ಭಾರತೀಯ ವಾಯುಪಡೆ ಸೇರಿದ ಕರ್ನಾಟಕದ ಮೊದಲ ಮಹಿಳೆ ಎಂಬ ಖ್ಯಾತಿಗೆ ಮೇಘನಾ ಭಾಜನ!
ಬೆಂಗಳೂರು: ದೇಶದಲ್ಲಿ ದಿನೇದಿನೆ ಮಹಿಳೆಯರ ಸಾಧನೆ ಸಂಖ್ಯೆ ಜಾಸ್ತಿಯಾಗುತ್ತಿದೆ. ಕ್ರೀಡೆ, ವಿಮಾನ, ರಾಜಕೀಯ, ಆಟೋಮೊಬೈಲ್, ಎಂಜಿನಿಯರಿಂಗ್ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಅಗಾಧ ಪ್ರತಿಭೆ ಮೆರೆಯುತ್ತಿದ್ದಾರೆ. ಮಹಿಳೆ ಎಂದರೆ ಅಡುಗೆ ಮನೆಗೆ ಸೀಮಿತವಲ್ಲ, ಆಕೆಯೂ ಯಾವ ಸಾಧನೆ ಬೇಕಾದರೂ ಮಾಡಬಲ್ಲಳು ಎಂಬುದನ್ನು ಸಾಬೀತುಪಡಿಸುತ್ತಿದ್ದಾಳೆ.
ಈಗ ಇಂಥಾದ್ದೇ ಸಾಧನೆಯೊಂದನ್ನು ಕರ್ನಾಟಕದ ಹೆಮ್ಮೆಯ ಯುವತಿಯೊಬ್ಬಳು ಮಾಡುವ ಮೂಲಕ ಪ್ರತಿ ಕನ್ನಡಿಗನೂ ಹೆಮ್ಮೆಪಡುವಂತೆ ಮಾಡಿದ್ದಾರೆ. ಹೌದು, ಚಿಕ್ಕಮಗಳೂರಿನ ಮೇಘನಾ ಭಾಗವಾತ್ ವಾಯುಪಡೆಗೆ ಸೇರುವ ಮೂಲಕ, ವಾಯುಪಡೆ ಸೇರಿದ ಕರ್ನಾಟಕದ ಮೊದಲ ಮಹಿಳೆ ಎಂಬ ಕೀರ್ತಿಗೆ ಭಾಜನಳಾಗಿದ್ದಾಳೆ.
2017ರಲ್ಲಿ ವಾಯುಪಡೆ ಅಕಾಡೆಮಿ ಸೇರಿದ್ದ ಮೇಘನಾ ಭಾಗವತ, ಶನಿವಾರವಷ್ಟೇ ಯುದ್ಧವಿಮಾನಗಳ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಯುದ್ಧ ವಿಮಾನಗಳ ಪೈಲಟ್ ಆಗಿ ಆಯ್ಕೆಯಾದ 113 ಮಹಿಳೆಯರಲ್ಲಿ ಮೇಘನಾ ಸಹ ಒಬ್ಬಳು ಹಾಗೂ ಇವರೇ ಕರ್ನಾಟಕದಿಂದ ಮೊದಲ ಬಾರಿಗೆ ವಾಯುಪಡೆಗೆ ಆಯ್ಕೆಯಾದವರು ಎಂಬ ಕೀರ್ತಿ ಲಭಿಸಿದೆ.
ಚಿಕ್ಕಮಗಳೂರಿನಲ್ಲಿ ಜನಿಸಿದ ಮೇಘನಾ ಕುಟುಂಬದಲ್ಲಿ ನ್ಯಾಯವಾದಿಗಳೇ ಜಾಸ್ತಿ ಇದ್ದಾರೆ. ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ದಿಸೆಯಿಂದ 2015ರಲ್ಲಿ ಮೈಸೂರಿನ ಜಯ ಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಾಹಿತಿ ವಿಜ್ಞಾನ ಹಾಗೂ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದರು. ಬಳಿಕ ವಾಯುಪಡೆ ಸೇರಿ ಈಗ ಅಮೋಘ ಸಾಧನೆ ಮೆರೆದಿದ್ದಾರೆ.
Leave A Reply