ನರೇಂದ್ರ ಮೋದಿ ಅವರ ಸಣ್ಣ ಸವಾಲು ಸ್ವೀಕರಿಸಿ ಮೇಲ್ಪಂಕ್ತಿ ಹಾಕಬಹುದಿತ್ತಲ್ಲವೇ ಕುಮಾರಸ್ವಾಮಿಯವರೇ?
ನರೇಂದ್ರ ಮೋದಿ ಅವರೇ ನೀವು ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವುದು ಸಂತಸದಾಯಕ. ನಾನೂ ಪ್ರತಿದಿನ ಯೋಗ ಹಾಗೂ ಟ್ರೆಡ್ ಮಿಲ್ ಬಳಸುತ್ತೇನೆ. ಆದರೆ ನಾನು ರಾಜ್ಯ ಫಿಟ್ ಆಗಿ ಇಡಲು ಬಯಸುತ್ತೇನೆ…
ಮೊದಲಿಗೆ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ಅವರಿಂದ ಆರಂಭವಾಗಿ, ಬಳಿಕ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ, ಪ್ರಿಯಾಂಕಾ ಚೋಪ್ರಾ, ನಟ ಸುದೀಪ್ ಸೇರಿ ದೇಶಾದ್ಯಂತ ಹಲವು ಜನ ಹಮ್ ಫಿಟ್ ತೋ, ಇಂಡಿಯಾ ಫಿಟ್ ಅಭಿಯಾನಕ್ಕೆ ಬೆಂಬಲ ಸೂಚಿಸಿದರು. ಆ ಮೂಲಕ ಸದೃಢ ಭಾರತಕ್ಕಾಗಿ ವೇಗ, ವ್ಯಾಯಾಮ ಮಾಡಬೇಕು ಎಂಬ ಕುರಿತು ಜಾಗೃತಿ ಮೂಡಿಸಿದರು.
ಆದರೆ ದೇಶದ ಪ್ರಧಾನಿಯಂತಹ ಪ್ರಧಾನಿಯವರೇ ಫಿಟ್ ನೆಸ್ ಕುರಿತು ಹಾಕಿದ ಪುಟ್ಟ ಸವಾಲಿಗೆ, ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಈ ಮೇಲಿನಂತೆ ಟ್ವಿಟರ್ ನಲ್ಲಿ ಒಕ್ಕಣೆ ಹಾಕಿದ್ದಾರೆ. ಆ ಮೂಲಕ ತಾವು ವ್ಯಾಯಾಮ ಮಾಡಲ್ಲ ಎಂದು ತಿರಸ್ಕರಿಸಿದ್ದಾರೆ.
ಹೀಗೆ ಕುಮಾರಸ್ವಾಮಿಯವರು ಪ್ರಧಾನಿ ನರೇಂದ್ರ ಮೋದಿ ಅವರ ಸವಾಲು ತಿರಸ್ಕರಿಸಲು, ಮೋದಿ ಅವರೇನು ಅಂತಹ ಕಠಿಣ ಸವಾಲು ಹಾಕಿರಲಿಲ್ಲ. ವೈಯಕ್ತಿಕ ಹಿತಾಸಕ್ತಿಗಾಗಿ ಯಾವುದೋ ಬೇಡಿಕೆ ಇಟ್ಟಿರಲಿಲ್ಲ. ರಾಜಕೀಯ ಕಾರಣಕ್ಕಾಗಿಯೂ ಮೋದಿ ಸವಾಲು ಹಾಕಿರಲಿಲ್ಲ.
