ಕಾಂಗ್ರೆಸ್ ಇಫ್ತಾರ್ ಕೂಟವನ್ನು ಕಪಟತನದ ಪರಮಾವಧಿ ಎಂದು ಯಾರು ವಿಶ್ಲೇಷಿಸಿದ್ದಾರೆ ಗೊತ್ತಾ?
ಹೈದರಾಬಾದ್: ಕಾಂಗ್ರೆಸ್ ಇತ್ತೀಚೆಗೆ ಮುಸ್ಲಿಮರಿಗಾಗಿ ಇಫ್ತಾರ್ ಕೂಟ ಆಯೋಜಿಸಿತ್ತು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಸಹ ಆಯೋಜಿಸಿದ್ದರು. ಕೆಲವರು ಇದು ಮುಸ್ಲಿಮರ ಓಲೈಕೆಗಾಗಿ ಕಾಂಗ್ರೆಸ್ ಪ್ರತಿವರ್ಷ ಮಾಡುವ ನಾಟಕ ಎಂಬೆಲ್ಲ ಟೀಕೆಗಳು ವ್ಯಕ್ತವಾಗಿದ್ದವು. ಜನರೂ ಇದೆಲ್ಲ ಸಾಮಾನ್ಯ ಎಂದು ಸುಮ್ಮನಾಗಿದ್ದರು.
ಆದರೆ ಕಾಂಗ್ರೆಸ್ ಆಯೋಜಿಸಿರುವ ಇಫ್ತಾರ್ ಕೂಟವನ್ನು ಮುಸ್ಲಿಂ ನಾಯಕರೇ ಟೀಕಿಸಿದ್ದು, ಕಾಂಗ್ರೆಸ್ ಇಫ್ತಾರ್ ಕೂಟ ಆಯೋಜಿಸಿದ್ದು ಕಪಟತನದ ಪರಮಾವಧಿ ಎಂದು ಎಐಎಂಐಎಂ ಮುಖ್ಯಸ್ಥ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ವಿಶ್ಲೇಷಿಸಿದ್ದಾರೆ.
ಕಾಂಗ್ರೆಸ್ಸಿಗೆ ಮುಸ್ಲಿಮರ ಏಳಿಗೆ ಬೇಕಾಗಿರಲಿಲ್ಲ. ಈ ಇಫ್ತಾರ್ ಕೂಟ ಆಯೋಜಿಸಿರುವುದು ಕಪಟತನದಿಂದ ಕೂಡಿದೆ. ಆಯಾ ಧರ್ಮದ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಹೀಗೆ ಮಾಡಿದೆ. ಹಿಂದೂಗಳು ಹಾಗೂ ಮುಸ್ಲಿಮರು ಸೇರಿ ಯಾವುದೇ ಧರ್ಮೀಯರ ಮತ ಸೆಳೆಯಲು ಇಂತಹ ಧಾರ್ಮಿಕ ಕಾರ್ಯಕ್ರಮ ಆಯೋಜಿಸುತ್ತದೆ ಎಂದು ಓವೈಸಿ ಟೀಕಿಸಿದ್ದಾರೆ.
ಅದರಲ್ಲೂ ಇತ್ತೀಚೆಗಷ್ಟೇ ಪ್ರಣಬ್ ಮುಖರ್ಜಿಯವರು ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ಮೂಲಕ ಅವರು ಹಿಂದೂಗಳು ಪರ ಎಂಬ ಸಂದೇಶ ಬಿಂಬಿತವಾಗಿತ್ತು. ಆದರೆ ಇದು ಎಲ್ಲಿ ಮುಸ್ಲಿಮರ ಮುನಿಸಿಗೆ ಕಾರಣವಾಗುತ್ತೋ ಎಂಬ ಕಾರಣದಿಂದ ಪ್ರಣಬ್ ಮುಖರ್ಜಿಯವರನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸಿ, ರಾಹುಲ್ ಗಾಂಧಿ ಪಕ್ಕದಲ್ಲೇ ಕೂರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಹೀಗೆ ಇಫ್ತಾರ್ ಕೂಟಕ್ಕೆ ಪ್ರಣಬ್ ಮುಖರ್ಜಿಯವರನ್ನು ಆಹ್ವಾನಿಸುವ ಮೂಲಕ ಕಾಂಗ್ರೆಸ್ ಮತಗಳಿಗಾಗಿ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿದೆ. ಇದರಿಂದಲೇ ಕಾಂಗ್ರೆಸ್ ಎಂತಹ ಕಪಟಿ ಎಂದು ಗೊತ್ತಾಗುತ್ತದೆ ಎಂದು ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ.
Leave A Reply