ಜನರದಷ್ಟೇ ಅಲ್ಲ ಅಧಿಕಾರಿಗಳ ವಿಶ್ವಾಸವೂ ಕಳೆದುಕೊಂಡ ಕೇಜ್ರಿವಾಲ್ ರ ಪ್ರತಿಭಟನೆಯೊಂದು ಪಶ್ಚಾತಾಪದ ಪ್ರಹಸನ
ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಗೆ ಹೊಸ ರೂಪ ನೀಡಲು ದೇಶದಲ್ಲಿ ಹೊಸ ನಾಯಕನೊಬ್ಬನ ಉದಯವಾಯಿತು ಎಂದು ಇಡೀ ದೇಶದಲ್ಲಿ ಅರವಿಂದ್ ಕೇಜ್ರಿವಾಲ್ ದೆಹಲಿಯ ಮುಖ್ಯಮಂತ್ರಿ ಗದ್ದುಗೆ ಏರಿದಾಗ ಭರವಸೆಯ ಅಲೆಯೊಂದು ಮೂಡಿತ್ತು. ಆದರೆ ಬೆಟ್ಟದಷ್ಟು ಆಸೆ ಹೊತ್ತಿದ್ದ ಜನರಿಗೆ ಕೇಜ್ರಿವಾಲ್ ತೃಣದಷ್ಟೂ ಕೂಡ ತೀರಿಸದೇ ಸೋತು ಸುಣ್ಣವಾಗಿದ್ದಾರೆ. ತಮ್ಮ ದೂರದೃಷ್ಟಿಯಿಲ್ಲ ಅನಾರೋಗ್ಯ ಪೀಡಿತ ಆಡಳಿತವನ್ನು ದೆಹಲಿ ಜನರಿಗೆ ನೀಡಿ, ಮತ್ತೆಂದು ನೂತನ ಚಳವಳಿಗಳ ಮೇಲೆ ಭರವಸೆ ಮೂಡದಂತ ಸ್ಥಿತಿ ನಿರ್ಮಿಸಿದ್ದಾರೆ.
ದೆಹಲಿಯ ಅಧಿಕಾರದ ಗದ್ದುಗೆ ಏರಿದ ದಿನದಿಂದ ಅರವಿಂದ ಕೇಜ್ರಿವಾಲ್ ಸುಭದ್ರ ಆಡಳಿತ ನೀಡುವುದಿರಲಿ ತಮ್ಮ ಪಕ್ಷದ ಒಳಜಗಳವನ್ನೇ ನಿಯಂತ್ರಿಸಲಾಗದೇ ಇಡೀ ಆಮ್ ಆದ್ಮಿ ಪಕ್ಷ ಮೂರಾಬಟ್ಟೆಯಾಗಿ ಹೋಗಿದೆ, ಸದಾ ಮೋದಿ ಅವರನ್ನು ತೆಗಳುತ್ತಾ, ಅವರು ಮಾಡಿರುವ ಅಭಿವೃದ್ಧಿಯ ಕಾರ್ಯಯೋಜನೆಗಳನ್ನು ಮರೆತು, ಬೊಗಳೆ ಬಿಡುತ್ತಾ ತಮ್ಮ ಮಾನವನ್ನು ತಾವೇ ಹರಾಜಿಗಿಟ್ಟಿದ್ದಾರೆ.
