ವೈಷ್ಣೋದೇವಿ ಯಾತ್ರಿಕರ ಜೀವ ಉಳಿಸಿ, ತನ್ನ ಜೀವ ಬಿಟ್ಟ ಆ ಯೋಧನಿಗೆ ಪ್ರಧಾನಮಂತ್ರಿ ಪದಕದ ಗೌರವ!
ನವದೆಹಲಿ: ನಮ್ಮ ಇಂದಿನ ನೆಮ್ಮದಿಯ ಜೀವನಕ್ಕಾಗಿ ತಮ್ಮ ಸುಂದರ ನಾಳೆಗಳನ್ನು ಬಲಿ ಕೊಡುವವರು ಸೈನಿಕರು. ಅಂತಹ ಸೈನಿಕರ ಶೌರ್ಯ ಹಾಗೂ ತ್ಯಾಗವನ್ನು ಪ್ರತಿ ಸರ್ಕಾರವೂ ಸ್ಮರಿಸಿದರೆ, ಪ್ರೋತ್ಸಾಹಿಸಿದರೆ, ನೆನಪಿಸಿದರೆ ಮಾತ್ರ ಸೈನಿಕರಿಗೆ ಗೌರವ ಕೊಟ್ಟಂತೆ.
ಹೀಗೆ ಸೈನಿಕರ ತ್ಯಾಗ ಸ್ಮರಿಸುವ ಹಾಗೂ ಅವರ ಶೌರ್ಯ ಪ್ರಶಂಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮುಂದಾಗಿದ್ದು, ಕಳೆದ ವರ್ಷ ವೈಷ್ಣೋದೇವಿ ಯಾತ್ರೆಗೆ ತೆರಳಿ ಭೂಕುಸಿತಕ್ಕೆ ಸಿಲುಕಿ ಪ್ರಾಣಾಪಾಯದಲ್ಲಿದ್ದ ಯಾತ್ರಿಕರನ್ನು ರಕ್ಷಿಸಿ, ತನ್ನ ಪ್ರಾಣವನ್ನೇ ಬಿಟ್ಟ ಸಿಆರ್ ಪಿಎಫ್ ಯೋಧನಿಗೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಪೊಲೀಸ್ ಮೆಡಲ್ ನೀಡಿದೆ.
ಹೌದು, 2016ರ ಆಗಸ್ಟ್ 14ರಂದು ಭೂಕುಸಿತದಿಂದ ಮಣ್ಣಿನೊಳಗೆ ಸಿಲುಕಿದವರನ್ನು ರಕ್ಷಿಸಿ, ತನ್ನ ಪ್ರಾಣವನ್ನೇ ಕಳೆದುಕೊಂಡ ಸಿಆರ್ ಪಿಎಫ್ ಮುಖ್ಯ ಪೇದೆ ಹರ್ವಿಂದರ್ ಸಿಂಗ್ ಅವರಿಗೆ ಪ್ರಧಾನಮಂತ್ರಿ ಮೆಡಲ್ ನೀಡಲಾಗಿದೆ ಎಂದು ಅರೆ ಸೈನಿಕ ಪಡೆಯ ವಕ್ತಾರರೊಬ್ಬರು ಮಾಹಿತಿ ಮಾಹಿತಿ ನೀಡಿದ್ದಾರೆ.
ಯಾತ್ರಿಕರ ಜೀವ ಉಳಿಸಲು ಹರ್ವಿಂದರ್ ಸಿಂಗ್ ತೋರಿದ ಧೈರ್ಯ, ಸಾಹಸ ಹಾಗೂ ಆತ ಜನರಿಗಾಗಿ ಮಾಡಿದ ಪರಮೋಚ್ಚ ತ್ಯಾಗ ಸ್ಮರಿಸಿ ಈ ಮೆಡಲ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ವೈಷ್ಣೋದೇವಿ ಯಾತ್ರೆ ಕೈಗೊಂಡಾಗ ಭೂಕುಸಿತ ಉಂಟಾಗಿದ್ದು, ಕೆಲವು ಮಹಿಳೆಯರು ಹಾಗೂ ಮಕ್ಕಳು ಮಣ್ಣಿನಲ್ಲಿ ಸಿಲುಕಿದ್ದರು. ಇದನ್ನು ಗಮನಿಸಿದ್ದ ಹರ್ವಿಂದರ್ ಸಿಂಗ್ ಅವರನ್ನು ಕಾಪಾಡಿದ್ದರು. ಆದರೆ ದುರದೃಷ್ಟವಶಾತ್ ಮಣ್ಣು ಹಾಗೂ ಕಲ್ಲು ಮೈಮೇಲೆ ಬಿದ್ದ ಕಾರಣ ಹರ್ವಿಂದರ್ ಸಿಂಗ್ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದರು.
Leave A Reply