ಕರಾವಳಿಯಲ್ಲಿ ರಕ್ತಚಂದನದ ಗಿಡದ ಹೆಸರಿನಲ್ಲಿ ಪಂಗನಾಮ!!
ನೀವು ಒಂದು ಹಳ್ಳಿಯಲ್ಲಿ ವಾಸಿಸುತ್ತಿದ್ದಿರಿ. ನಿಮಗೆ ಒಂದಿಷ್ಟು ಜಮೀನಿದೆ. ಅದರಲ್ಲಿ ಒಂದಿಷ್ಟು ಭೂಮಿ ಪಾಳು ಬಿದ್ದಂಗೆ ಇದೆ. ನಿಮಗೆ ಆ ಖಾಲಿ ಜಮೀನಿನಲ್ಲಿ ಯಾವತ್ತೂ ಕೂಡ ಭವಿಷ್ಯ ಇಲ್ಲ ಎಂದು ಅನಿಸುತ್ತದೆ. ಒಂದು ದಿನ ಒಬ್ಬ ದೇವ ಮಾನವನಂತೆ ನಿಮ್ಮ ಮನೆಯ ಎದುರು ಕಾಣಿಸಿಕೊಳ್ಳುತ್ತಾನೆ. ಖಾಲಿ ಬಿದ್ದಿರುವ ನಿಮ್ಮ ಭೂಮಿಯಲ್ಲಿ ಕೋಟ್ಯಾಂತರ ರೂಪಾಯಿ ಬೆಳೆಯುವುದು ಬಿಟ್ಟು ಹಾಗೆ ಬಿಟ್ಟಿದ್ದಿರಲ್ಲ ಎನ್ನುತ್ತಾನೆ. ನೀವು ಬೇಸರದಲ್ಲಿ ಈ ಜಮೀನಿನಲ್ಲಿ ಕೋಟಿ ರೂಪಾಯಿ ಬೆಳೆಯುವುದಾ? ಏನು ತಮಾಷೆ ಮಾಡುತ್ತಿದ್ದಿರಾ ಎಂದು ಕೇಳುತ್ತಿರಿ. ಆಗ ಅವನು ಒಂದು ರಕ್ತಚಂದನದ ಗಿಡವನ್ನು ನಿಮ್ಮ ಕೈಯಲ್ಲಿ ಕೊಡುತ್ತಾನೆ. ಇದಕ್ಕೆ 150 ರೂಪಾಯಿ ಇದೆ. ಈ ಗಿಡವನ್ನು ನೀವು ಬೆಳೆಸಿದರೆ ಅದು ಎಂಟು ವರ್ಷದ ಬಳಿಕ ದೊಡ್ಡ ಮರವಾಗುತ್ತದೆ. ಬಳಿಕ ಅದನ್ನು ನೀವು ಕೋಟಿ ರೂಪಾಯಿಗೆ ಮಾರಬಹುದು ಎನ್ನುತ್ತಾನೆ. ಆದರೆ ವಿಷಯ ಏನೆಂದರೆ ಹೇಗೂ ಬೆಳೆಸುತ್ತೀರಿ, ಒಮ್ಮೆಲ್ಲೇ ಐವತ್ತು ಅಥವಾ ನೂರು ಗಿಡಗಳನ್ನು ಬೆಳೆಸಿ. ಕೋಟಿಗಟ್ಟಲೆ ಹಣವನ್ನು ನಿಮ್ಮದಾಗಿಸಿಕೊಳ್ಳಿ ಎನ್ನುತ್ತಾನೆ. ನಿಮ್ಮ ಮನಸ್ಸಿನಲ್ಲಿ ಒಂದು ಕ್ಷಣ ಖುಷಿಯಾಗುತ್ತದೆ. ಲಡ್ಡು ಬಂದು ಬಾಯಿಗೆ ಬಿದ್ದಂತೆ ಆಗುತ್ತದೆ.
ಒಪ್ಪಂದ ಮಾಡೋಣ ಎನ್ನುತ್ತಾನೆ….