ಇದೀಗ ಆಡಳಿತ ನಡೆಸಲಾಗದವರು ಅಂಗಳ ಡೊಂಕು ಎಂಬಂತೆ ‘ಐಎಎಸ್ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ’ ಸಚಿವರನ್ನು ಸಂಪುಟದಲ್ಲಿಟ್ಟುಕೊಂಡು, ಐಎಎಸ್ ಅಧಿಕಾರಿಗಳು ಪ್ರತಿಭಟನೆ ನಡೆಸುತ್ತಿದ್ದರೇ, ಅದಕ್ಕೆ ಪ್ರತಿಯಾಗಿ ತಾವು ಹೋರಾಟ ಮಾಡುವ ಮೂಲಕ ತಮ್ಮ ಅಸ್ತಿತ್ವವನ್ನೆ ಮರೆತಂತೆ ವರ್ತಿಸುತ್ತಿದ್ದಾರೆ. ಎಲ್ಲದಕ್ಕೂ ಶನೇಶ್ವರನೇ ಕಾರಣ ಎಂಬಂತೆ ಮತ್ತೇ ಮೋದಿ ವಿರುದ್ಧ ಬೊಂಬಡಾ ಬಜಾಯಿಸುತ್ತಾ, ತಮ್ಮ ಸಚಿವರು ಐಎಎಸ್ ಅಧಿಕಾರಿಗಳ ಮೇಲೆ ನಡೆಸಿರುವ ದಾಳಿಯನ್ನು ಕಾಟಾಚಾರಕ್ಕೆ ಖಂಡಿಸಿ, ರಾಜ್ಯಪಾಲರ ವಿರುದ್ದ ಹರಿಹಾಯುತ್ತಿದ್ದಾರೆ. ರಾಜ್ಯಪಾಲರ ಕಚೇರಿಯಲ್ಲಿ ಉಪವಾಸ ಮಲಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆಯುವ ಯಾವುದೇ ಪ್ರಯತ್ನ ಮಾಡದೇ, ಮೋದಿ ಅವರ ವಿರೋಧ ಪಕ್ಷಗಳನ್ನು ಹತ್ತಿರಕ್ಕೆ ಬಿಟ್ಟುಕೊಂಡು, ಜನರ ವಿಶ್ವಾಸವನ್ನೇ ಕಳೆದುಕೊಂಡಿರುವ ಕೇಜ್ರಿವಾಲ್ ಅಧಿಕಾರದ ಹಪಾಹಪಿಗಾಗಿ ಯಾರ್ಯಾರನ್ನೊ ಬೆಂಬಲಿಸುವ ಕೀಳು ಮಟ್ಟಕ್ಕೆ ಇಳಿದಿರುವುದು ದೇಶದ ರಾಜಕೀಯ ವ್ಯವಸ್ಥೆಯ ದುರಂತ.
ಕೇಜ್ರಿವಾಲ್ ಇನ್ನಾದರೂ ಐಎಎಸ್ ಅಧಿಕಾರಿಗಳ ಕ್ಷಮೆ ಯಾಚಿಸಿ, ಹಲ್ಲೆ ನಡೆಸಿದ ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅಳಿದುಳಿದ ಕೆಲವು ತಿಂಗಳ ಆಡಳಿತವನ್ನಾದರೂ ನೆಮ್ಮದಿಯಿಂದ ನೀಡಲಿ. ಅದೆಲ್ಲವನ್ನು ಬಿಟ್ಟು ರಾಜ್ಯಪಾಲರು, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬೊಗಳೆ ಬಿಡುವು ಬಿಟ್ಟು, ನೇರವಾಗಿ ಐಎಎಸ್ ಅಧಿಕಾರಿಗಳ ಸಂಘವನ್ನು ವಿನಂತಿಸಲಿ. ಎಲ್ಲದಕ್ಕೂ ಮೋದಿಯೇ ಬರಲಿ ಎಂದು ಹೇಳುವ ಕೇಜ್ರಿವಾಲ್ ತನ್ನ ಸ್ವಂತಿಕೆಯನ್ನೇ ಬಲಿ ನೀಡಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತದ ಹೆಸರಲ್ಲಿ ಅಧಿಕಾರಕ್ಕೆ ಬಂದು, ಇಡೀ ದೇಶವೇ ಅಣಕವಾಡುವಂಥ ದುರಂತದಾಯಕ ಆಡಳಿತವನ್ನು ಕೇಜ್ರಿವಾಲ್ ನೀಡುತ್ತಿದ್ದಾರೆ. ಇನ್ನಾದರೂ ಅರ್ಥೈಸಿಕೊಂಡು ಅಧಿಕಾರ ನಡೆಸಬೇಕು. ಇಲ್ಲಿದಿದ್ದರೇ ಜನರೇ ರೋಸಿ ಹೋಗಿ ಇವರನ್ನು ಕಿತ್ತೊಗೆದರೂ ಅಚ್ಚರಿ ಇಲ್ಲ.
Leave A Reply