ರಂಜಾನ್ ದಿನವೂ ಕದನವಿರಾಮ ಉಲ್ಲಂಘನೆ, ಪಾಕಿಸ್ತಾನಿ ಸೈನಿಕರಿಗೆ ಸಿಹಿ ನೀಡದ ಭಾರತ!
ರಂಜಾನ್ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಭಾರತವೇನೋ ಉಗ್ರರ ವಿರುದ್ಧದ ಕಾರ್ಯಾಚರಣೆ ನಡೆಸದೆ ಪಾಕಿಸ್ತಾನ ಹಾಗೂ ಕಾಶ್ಮೀರದಲ ಜತೆ ಸೌಹಾರ್ದ ಬೆಳೆಸಲು ಮುಂದಾಗಿದ್ದರೆ, ಅತ್ತ ಕುತಂತ್ರಿ ಪಾಕಿಸ್ತಾನ ಮಾತ್ರ ಇದನ್ನೇ ದುರ್ಬಳಕೆ ಮಾಡಿಕೊಂಡು ಇಷ್ಟು ದಿನ ಅಪ್ರಚೋದಿತ ದಾಳಿ ಮಾಡಿದೆ. ಉಗ್ರರನ್ನು ಛೂ ಬಿಟ್ಟು ಭಾರತೀಯ ಸೈನಿಕರು ಹಾಗೂ ಜನರನ್ನು ಹತ್ಯೆ ಮಾಡಿದೆ.
ಅಷ್ಟೇ ಅಲ್ಲ, ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ದಿನದಂದೂ ಸಹ ಪಾಕಿಸ್ತಾನ ಗಡಿಯಲ್ಲಿ ಅಪ್ರಚೋದಿತ ದಾಳಿ ಮಾಡಿ ಭಾರತೀಯ ಯೋಧರೊಬ್ಬರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಭಾರತ ಸಂಪ್ರದಾಯದಂತೆ ಪಾಕಿಸ್ತಾನಕ್ಕೆ ಸಿಹಿ ನೀಡದೆ ಪ್ರತಿಭಟನೆ ವ್ಯಕ್ತಪಡಿಸಿದೆ.
ಪ್ರತಿ ವರ್ಷವೂ ವಾಘಾ ಗಡಿಯಲ್ಲಿ ಭಾರತದ ಬಿಎಸ್ಎಫ್ ಯೋಧರು ಪಾಕಿಸ್ತಾನಿ ಸೈನಿಕರಿಗೆ ಸಿಹಿ ಹಂಚಿ ಸೌಹಾರ್ದತೆ ಮೆರೆಯುತ್ತಿದ್ದರು. ಪಾಕಿಸ್ತಾನಿ ಸೈನಿಕರು ಸಹ ಭಾರತೀಯ ಯೋಧರಿಗೆ ಸಿಹಿ ಹಂಚುತ್ತಿದ್ದರು. ಆದರೆ ಈ ಬಾರಿ ಪಾಕಿಸ್ತಾನ ಹಬ್ಬವೂ ಎನ್ನದೆ, ಶಾಂತಿ ಮಾತುಕತೆ ಮರೆತು ದಾಳಿ ಮಾಡಿದ ಹಿನ್ನೆಲೆಯಲ್ಲಿ ಸಿಹಿ ನೀಡಿಲ್ಲ. ಪಾಕಿಸ್ತಾನಿ ಸೈನಿಕರು ಸಹ ಭಾರತೀಯ ಯೋಧರಿಗೆ ಸಿಹಿ ವಿತರಣೆ ಮಾಡಿಲ್ಲ.
ಇನ್ನು ರಂಜಾನ್ ದಿನವಾದ ಶನಿವಾರವೂ ಪಾಕಿಸ್ತಾನ, ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆ, ನೌಶೇರಾ ಪ್ರದೇಶದಲ್ಲಿ ಗಡಿ ನಿಯಮ ಉಲ್ಲಂಘಿಸಿ ಅಪ್ರಚೋದಿತವಾಗಿ ದಾಳಿ ಮಾಡಿದ್ದು, ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಅಲ್ಲದೆ ಕಳೆದೊಂದು ತಿಂಗಳಿಂದ ಹಲವು ಬಾರಿ ಪಾಕಿಸ್ತಾನಿ ಸೈನಿಕರು ಹಾಗೂ ಉಗ್ರರು ದಾಳಿ ಮಾಡಿ ಉದ್ಧಟತನ ಮಾಡಿದ್ದಾರೆ. ಭಾರತವೂ ಇದಕ್ಕೆ ಗುಂಡಿನ ಮೂಲಕವೇ ಪ್ರತ್ಯುತ್ತರ ನೀಡಿದೆ.
Leave A Reply