ಕಲ್ಲು ತೂರಾಟಗಾರರಿಂದ ಸೈನಿಕರ ರಕ್ಷಣೆಗೆ ದೇಹರಕ್ಷಕ ಅಸ್ತ್ರ ನೀಡಲು ಕೇಂದ್ರ ಸರ್ಕಾರದ ನಿರ್ಧಾರ
ದೆಹಲಿ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪ್ರತ್ಯೇಕತವಾದಿಗಳು, ಭಯೋತ್ಪಾಕರ ಕುತಂತ್ರದಿಂದ ಸೈನಿಕರ ಮೇಲೆ ಕಲ್ಲು ತೂರಾಟ ಪ್ರಕರಣಗಳು ಹೆಚ್ಚುತ್ತಿದ್ದು, ಸೈನಿಕರಿಗೆ ಹಾನಿಯಾಗುತ್ತಿರುವುದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಸೈನಿಕರ ರಕ್ಷಣೆಗಾಗಿ ಇಡೀ ದೇಹವನ್ನು ಕಲ್ಲುಗಳಿಂದ ರಕ್ಷಿಸುವ ದೇಹರಕ್ಷಕ ಧಿರಿಸುಗಳನ್ನು ಕೇಂದ್ರ ಸರ್ಕಾರ ನೀಡಲು ನಿರ್ಧರಿಸಿದೆ. ಈ ಮೂಲಕ ಜಮ್ಮು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುತ್ತಿರುವವ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ.
ಸೈನಿಕರ ರಕ್ಷಣೆಗಾಗಿ ಸಿದ್ಧಪಡಿಸಿರುವ ಈ ಧಿರಿಸುಗಳ ಮೇಲೆ ‘ಕಲ್ಲು ತೂರಾಟ, ಕೆರೋಸಿನ್ ದಾಳಿ, ಪೆಟ್ರೋಲ್ ಬಾಂಬ್ ದಾಳಿ, ಕೆಮಿಕಲ್ ದಾಳಿ ಸೇರಿ ನಾನಾ ತರಹದ ದಾಳಿಗಳಿಂದ ರಕ್ಷಣೆ ನೀಡುತ್ತವೆ. ಅಲ್ಲದೇ ಕಣಿವೆಯಲ್ಲಿರುವ ಮೈಕೊರೆಯುವ ಚಳಿಯಿಂದಲೂ ಈ ಧಿರಿಸುಗಳು ರಕ್ಷಣೆ ನೀಡಲಿದ್ದು, ಮೈನಸ್ 20 ಸೆಲ್ಸಿಯಸ್ ನಿಂದ 55 ಸೆಲ್ಸಿಯಸ್ ವರೆಗೆ ಚಳಿಯಿಂದ 5 ಗಂಟೆವರೆಗೆ ರಕ್ಷಣೆ ನೀಡಲಿದೆ.
ಕಾಶ್ಮೀರದ ಗಲಭೆ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಸಿಆರ್ ಫಿಎಫ್ ಸೈನಿಕರಿಗೆ ಇಡೀ ದೇಹವನ್ನು ರಕ್ಷಿಸುವ ಈ ಧಿರಿಸುಗಳನ್ನು ನೀಡಲು ನಿರ್ಧರಿಸಲಾಗಿದೆ. ಸಿಆರ್ ಫಿಎಫ್ ಜಮ್ಮು ಕಾಶ್ಮೀರದಲ್ಲಿ ಗಲಭೆ ನಿಯಂತ್ರಿಸಲು ಮತ್ತು ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆಗೆ ಇಳಿಯುತ್ತಿದ್ದು, ಸಿಆರ್ ಫಿಎಫ್ ಪಡೆಗೆ ಆರಂಭದಲ್ಲಿ ನೀಡಲಾಗುತ್ತಿದೆ. ಅಲ್ಲದೇ ಜಮ್ಮು ಕಾಶ್ಮೀರದ ಪೊಲೀಸರು ಮತ್ತು ಬಿಎಸ್ ಎಫ್ ಯೋಧರಿಗೆ ವಿತರಿಸಲಾಗುವುದು ಎಂದು ಕೇಂದ್ರ ಗೃಹ ಇಲಾಖೆ ಮೂಲಗಳು ತಿಳಿಸಿವೆ.
ಆರು ಕೆ.ಜಿ.ತೂಕದ ಈ ಧಿರಿಸುಗಳು ಮೂರು ಬೇರೆ ಬೇರೆ ರೀತಿಯ ಸೈಜ್ ಗಳನ್ನು ಹೊಂದಿವೆ. ಮುಖ, ಎದೆ, ತೋಳು, ಹೊಟ್ಟೆ, ತೊಡೆ ಸೇರಿ ದೇಹದ ಸೂಕ್ಷ್ಮ ಅಂಗಗಳನ್ನು ಈ ನೂತನ ಧಿರಿಸುಗಳು ರಕ್ಷಿಸುತ್ತವೆ ಎಂದು ಮೂಲಗಳು ತಿಳಿಸಿವೆ. ಪ್ರಸಕ್ತ 2018ರ ವರ್ಷದಲ್ಲಿ ಕಲ್ಲು ತೂರಾಟಗಾರರಿಂದ ಸುಮಾರು 3000 ಸಿಆರ್ ಫಿಎಫ್ ಸೈನಿಕರು ಗಾಯಗೊಂಡಿದ್ದಾರೆ. ಆದ್ದರಿಂದ ಸೈನಿಕರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರಿಗೆ ಇಡೀ ದೇಹವನ್ನು ರಕ್ಷಿಸುವ ಧಿರಿಸುಗಳನ್ನು ನೀಡಲು ಮುಂದಾಗಿದೆ.
Leave A Reply