ಆದರೂ ನೀವು ಮುಖದಲ್ಲಿ ಖುಷಿ ತೋರಿಸದೇ ಬುದ್ಧಿವಂತರಂತೆ ನಟಿಸಿ ಇನ್ನೊಂದು ಪ್ರಶ್ನೆ ಕೇಳುತ್ತೀರಿ. “ಸ್ವಾಮಿ, ನಾವು ಎಂಟು ವರ್ಷಗಳ ಬಳಿಕ ಇದನ್ನು ಮಾರುವುದಕ್ಕೆ ಸರಕಾರ ಅಂದರೆ ಅರಣ್ಯ ಇಲಾಖೆ ಬಿಡುವುದಿಲ್ಲ, ಆಗ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾಗುತ್ತದೆ” ಎನ್ನುತ್ತೀರಿ. ಅದಕ್ಕೆ ಆ ಅಸಾಮಿಯ ಹತ್ತಿರ ಉತ್ತರ ಇದೆ. ನೀವು ಹೆದರಬೇಡಿ, ಅದನ್ನು ನಾವೇ ಬಂದು ಖರೀದಿಸುತ್ತೇವೆ, ಆ ಬಗ್ಗೆ ಟೆನ್ಷನ್ ನಿಮಗೆ ಬೇಡಾ. ನಿಮಗೆ ನಂಬಿಕೆ ಬರದಿದ್ದರೆ ನಾನು ನಾಳೆ ವಕೀಲರನ್ನು ಕರೆದುಕೊಂಡು ಬರುತ್ತೇನೆ. ಅವರೊಂದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕೂಡ ಕರೆದುಕೊಂಡು ಬರುತ್ತೇನೆ. ಅವರೆಲ್ಲರ ಸಮ್ಮುಖದಲ್ಲಿ ಲಿಖಿತವಾಗಿ ಬಾಂಡ್ ನಲ್ಲಿ ಸಹಿ ಹಾಕಿ ಒಪ್ಪಂದ ಮಾಡಿಕೊಳ್ಳೋಣ ಎನ್ನುತ್ತಾನೆ. ನಿಮಗೆ ವಕೀಲರು, ಅರಣ್ಯಾಧಿಕಾರಿಗಳ ಸಮ್ಮುಖ ಎಂದ ಕೂಡಲೇ ಅವನ ಮೇಲೆ ವಿಶ್ವಾಸ ಬರುತ್ತದೆ. ಅದರೂ ನೀವು ಸುಲಭವಾಗಿ ಒಪ್ಪಿದಂತೆ ತೋರಿಸುವುದಿಲ್ಲ. ಅದೆಲ್ಲ ಸರಿ, ಇದನ್ನು ನಾವು ಇಲ್ಲಿ ಬೆಳೆಸಿ ಅದು ದೊಡ್ಡದಾಗುವಷ್ಟರಲ್ಲಿ ಯಾರಾದರೂ ಕಳ್ಳರು ಬಂದು ಕಡಿದು ತೆಗೆದುಕೊಂಡು ಹೋದರೆ ನಮ್ಮ ಗತಿ ಏನು ಎನ್ನುತ್ತೀರಿ. ಇದು ನಿಮ್ಮ ಅಂತಿಮ ಪ್ರಶ್ನೆ ಎನ್ನುವುದು ಅವನಿಗೆ ಕೂಡ ಗೊತ್ತು. ಅದಕ್ಕೆ ಸರಿಯಾಗಿ ಅವನು ಕೂಡ ತನ್ನ ಭತ್ತಳಿಕೆಯ ಕೊನೆಯ ಬಾಣವನ್ನು ಬಿಡುತ್ತಾನೆ. ನೀವು ಏನು ಹೆದರಬೇಡಿ, ನೀವು ಗಿಡ ನೆಟ್ಟ ಕೂಡಲೇ ಅದಕ್ಕೆ ಕೌಂಪೌಂಡ್ ವಾಲ್ ಕಟ್ಟುವ ಜವಾಬ್ದಾರಿ ನಮ್ಮದು. ನೀವು ನೂರು ಗಿಡ ಖರೀದಿಸಿದರೆ ಕೌಂಪೌಂಡ್ ಕಟ್ಟಿ, ಸಿಸಿ ಕ್ಯಾಮೆರಾಗಳನ್ನು ಅದಕ್ಕೆ ಫಿಕ್ಸ್ ಮಾಡಿಸಿ, ಬೋರ್ ವೆಲ್ ತೋಡಿಸಿ, ಅಲ್ಲೊಂದು ಚಿಕ್ಕ ಮನೆ ಕಟ್ಟಿಸಿ ನಿಮಗೆ ಕೊಡುತ್ತೇವೆ. ಅದರೊಂದಿಗೆ ನೂರು ಗಿಡಗಳನ್ನು ಖರೀದಿಸಿದರೆ ಆರು ಲಕ್ಷ ರೂಪಾಯಿಗಳನ್ನು ಕ್ಯಾಶ್ ಆಗಿ ಕೊಡುತ್ತೇವೆ. ಗಿಡ ಮರವಾಗುವುದನ್ನು ನೋಡುತ್ತಾ ಆರಾಮವಾಗಿ ಇರಿ ಎಂದು ಅವನು ಹೇಳುತ್ತಾನೆ.
ಇಷ್ಟು ಕೇಳಿದ ನಂತರ ನಿಮ್ಮನ್ನು ಹಿಡಿಯುವವರು ಇರುವುದಿಲ್ಲ. ನಮಗೆ ನೂರು ಗಿಡ ಇರಲಿ ಎನ್ನುವ ಮೊದಲು ಸಣ್ಣದಾಗಿ ಮುಖದಲ್ಲಿ ಸಂಶಯ ಬಂದಂತೆ ಮಾಡುತ್ತೀರಿ. ಅಲ್ಲಿಗೆ ಅವನು ಬ್ರೆಡಿಗೆ ಜಾಮ್ ಸವರುವಂತೆ ಈ ಹಳ್ಳಿಯಲ್ಲಿ ಒಟ್ಟು ಮೂರು ಜನರಿಗೆ ಮಾತ್ರ ರಕ್ತಚಂದನದ ಗಿಡಗಳನ್ನು ಕೊಡಬೇಕೆಂದು ನಮ್ಮ ಸಂಸ್ಥೆ ನಿರ್ಧರಿಸಿದೆ. ಅದರಲ್ಲಿ ನೀವು ಒಬ್ಬರು ಅದೃಷ್ಟಶಾಲಿಗಳು ಎನ್ನುತ್ತಾ ಬೇಡಾವಾದರೆ ನಾನು ಬೇರೆಯವರಿಗೆ ಕೊಡುತ್ತೇನೆ ಎಂದು ಹೊರಡಲು ಅನುವಾಗುತ್ತಾನೆ.
ಅವನು ತಿರುಪತಿಯವನು…
ನೀವು ಅವಕಾಶ ಮಿಸ್ ಆದರೆ ಇನ್ನೆಂದೂ ಸಿಗಲಾರದು, ಬಂಗಾರದ ಅವಕಾಶ ತಪ್ಪಿಸಿ ನಂತರ ಪಶ್ಚಾತ್ತಾಪ ಪಡುವುದು ಯಾಕೆ ಎಂದು ಅಂದುಕೊಂಡು ಅವನನ್ನು ತಡೆದು ನಿಲ್ಲಿಸಿ ಈಗ ಎಷ್ಟು ಕೊಡಬೇಕು ಎನ್ನುತ್ತೀರಿ. ಅವನು ಈಗ ಮೂರು ಸಾವಿರ ಕೊಡಿ. ನಾಳೆ ಅಥವಾ ನಾಡಿದ್ದು ನೂರು ಗಿಡಗಳು ಬರುತ್ತವೆ. ಉಳಿದ ಹಣ ಕೊಡಿ ಎನ್ನುತ್ತಾನೆ. ನೀವು ಅವನ ಕೈಯಲ್ಲಿ ಮೂರು ಸಾವಿರ ಕೊಡುತ್ತೀರಿ. ಎರಡು ಮೂರು ದಿನಗಳ ಬಳಿಕ ಲಾರಿಯಲ್ಲಿ ಗಿಡಗಳು ಬರುತ್ತವೆ. ನೀವು ಉಳಿದ 12 ಸಾವಿರ ಕೊಡುತ್ತೀರಿ. ಅದರ ನಂತರ ಅವನು ಬಂದು ಕೌಂಪೌಂಡ್ ವಾಲ್ ಹಾಕುವುದನ್ನು ಕಾಯುತ್ತಾ ಕೂರುತ್ತೀರಿ. ಅವನು ಬರುವುದೇ ಇಲ್ಲ.
