಪಾಂಡೆ ಅವರ ತಿಲಕ ಕಾರ್ಯಕ್ರಮವಿತ್ತು. ಪಾಕಿಗಳ ಅಟ್ಟಹಾಸ ಅವರನ್ನು ಹಸೆ ಮಣೆ ಏರುವ ಮುನ್ನವೇ ಹುತಾತ್ಮರನ್ನಾಗಿಸಿದೆ. ವಿಜಯ ಹುತಾತ್ಮರಾಗುವ ಮುನ್ನ ಕೆಲವು ದಿನಗಳ ಹಿಂದೆ ವಿಜಯ ಅವರ ತಂದೆ ಕರೆ ಮಾಡಿ ‘ಮದುವೆ ತಯಾರಿ ನಡೆದಿವೆ. ಆಮಂತ್ರಣ ಪತ್ರ ಸಿದ್ಧಪಡಿಸಲಾಗಿದೆ. ಮದುವೆಗೆ ನಾನಾ ಕಾರ್ಯಗಳು ಬಾಕಿ ಇವೆ. ಬೇಗ ಬಾ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ವಿಜಯ ಎಲ್ಲವೂ ಸರಿಯಾಗಲಿದೆ. ಶೀಘ್ರದಲ್ಲಿ ಮನೆಗೆ ಬರಲಿದ್ದೇನೆ ಎಂದು ಹೇಳಿದ್ದರು. ಅಲ್ಲದೇ ರಜೆಗೆ ಹಿರಿಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿದ್ದರು ಎನ್ನಲಾಗಿದೆ.
ಉತ್ತರ ಪ್ರದೇಶದ ಫತೇಪುರದ ಸಾಠಿಗಾಂವ್ ನ ವಿಜಯ ಪಾಂಡೆ ವೀರ ಮರಣ ಹೊಂದಿರುವುದಕ್ಕೆ ಇದೀಗ ಇಡೀ ಗ್ರಾಮ ಶೋಕತಪ್ತವಾಗಿದ್ದು, ಮನೆ ಮಗನನ್ನು ಕಳೆದುಕೊಂಡ ದುಖಃ ಇಡೀ ಗ್ರಾಮಕ್ಕೆ ಆವರಿಸಿದೆ. ಅಲ್ಲದೇ ವಿಜಯ ಪಾಂಡೆ ಅವರಿಗೆ ನಿಶ್ಚಿತವಾಗಿದ್ದ ಯುವತಿಯ ಗ್ರಾಮ ಬುಠವಾದಲ್ಲೂ ಮೌನ ಆವರಿಸಿದೆ. ಜೂನ್ 20ರಂದು ಹಸೆ ಮಣೆ ಏರಬೇಕಿದ್ದ ಯೋಧನಿಗೆ ಜೂನ್ .4ರಂದು ಚಿತೆಗೆ ಅಗ್ನಿ ಸ್ಪರ್ಷ ನೀಡಲಾಗಿದೆ.
Leave A Reply