ಮಾವೋವಾದಿಗಳಿಗೆ ನಿರಂತರ ಹೊಡೆತ: ಐವರು ಕೆಂಪು ಉಗ್ರರ ಬಂಧನ
ರಾಯಪುರ: ದೇಶದಲ್ಲಿ ಕೆಂಪು ಉಗ್ರರ ಆಟಾಟೋಪಕ್ಕೆ ಭರ್ಜರಿ ಹೊಡೆತ ನೀಡುತ್ತಿರುವ ಕೇಂದ್ರ ಸರ್ಕಾರದ ಕ್ರಮಗಳು ಭಾರಿ ಯಶಸ್ವಿಯಾಗುತ್ತಿದ್ದು, ನಿರಂತರವಾಗಿ ನಕ್ಸಲರ ಹುಟ್ಟಗಿಸುವಲ್ಲಿ ಯಶಸ್ವಿಯಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ಹೂಡಿರುವ ನಕ್ಸಲರ ನಡ ಮುರಿಯುವ ಕಾರ್ಯವನ್ನು ಸೈನ್ಯ ಮತ್ತು ಆಯಾ ರಾಜ್ಯದ ಪೊಲೀಸರು ಯಶಸ್ವಿಯಾಗಿ ನಡೆಸುತ್ತಿದ್ದು, ಛತ್ತೀಸಘಡದ ಪೊಲೀಸರು ಮಂಗಳವಾರ ಐವರು ನಕ್ಸಲರನ್ನು ಬಂಧಿಸುವ ಮೂಲಕ ನಕ್ಸಲರಿಗೆ ಮತ್ತೆ ಬಿಸಿ ಮುಟ್ಟಿಸಿದ್ದಾರೆ.
ಛತ್ತೀಸಘಡದ ಬಸ್ತಾರ್ ವಲಯದ ದಂತೇವಾಡ ಜಿಲ್ಲೆಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದು, ಸುಕ್ಮಾ ಜಿಲ್ಲೆಯಲ್ಲಿ ಇಬ್ಬರು ಕೆಂಪು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಂತೇವಾಡದಲ್ಲಿ ಪೋಜ್ಜಾ ಸೋದಿ (24), ಬಮನ್ ಮುಚಕಿ (38), ಹಿರ್ಮಾ ಅಲಿಯಾಸ್ ಕೊರೆಮ್ ಸೋದಿ (37) ಎಂಬ ನಕ್ಸಲರನ್ನು ಸಿಆರ್ ಪಿಎಫ್ ಮತ್ತು ಸ್ಥಳೀಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಸುಕ್ಮಾ ಜಿಲ್ಲೆಯಲ್ಲಿ ಮಾದ್ವಿ ಹಂಡಾ(35) ಮತ್ತು ಸೋದಿ ಗಂಗಾ (42) ಅವರನ್ನು ಬಂಧಿಸಲಾಗಿದೆ.
ಬಂಧಿತರಾದ ಮುಚಕಿ ಮತ್ತು ಕೊರೆಮ್ ಸೋದಿ ಮೇ 22 ರಂದು ನಡೆದ ಕೊಯಕೊಂಡಾ ಗ್ರಾಮದ ಜನಾದಾಲತ್ ನಲ್ಲಿ ಗ್ರಾಮಸ್ಥರನ್ನು ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ. ಅಲ್ಲದೇ ಬಸ್ತಾರ ಪ್ರದೇಶದಲ್ಲಿ ನಡೆಯುತ್ತಿದ್ದ ಅಭಿವೃದ್ಧಿ ಕಾರ್ಯಗಳ ಯಂತ್ರಗಳನ್ನು ನಾಶ ಪಡಿಸಿರುವುದು, ಕಳ್ಳತನ ಮಾಡಿರುವ ಆರೋಪವನ್ನು ಬಂಧಿತರು ಹೊಂದಿದ್ದಾರೆ.
Leave A Reply