ಆರೆಸ್ಸೆಸ್ ಸಭೆಯಲ್ಲಿ ಪ್ರಣಬ್ ಭಾಗವಹಿಸಿದ್ದನ್ನು ಎಲ್.ಕೆ.ಆಡ್ವಾಣಿ ಹೇಗೆ ಬಣ್ಣಿಸಿದ್ದಾರೆ ನೋಡಿ!
ಮಹಾರಾಷ್ಟ್ರದ ನಾಗಪುರದಲ್ಲಿರುವ ಆರೆಸ್ಸೆಸ್ ಮುಖ್ಯ ಕಚೇರಿಯಲ್ಲಿ ನಡೆದ ಆರೆಸ್ಸೆಸ್ ಸಭೆಯಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಿದ್ದು ಕಾಂಗ್ರೆಸ್ಸಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಎಂಬುದಕ್ಕೆ ಹಲವು ಮುಖಂಡರು ನೀಡಿದ ಹೇಳಿಕೆಗಳೇ ಸಾಕ್ಷಿಯಾಗಿವೆ. ಅಷ್ಟರಮಟ್ಟಿಗೆ ಕಾಂಗ್ರೆಸ್ ಪ್ರಣಬ್ ಭೇಟಿ ವಿರುದ್ಧ ಅಸಹಿಷ್ಣುತೆ ತೋರಿಸುತ್ತಿದ್ದಾರೆ.
ಆದರೆ ಪ್ರಣಬ್ ಮುಖರ್ಜಿಯವರ ಹೃದಯ ವೈಶಾಲ್ಯವನ್ನು ಆರೆಸ್ಸೆಸ್ ಸ್ವಾಗತಿಸಿದೆ. ಇದರ ಬೆನ್ನಲ್ಲೇ ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಆಡ್ವಾಣಿ ಸಹ ಪ್ರಣಬ್ ಭೇಟಿಗೆ ಮೆಚ್ಚುಗೆ ಸೂಚಿಸಿದ್ದು, “ಸಮಕಾಲಿನ ಭಾರತದ ಇತಿಹಾಸದಲ್ಲಿ ಪ್ರಣಬ್ ಮುಖರ್ಜಿ ಭೇಟಿ ಐತಿಹಾಸಿಕ’ ಎಂದು ಬಣ್ಣಿಸಿದ್ದಾರೆ.
ನಾಗಪುರದಲ್ಲಿ ನಡೆದ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿಯವರು ಭಾಗವಹಿಸಿದ್ದು ಸ್ವಾಗತಾರ್ಹ. ಇದು ಭಾರತದಲ್ಲಿರುವ ಉದಾತ್ತ ಚಿಂತನೆ ಹಾಗೂ ರಾಷ್ಟ್ರೀಯವಾದಕ್ಕೆ ನೀಡುವ ಪ್ರಾಮುಖ್ಯತೆ ಕುರಿತ ಹೃದಯ ವೈಶಾಲ್ಯ ತೋರಿಸುತ್ತದೆ ಎಂದು ಆಡ್ವಾಣಿ ವಿಶ್ಲೇಷಿಸಿದ್ದಾರೆ.
ಆರೆಸ್ಸೆಸ್ ಸಭೆಯಲ್ಲಿ ಪ್ರಣಬ್ ಮುಖರ್ಜಿ ಹಾಗೂ ಮೋಹನ್ ಭಾಗವತ್ ಅವರು ದೇಶದಲ್ಲಿರುವ ಏಕತೆಯ ಪ್ರಾಮುಖ್ಯತೆಯನ್ನು ವಿಶ್ವಕ್ಕೇ ಸಾರಿದ್ದಾರೆ. ಬಹುಸಂಸ್ಕೃತಿ ಮೇಲಿರುವ ನಂಬಿಕೆ, ವೈವಿಧ್ಯತೆ ಸೇರಿ ಹಲವು ಅಂಶಗಳ ಕುರಿತು ಇಬ್ಬರ ಅಭಿಪ್ರಾಯ ಮೆಚ್ಚಲರ್ಹ ಎಂದು ತಿಳಿಸಿದ್ದಾರೆ.
ಇಂತಹ ಸಭೆಗಳು ಹಾಗೂ ಅವುಗಳಲ್ಲಿ ಭಾಗವಹಿಸುವ ಹೃದಯ ವೈಶಾಲ್ಯದಿಂದ ನಮ್ಮ ದೃಷ್ಟಿಕೋನ ವಿಶಾಲವಾಗುತ್ತದೆ, ಪರಸ್ಪರ ತಿಳಿದುಕೊಳ್ಳುವಿಕೆ ವೃದ್ಧಿಯಾಗುತ್ತದೆ. ಇದರಿಂದ ದೇಶದಲ್ಲಿ ಸಹಿಷ್ಣುತೆ, ಸೌಹಾರ್ದತೆ, ಸಹೋದರತ್ವ ಮನೋಭಾವನೆ ಜಾಸ್ತಿಯಾಗುತ್ತದೆ. ಇಂತಹ ಮಹತ್ ಕಾರ್ಯಕ್ಕೆ ಪ್ರಣಬ್ ಮುಖರ್ಜಿಯವರು ಸಾಕ್ಷಿಯಾಗಿದ್ದಾರೆ ಎಂದು ಎಲ್.ಕೆ.ಆಡ್ವಾಣಿ ಬಣ್ಣಿಸಿದ್ದಾರೆ.
ಆರೆಸ್ಸೆಸ್ ಸಭೆಯಲ್ಲಿ ಪ್ರಣಬ್ ಮುಖರ್ಜಿ ಅವರು ಭಾರತದಲ್ಲಿರುವ ಸಹಿಷ್ಣುತೆ, ವಿವಿಧತೆಯಲ್ಲಿರುವ ಏಕತೆ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದರು. ಮಾಜಿ ರಾಷ್ಟ್ರಪತಿಯವರ ಈ ಭಾಷಣ ದೇಶದ ಗಮನ ಸೆಳೆದಿತ್ತು.
Leave A Reply