ಚೀನಾದಲ್ಲಿ ನಡೆಯುವ ಶೃಂಗಸಭೆಯಲ್ಲಿ ಪಾಕಿಸ್ತಾನಕ್ಕೆ ಟಾಂಗ್ ನೀಡಲು ನರೇಂದ್ರ ಮೋದಿ ಪ್ಲಾನ್
ಜಮ್ಮು-ಕಾಶ್ಮೀರದಲ್ಲಿ ಉಗ್ರರು ಹಾಗೂ ಸೈನಿಕರನ್ನು ಛೂ ಬಿಟ್ಟು ಉದ್ಧಟತನ ಮಾಡುತ್ತಿರುವ ಪಾಕಿಸ್ತಾನದ ವಿರುದ್ಧ ಪ್ರತಿದಾಳಿ ಮಾಡದೇ ಬಿಡುವುದಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿರುವ ಬೆನ್ನಲ್ಲೇ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಛಾಟಿಯೇಟು ನೀಡಲು ಪ್ರಧಾನಿ ನರೇಂದ್ರ ಮೋದಿ ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ಜೂನ್ 9, 10ರಂದು ಚೀನಾದಲ್ಲಿ ನಡೆಯುವ ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದು, ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಮಾಡುತ್ತಿರುವ ಉದ್ಧಟತನ ಹಾಗೂ ಉಗ್ರರ ಪೋಷಣೆಯನ್ನು ಪ್ರಸ್ತಾಪಿಸುವ ಮೂಲಕ ಅಂತಾರಾಷ್ಟ್ರೀಯ ಸಭೆಯಲ್ಲಿ ಪಾಕಿಸ್ತಾನದ ಮರ್ಯಾದೆ ಹರಾಜು ಹಾಕಲು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ ಈ ಬಾರಿಯ ಶಾಂಘೈ ಶೃಂಗಸಭೆಯಲ್ಲಿ ಜಾಗತಿಕ ಭಯೋತ್ಪಾದನೆ ನಿಗ್ರಹ, ಪಾಕಿಸ್ತಾನ ಹೇಗೆ ಭಯೋತ್ಪಾದನಾ ಸಂಘಟನೆಗಳಿಗೆ ಹಣ ನೀಡುತ್ತಿದೆ, ಉಗ್ರರನ್ನು ಒಡಲೊಳಗೆ ಇಟ್ಟುಕೊಂಡು ಪೋಷಣೆ ಮಾಡುತ್ತಿದೆ ಹಾಗೂ ಅವರನ್ನು ಭಾರತದ ವಿರುದ್ಧ ಛೂ ಬಿಟ್ಟು ಹೇಗೆ ತನ್ನ ಕಪಟತನ ಹೊರಹಾಕುತ್ತಿದೆ ಎಂಬುದರ ಕುರಿತು ಮೋದಿ ಅವರು ಜಾಗತಿಕ ನಾಯಕರಿಗೆ ಮನವರಿಕೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಆದಾಗ್ಯೂ ಈ ಬಾರಿಯ ಶೃಂಗಸಭೆಯಲ್ಲಿ ಜಾಗತಿಕ ಭಯೋತ್ಪಾದನೆ ನಿಗ್ರಹ, ಆರ್ಥಿಕ ಸಹಭಾಗಿತ್ವ ಸೇರಿ ಹಲವು ವಿಷಯಗಳ ಕುರಿತು ಚರ್ಚೆಯಾಗಲಿವೆ. ಈ ಹಿಂದೆಯೂ ಪ್ರಧಾನಿ ಮೋದಿ ಅವರು ಪಾಕಿಸ್ತಾನದ ಭಯೋತ್ಪಾದನೆಯ ಕರಾಳ ಮುಖವನ್ನು ಹಲವು ಸಭೆಗಳಲ್ಲಿ ಬಹಿರಂಗಗೊಳಿಸಿದ್ದರು. ಈಗ ಮೋದಿ ಮತ್ತೊಂದು ಅವಕಾಶ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
Leave A Reply