ತಂದೆಯ ವೀರಗಾಥೆಯನ್ನು ಅಜ್ಜನ ಮೂಲಕ ಕೇಳಿ ತಾನೂ ಸೇನೆ ಸೇರಿದ ವೀರನ ಕತೆಯಿದು…
ಕುಟುಂಬದಲ್ಲಿ ಒಬ್ಬ ವ್ಯಕ್ತಿ ಸೈನ್ಯದಲ್ಲಿದ್ದರೆ ಆ ಕುಟುಂಬವೇ ಹೆಮ್ಮೆ ಪಡುತ್ತದೆ. ಆದರೆ ಅದೇ ಸೈನಿಕ ಯುದ್ಧದಲ್ಲಿ ಹುತಾತ್ಮನಾದರೆ ಇಡೀ ಕುಟುಂಬ ಏಕೆ, ದೇಶವೇ ಕಣ್ಣಿರಿಡುತ್ತದೆ. ಆದರೂ ದೇಶಕ್ಕಾಗಿ ಹುತಾತ್ಮನಾದನಲ್ಲ ಯೋಧ ಎಂದು ಹೆಮ್ಮೆಪಡುತ್ತೇವೆ. ಅಷ್ಟರಮಟ್ಟಿಗೆ ಯೋಧನ ತ್ಯಾಗ ದೇಶದಲ್ಲಿ ಸ್ಮರಣಾರ್ಹವಾಗಿದೆ.
ಆದರೆ ಆ ಯೋಧ 1996ರಲ್ಲಿ ಜಮ್ಮುಕಾಶ್ಮೀರದಲ್ಲಿ ಹುತಾತ್ಮನಾದಾಗಾಗ ಆ ಪುಟ್ಟ ಮಗುವಿಗೆ ಕೇವಲ 9 ತಿಂಗಳು ವಯಸ್ಸು. ಅಪ್ಪನ ಎದೆಗೆ ಒದ್ದು ಆಟವಾಡೋ ವಯಸ್ಸಲ್ಲಿ ತಂದೆಯನ್ನೇ ಕಳೆದುಕೊಂಡ ಆ ಮಗುವಿಗೆ ವಿಧಿಯೇ ದ್ರೋಹ ಬಗೆದಿತ್ತು. ಇಷ್ಟಾದರೂ ಈ ಮಗುವಿನ ಆ ಮಹಾತಾಯಿ ಇದ್ದೊಬ್ಬ ಮಗನನ್ನೂ ಸೇನೆಗೆ ಸೇರಿಸುವ ನಿಶ್ಚಿಯ ಮಾಡಿ ದಿಟ್ಟತನ ಮೆರೆದರು.
ಈ ಕತೆ ಬಿಎಸ್ಎಫ್ ಡೆಪ್ಯೂಟಿ ಕಮಾಂಡರ್ ಆಗಿದ್ದ ಸುಭಾಶ್ ಶರ್ಮಾ ಪುತ್ರ ಕ್ಷಿತಿಜ್ ಶರ್ಮಾರದ್ದು. ಈತನೂ ತಂದೆಯಂತೆಯೇ ಸೇನೆಯಲ್ಲಿ ಸೇರಿ ದೇಶಸೇವೆ ಮಾಡಲಿ ಎಂದು ಶಪಥಗೈದ ಆ ತಾಯಿ ಹೆಸರು ಬಬಿತಾ ಶರ್ಮಾ. 22 ವರ್ಷದ ಕ್ಷಿತಿಜ್ ಶರ್ಮಾ ಮೊನ್ನೆಯಷ್ಟೆಯೇ ಭಾರತೀಯ ಮಿಲಿಟರಿ ಅಕಾಡೆಮಿ (ಐಎಂಎ) ಪರೀಕ್ಷೆಯಲ್ಲಿ ಉತ್ತೀರ್ಣನಾಗಿ, ಲೆಫ್ಟಿನೆಂಟ್ ಕಮಾಂಡರ್ ಎನಿಸಿದ್ದಾನೆ.
ನನ್ನ ಗಂಡ ಹುತಾತ್ಮನಾದ ಬಳಿಕ ನಾನೊಬ್ಬ ವಿಧವೆ ಎಂದು ದುಃಖಪಡುತ್ತ ಕೂರಲಿಲ್ಲ. ದೇಶಕ್ಕಾಗಿ ಮಡಿದ ನನ್ನ ಗಂಡನ ಬಗ್ಗೆ ನನಗೆ ಇಂದಿಗೂ ಹೆಮ್ಮೆಯಿದೆ. ಅಂತಹ ಹೆಮ್ಮೆಪಡುವ ಯೋಧನಂತೆಯೇ ನನ್ನ ಮಗನೂ ಸೇನೆ ಸೇರಲಿ ಎಂದು ಆಗಲೇ ಶಪಥ ಮಾಡಿದೆ ಎನ್ನುತ್ತಾರೆ ಬಬಿತಾ ಶರ್ಮಾ.
ಇತ್ತ ಕ್ಷಿತಿಜ್ ಶರ್ಮಾನೂ ಅಷ್ಟೇ, ನನ್ನ ತಂದೆಯ ದಿಟ್ಟತನದ ಬಗ್ಗೆ ನನ್ನ ತಾತ ವಿವರಿಸಿ ಹೇಳುತ್ತಿದ್ದರು. ಅವರ ಮಾತು ಕೇಳಿದಾಗಲೆಲ್ಲ, ತಂದೆಯ ಕೊಡುಗೆ ನೆನಪಾದಾಗಲೆಲ್ಲ ನಾನೂ ದೇಶಕ್ಕಾಗಿ ಏನಾದರೂ ಮಾಡಬೇಕು ಎನಿಸುತ್ತಿತ್ತು. ಅಮ್ಮನ ಆಸೆಯೂ ಅದೇ ಆಗಿದ್ದರಿಂದ ನಾನೂ ಸೇನೆಗೆ ಸೇರಿದೆ ಅಂತಾರೆ. ಈ ಕುಟುಂಬಕ್ಕೊಂದು ಸೆಲ್ಯೂಟ್ ಇರಲಿ.
Leave A Reply