ದೇಶ ಫಿಟ್ ಇರಲಿ ಎಂದು ಚಾಲನೆ ನೀಡಲಾದ ಹಮ್ ಫಿಟ್ ತೋ ಇಂಡಿಯಾ ಫಿಟ್ ಯೋಜನೆಯ ಬೆಂಬಲಕ್ಕಾಗಿ ವ್ಯಾಯಾಮ ಮಾಡಿ ವೀಡಿಯೋ ಅಪ್ ಲೋಡ್ ಮಾಡಲು ಸವಾಲು ಹಾಕಿದ್ದರು. ಕುಮಾರಸ್ವಾಮಿಯವರು ವೀಡಿಯೋ ಅಪ್ ಲೋಡ್ ಮಾಡಿ, ಬೇರೆಯವರಿಗೆ ಸವಾಲು ಹಾಕುವ ಮೂಲಕ ಯೋಜನೆಗೆ ಮತ್ತಷ್ಟು ಜನರ ಬೆಂಬಲ ನೀಡಲು ಸಹಕಾರಿಯಾಗಲಿ ಎಂದು ಸವಾಲು ಹಾಕಿದ್ದರು.
ಆದರೆ ದಿನದ 24 ಗಂಟೆಯೂ ರಾಜ್ಯದ ಅಭಿವೃದ್ಧಿಗಾಗಿಯೇ ಮಿಸಲಿಟ್ಟಿರುವಂತೆ ಮಾತನಾಡಿರುವ ಕುಮಾರಸ್ವಾಮಿಯವರು ಐದು ನಿಮಿಷ ವ್ಯಾಯಾಮ ಮಾಡಿ ವೀಡಿಯೋ ಟ್ವೀಟ್ ಮಾಡಲು ಸಹ ಆಗಲ್ಲ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ. ಆದರೆ ರಾಜ್ಯದಲ್ಲಿ ಕುಮಾರಸ್ವಾಮಿಯವರು ಮಾತ್ರ ಯಾರಿಗೆ ಯಾವ ಖಾತೆ ನೀಡಬೇಕು, ಉಳಿದಿರುವ ಖಾತೆಗಳನ್ನು ಹೇಗೆ ಹಂಚಬೇಕು? ಮೆಲ್ಲಗೆ ಆವರಿಸಿರುವ ಭಿನ್ನಮತ ಹೇಗೆ ಶಮನ ಮಾಡಬೇಕು ಎಂಬ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಅದಕ್ಕಾಗಿಯೇ ತಾವೇ ನೀಡಿದ ಸಾಲ ಮನ್ನಾ ಭರವಸೆ ಮುಂದೂಡಿದ್ದಾರೆ.
ಇಂತಹ ಕುಮಾರಸ್ವಾಮಿಯವರು ಮೋದಿ ಅವರ ಸವಾಲನ್ನು ಸ್ವೀಕರಿಸಬೇಕಿತ್ತು. ತಾವೇ ಹೇಳಿದ ಹಾಗೆ ಬೆಳಗ್ಗೆ ಎದ್ದಾಗ ಮಾಡುವ ವ್ಯಾಯಾಮದ ವೀಡಿಯೋ ಟ್ವೀಟ್ ಮಾಡಬಹುದಿತ್ತು. ಆ ಮೂಲಕ ತಾವೂ ನಾಲ್ವರು ಕರ್ನಾಟಕದ ರಾಜಕಾರಣಿಗಳಿಗೆ ಸವಾಲು ಹಾಕುವ ಮೂಲಕ ಅವರ ಡೊಳ್ಳು ಹೊಟ್ಟೆ ಕರಗಿಸಲು ಜಾಗೃತಿ ಮೂಡಿಸಬಹುದಿತ್ತು. ಆಗ ಕುಮಾರಸ್ವಾಮಿಯವರು ಯುವಕರಿಗೂ ಸ್ಫೂರ್ತಿಯಾಗುತ್ತಿದ್ದರು. ಆದರೆ ಕುಮಾರಸ್ವಾಮಿಯವರು ಅಂತಹ ಮೇಲ್ಪಂಕ್ತಿಯನ್ನೇ ಹಾಕಲಿಲ್ಲ. ಪ್ರಬುದ್ಧ ರಾಜಕಾರಣಿಯಂತೆ ವರ್ತಿಸಲಿಲ್ಲ.
Leave A Reply