ಕಣಿವೆಯಲ್ಲಿ ಪಾಕ್ ಷಡ್ಯಂತ್ರ: ಯೋಧ ಔರಂಗಜೇಬ್ ಕೊಲೆ ಹಿಂದೆ ಪಾಕಿಸ್ತಾನದ ಐಎಸ್ಐ ಕೈವಾಡ
ದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲಯ ಕಲಾಂಪುರದಲ್ಲಿ ಇತ್ತೀಚೆಗೆ ಯೋಧ ಔರಂಗಜೇಬ್ ಅವರನ್ನು ಅಪಹರಿಸಿ, ಕೆಲವೇ ಗಂಟೆಗಳ ನಂತರ ಕೊಲೆ ಮಾಡಿರುವುದರ ಹಿಂದೆ ಪಾಕಿಸ್ತಾನದ ಗುಪ್ತರಚರ ಸಂಸ್ಥೆ ಐಎಸ್ ಐ ಭಾಗಿಯಾಗಿರುವ ಅನುಮಾನವನ್ನು ಭಾರತದ ಗುಪ್ತಚರ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
‘ಜಿಹಾದ್ ಫಾರ್ ಲಿಬರೇಷನ್ ಆಫ್ ಕಾಶ್ಮೀರ’ ಹೆಸರಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಭಾರತದ ವಿರುದ್ಧ ಷಡ್ಯಂತ್ರ ರೂಪಿಸಿದ್ದು, ಹಲವು ವಾಮಮಾರ್ಗಗಳ ಮೂಲಕ ದಾಳಿಗಳನ್ನು ಮಾಡಲು ಯತ್ನಿಸುತ್ತಿದೆ. ಇದೀಗ ಯೋಧ ಔರಂಗಜೇಬ್ ಅವರನ್ನು ಅಪಹರಿಸಿ, ಕೊಲೆ ಮಾಡಿರುವುದೂ ಸಹ ಅದರ ಭಾಗ ಮತ್ತು ಭಾರತೀಯ ಸೇನಾ ಪಡೆಗಳಿಗೆ ಒಂದು ಪಾಠವಾಗಬೇಕು ಎಂಬ ಉದ್ದೇಶ ಐಎಸ್ ಐ ಹೊಂದಿದೆ ಎಂಬ ಮಾಹಿತಿ ತಿಳಿದು ಬಂದಿದೆ
ಕಾಶ್ಮೀರ ಕಣಿವೆಯಲ್ಲಿ ಯೋಧ ಔರಂಗಜೇಬ್ ಅವರನ್ನು ಅಮಾನುಷವಾಗಿ ಕೊಲೆ ಮಾಡುವ ಮೂಲಕ ಪಾಕಿಸ್ತಾನ ಭಯೋತ್ಪಾದರ ಜೊತೆಗಿದೆ ಎಂಬ ಬಲಿಷ್ಠ ಸಂದೇಶವನ್ನು ಪಾಕಿಸ್ತಾನದ ಐಎಸ್ ಐ ಸಂಸ್ಥೆ ಭಾರತಕ್ಕೆ ರವಾನಿಸಿದೆ. ಅಲ್ಲದೇ ತನ್ನ ಕಾರ್ಯ ಚಟುವಟಿಕೆಗಳು ಕಾಶ್ಮೀರದ ಕಣಿವೆಯಲ್ಲಿ ಜಾರಿಯಿರಲಿವೆ ಎಂಬ ಸಂದೇಶವನ್ನು ಈ ಮೂಲಕ ನೀಡಿದೆ ಎನ್ನಲಾಗಿದೆ.
ಹುತಾತ್ಮರಾಗಿರುವ ಯೋಧ ಔರಂಗಜೇಬ್ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ಸಮೀರ್ ಟೈಗರ್ ಹತ್ಯೆಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಆದ್ದರಿಂದಲೇ ಗುರುವಾರ ಔರಂಗಜೇಬ್ ಅವರನ್ನು ಸುತ್ತುವರಿದಿದ್ದ ಭಯೋತ್ಪಾದಕರು ಗನ್ ತೋರಿಸಿ ಅವರನ್ನು ಅಪರಹರಿಸಿ, ಅಮಾನುಷ ರೀತಿಯಲ್ಲಿ ಕೊಲೆ ಮಾಡಿದ್ದರು.
Leave A Reply