ಜೆಎನ್ ಯು ವಿವಿಯಿಂದ ನಕ್ಸಲ್ ಗುಂಪಿಗೆ ನೇಮಕ ಮಾಡಲು ಮುಂದಾಗಿದ್ದಾರೆಯೇ ನಕ್ಸಲರು? ಏನೀ ಜಾಲ?
ಇತ್ತೀಚೆಗಷ್ಟೇ ನಕ್ಸಲರು ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಪೊಲೀಸರು ಬಹಿರಂಗಪಡಿಸಿದ ಮಾಹಿತಿ ದೇಶವನ್ನೇ ಬೆಚ್ಚಿಬೀಳಿಸಿತ್ತು. ನಕ್ಸಲರಿಗೇಕೆ ಮೋದಿ ವಿರುದ್ಧ ಇಷ್ಟು ದ್ವೇಷ ಎಂಬುದು ಅನುಮಾನ ಮೂಡಿಸಿತ್ತು.
ಆದರೆ ಈಗ ಪುಣೆ ಪೊಲೀಸರು ಇಂತಹುದೇ ಮತ್ತೊಂದು ಭಯಾನಕ ಸುದ್ದಿ ಬಹಿರಂಗ ಮಾಡಿದ್ದು, ದೆಹಲಿಯ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದಿಂದ ನಕ್ಸಲರ ಗುಂಪಿಗೆ ಕೆಲವು ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಕುರಿತ ವರದಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಜೆಎನ್ ಯು ವಿವಿಯಿಂದ ಆಸಕ್ತ ಕೆಲವು ವಿದ್ಯಾರ್ಥಿಗಳನ್ನು, ಉಪನ್ಯಾಸಕರನ್ನು ತಮ್ಮ ಗುಂಪಿಗೆ ನೇಮಕ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಭದ್ರತಾ ಪಡೆ ಸಿಬ್ಬಂದಿ ಇತ್ತೀಚೆಗಷ್ಟೇ ಮಾವೋವಾದಿಯೊಬ್ಬನನ್ನು ಹತ್ಯೆ ಮಾಡಿದ್ದು, ಆತನ ಸ್ಮರಣೆಗಾಗಿ ಶೀಘ್ರದಲ್ಲೇ ಜೆಎನ್ ಯುನಲ್ಲಿ ಅಲ್ಲಿನ ಉಪನ್ಯಾಸಕರು ಕಾರ್ಯಕ್ರಮವೊಂದನ್ನು ಆಯೋಜಿಸುವವರಿದ್ದರು. ಹೀಗೆ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳನ್ನು ನಕ್ಸಲಿಸಂನತ್ತ ಸೆಳೆಯುವುದು ಅವರ ಉದ್ದೇಶವಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಈಗಾಗಲೇ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಬಂಧನಕ್ಕೀಡಾಗಿರುವ ಮಾವೋವಾದಿ ರೋಣಾ ವಿಲ್ಸನ್ ಕೈವಾಡ ಸಹ ಇದರ ಹಿಂದೆ ಇದೆ ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ರೋಣಾ ವಿಲ್ಸನ್ ನನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
Leave A Reply