ನಂತರ ನಿಮಗೆಲ್ಲೋ ಮೋಸ ಹೋದ ಅನುಭವ ಶುರುವಾಗುತ್ತದೆ. ನೀವು ಅಲ್ಲಿಯ ತನಕ ಮನಸ್ಸಿನಲ್ಲಿ ಬಚ್ಚಿಟ್ಟಿದ್ದ ವಿಷಯವನ್ನು ನಾಲ್ಕು ಜನರ ಮುಂದೆ ಹೇಳುತ್ತೀರಿ. ಆಗ ನಿಮಗೆ ಆಶ್ಚರ್ಯವಾಗುತ್ತದೆ. ನೋಡಿದ್ರೆ ನಿಮ್ಮ ಹಾಗೆ ನಿಮ್ಮ ಹಳ್ಳಿಯಲ್ಲಿ ಅನೇಕರಿಗೆ ರಕ್ತಚಂದನದ ಗಿಡಗಳನ್ನು ಮಾರಲಾಗಿದೆ. ಎಲ್ಲರೂ ಗೋಡೆ ಮೇಲೆ ಬಂದು ಆರು ಲಕ್ಷ ರೂಪಾಯಿಗಳನ್ನು ಎಣಿಸುವ ಕನಸು ಕಾಣುತ್ತಿದ್ದಾರೆ ಎಂದು ಅನಿಸುತ್ತದೆ. ಮನೆಯ ಅಂಗಳದಲ್ಲಿ ಆತ ಕಳುಹಿಸಿದ ಲಾರಿಯಿಂದ ಇಳಿಸಿದ ಗಿಡಗಳು ನಿಮ್ಮನ್ನೇ ನೋಡಿ ಅಣಕಿಸಿದಂತೆ ಕಾಣುತ್ತದೆ. ರಕ್ತಚಂದನದ ಗಿಡಗಳು ಮೂರು ರೂಪಾಯಿಗೆ ಸಿಗುವಾಗ 150 ರೂಪಾಯಿಗೆ ಯಾಕೆ ತೆಗೆದುಕೊಂಡ್ರಿ ಎಂದು ಯಾರೋ ಕೇಳಿದಾಗ ನಿಮಗೆ ಹೊಟ್ಟೆ ಉರಿಯಲು ಶುರುವಾಗುತ್ತದೆ. ಅಷ್ಟಕ್ಕೂ ನಿಮ್ಮ ಮನೆಯಂಗಳದಲ್ಲಿ ಕಾಣಿಸಿಕೊಂಡು ನಿಮಗೆ ಮೂರು ಲೋಕ ತೋರಿಸಿದ, ಮೂರು ರೂಪಾಯಿಯ ಗಿಡವನ್ನು ನೂರೈವತ್ತು ರೂಪಾಯಿಗೆ ಮಾರಿದ, ಆರು ಲಕ್ಷದ ಆಸೆ ಹುಟ್ಟಿಸಿದ ವ್ಯಕ್ತಿ ಆಂಧ್ರದ ತಿರುಪತಿಯವನಂತೆ!
Leave A Reply