ಸಡನ್ನಾಗಿ ರಜೆ ಕೊಟ್ಟರೆ ಪೋಷಕರು ಅತಂತ್ರ!
ನಿಮ್ಮ ಮಗು ಶಾಲೆಗೆ ಹೋಗಿರುತ್ತದೆ. ನೀವು ಉದ್ಯೋಗಕ್ಕೆ ಹೋಗಿರುತ್ತೀರಿ. ನಿಮ್ಮ ಮೊಬೈಲಿಗೆ ಮೇಸೇಜ್ ಒಂದು ಬರುತ್ತದೆ. ಶಾಲೆಗಳಿಗೆ ಇವತ್ತು ಮತ್ತು ನಾಳೆ ರಜೆ ಕೊಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ ಎನ್ನುವ ಸಂದೇಶ ಅದು. ನಿಮ್ಮ ಹೆಂಡ್ತಿ ಗೃಹಿಣಿಯಾಗಿದ್ದರೆ ನೀವು ಅವರಿಗೆ ಫೋನ್ ಮಾಡಿ ಮಗುವನ್ನು ಶಾಲೆಯಿಂದ ಕರೆದುಕೊಂಡು ಬನ್ನಿ ಎನ್ನಬಹುದು. ಆದರೆ ಇವತ್ತಿನ ದಿನಗಳಲ್ಲಿ ದಂಪತಿಗಳಿಬ್ಬರು ಉದ್ಯೋಗಕ್ಕೆ ತೆರಳುವುದರಿಂದ ಮತ್ತು ನಗರದಲ್ಲಿ ವಿಭಕ್ತ ಕುಟುಂಬದಲ್ಲಿ ಇರುವುದರಿಂದ ಮಗುವನ್ನು ತಕ್ಷಣ ಶಾಲೆಯಿಂದ ಕರೆದುಕೊಂಡು ಬರುವುದು ಯಾರು ಎಂದು ಗೊಂದಲ ಉಂಟಾಗುತ್ತದೆ. ಅನೇಕ ಬಾರಿ ಬೆಳಿಗ್ಗೆ 8 ಗಂಟೆಯೊಳಗೆ ನೀವೆ ಮಗುವನ್ನು ಶಾಲೆಗೆ ಬಿಟ್ಟಿರುತ್ತೀರಿ. ಕೆಲವರು ರಿಕ್ಷಾ ಅಥವಾ ಓಮಿನಿಯಲ್ಲಿ ಕಳುಹಿಸಿರುತ್ತಾರೆ. ರಿಕ್ಷಾ ಅಥವಾ ಒಮಿನಿಯವ ಬೆಳಿಗ್ಗೆ 8 ಗಂಟೆಗೆ ಬಿಟ್ಟು ಸಂಜೆ ಕರೆದುಕೊಂಡು ಹೋಗುವುದರಿಂದ 9 ಗಂಟೆಗೆ ಶಾಲಾ ಮುಖ್ಯೋಪಾಧ್ಯಾಯರು ಇವತ್ತು ಶಾಲೆ ಇಲ್ಲ, ರಜೆ ಎಂದು ಪೋಷಕರಿಗೆ ಮೇಸೇಜ್ ಮಾಡಿದರೆ ಮಾಡುವುದಾದರೂ ಏನು?
ರಜೆ ಕೊಡುವುದು ತಪ್ಪಲ್ಲ…
ತೂಫಾನ್ ಬರುತ್ತದೆ, ಧಾರಾಕಾರ ಮಳೆ ಸುರಿಯುತ್ತದೆ ಎಂದು ಜಿಲ್ಲಾಧಿಕಾರಿಗಳು ರಜೆ ಕೊಡುವುದು ತಪ್ಪಲ್ಲ. ಮಳೆಯಿಂದ ಆಗುವ ಅನಾಹುತವನ್ನು ತಪ್ಪಿಸಲು ಜಿಲ್ಲಾಧಿಕಾರಿಗಳು ಹೀಗೆ ಮಾಡುತ್ತಾರೆ. ಆದರೆ ನಾನು ಹೇಳುವುದು ಏನೆಂದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಜಿಲ್ಲೆಯ ಅಷ್ಟೂ ಶಾಲೆಗಳ ಮುಖ್ಯೋಪಾಧ್ಯಾಯರ ಮೊಬೈಲ್ ನಂಬ್ರ ಇರಬೇಕು. ಒಂದು ವೇಳೆ ಇಲ್ಲದಿದ್ದರೆ ತೆಗೆದುಕೊಂಡು ಇಡಬೇಕು. ನಾಳೆ ಬೆಳಿಗ್ಗೆ ಸಿಕ್ಕಾಪಟ್ಟೆ ಪ್ರಕೃತಿ ವಿಕೋಪ ಸಂಭವಿಸಲಿದೆ ಎಂದು ಹವಾಮಾನ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮಾಹಿತಿ ಬಂದ ಕೂಡಲೇ ತಕ್ಷಣ ಇಬ್ಬರೂ ಸಮಾಲೋಚಿಸಿ ಒಂದು ನಿರ್ಧಾರ ತೆಗೆದುಕೊಳ್ಳಬೇಕು. ರಜೆ ಕೊಡುವ ತೀರ್ಮಾನವನ್ನು ಜಿಲ್ಲಾಧಿಕಾರಿಗಳು ತೆಗೆದುಕೊಂಡ ಕೂಡಲೇ ತಮ್ಮ ಕಚೇರಿಯಿಂದ ಎಲ್ಲಾ ಮುಖ್ಯೋಪಾಧ್ಯಾಯರ ಮೊಬೈಲಿಗೆ ರಜೆಯ ಆದೇಶವನ್ನು ನೀಡಬೇಕು. ಇದರಿಂದ ಏನಾಗುತ್ತದೆ ಎಂದರೆ ರಾತ್ರಿಯೇ ಮುಖ್ಯೋಪಾಧ್ಯಾಯರು ಅದನ್ನು ಎಲ್ಲಾ ಪೋಷಕರ ಮೊಬೈಲಿಗೆ ಕಳುಹಿಸಲು ಅಗತ್ಯ ಇರುವ ವ್ಯವಸ್ಥೆ ಮಾಡಲು ಸಹಾಯವಾಗುತ್ತದೆ. ಆಗ ರಾತ್ರಿಯೇ ಪೋಷಕರಿಗೆ ನಾಳೆ ಬೆಳಿಗ್ಗೆ ಮಗುವನ್ನು ಶಾಲೆಗೆ ಕಳುಹಿಸಲು ಇಲ್ಲ ಎಂದು ಕನ್ಫರ್ಮ್ ಆಗುತ್ತದೆ. ಇದರಿಂದ ಮಗು ಮನೆಯಲ್ಲಿ ಉಳಿಯುತ್ತದೆ.
ರಿಸ್ಕ್ ತಪ್ಪಿಸುವುದಕ್ಕೆ ಸಹಕಾರಿ…
ಆದರೆ ಬೆಳಿಗ್ಗೆ ಶಾಲೆಗೆ ಬಂದ ಮಕ್ಕಳನ್ನು ಅವರ ಪೋಷಕರು ಬರುವ ತನಕ ಶಿಕ್ಷಕರು ಕಾಯಬೇಕು. ಸ್ವಲ್ಪ ದೊಡ್ಡ ಮಕ್ಕಳು ಏನು ಮಾಡುತ್ತಾರೆ ಎಂದರೆ ಹೇಗೂ ರಜೆ ಕೊಟ್ಟಿದ್ದಾರೆ ಗಮ್ಮತ್ ಮಾಡೋಣ ಎಂದು ಹತ್ತಿರದ ಕೆರೆಯಲ್ಲಿಯೋ ನದಿಯಲ್ಲಿಯೋ ಈಜಾಡಲು ಹೋದರೆ ಅದನ್ನು ನೋಡುವವರು ಯಾರು? ತಂದೆ, ತಾಯಿ ಕೆಲಸಕ್ಕೆ ಹೋಗಿರುತ್ತಾರೆ, ಟೀಚರ್ಸ್ ಶಾಲೆಯಿಂದ ಕಳುಹಿಸಿರುತ್ತಾರೆ. ಈ ರಿಸ್ಕ್ ಕೂಡ ಇದೆ. ಆದ್ದರಿಂದ ಬರುವ ದಿನಗಳಲ್ಲಿ ಜಿಲ್ಲಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಳಿತುಕೊಂಡು ಇಂತಹ ಸಮಸ್ಯೆ ಮತ್ತೆ ಕ್ರಿಯೇಟ್ ಆಗದಂತೆ ನೋಡಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ನನ್ನದು!
Leave A Reply