ಎಸಿ ರೂಂನಲ್ಲಿ ಪ್ರತಿಭಟನೆ ಮಾಡುತ್ತಿರುವ ಕೇಜ್ರಿಯ ನಾಟಕದ ಮತ್ತೊಂದು ಅಧ್ಯಾಯ!
ಅರವಿಂದ ಕೇಜ್ರಿವಾಲ್ ಒಂದಿಷ್ಟು ದಿನ ತಣ್ಣಗಿದ್ದರು. ದೊಡ್ಡ ದೊಡ್ಡ ನಾಯಕರ ಮೇಲೆಲ್ಲ ಮಾನನಷ್ಟ ಮೊಕದ್ದಮೆ ಹಾಕಿ ಸುದ್ದಿ ವಾಹಿನಿಗಳಲ್ಲಿ ಮಿಂಚುತ್ತಿದ್ದರು. ನಂತರ ಎಲ್ಲವೂ ತಣ್ಣಗಾಗಿ ಜನ ಆ ವಿಷಯ ಮರೆತರು ಎಂದ ಕೂಡಲೇ ಇನ್ನಿಷ್ಟು ನಾಯಕರ ಮೇಲೆ ಆರೋಪ ಹಾಕಿ ಅವರಿಂದ ಮಾನನಷ್ಟ ಮೊಕದ್ದಮೆ ಹಾಕಿಸಿಕೊಂಡು ತಾವು ಸತ್ಯ ಹರಿಶ್ಚಂದ್ರನ ದೂರದ ಸಂಬಂಧಿ, ತಾವು ಹೇಳಿರುವುದರಲ್ಲಿ ಸುಳ್ಳೇ ಇಲ್ಲ ಎಂದು ವಾದಿಸುತ್ತಿದ್ದರು. ಬಳಿಕ ನ್ಯಾಯಾಲಯಗಳಿಂದ ಛೀಮಾರಿ ಬೀಳುತ್ತೆ ಎಂದು ಗೊತ್ತಾದಾಗ ಹಿಂದಿನ ಬಾಗಿಲಿನಿಂದ ಹೋಗಿ ಕಾಲು ಹಿಡಿಯುತ್ತಿದ್ದರು. ಅದರ ನಂತರ ಅಲ್ಲಿ ದೆಹಲಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಬಂತು. ಆಮ್ ಆದ್ಮಿ ಪಕ್ಷ ಭಾರತೀಯ ಜನತಾ ಪಾರ್ಟಿಯ ಎದುರು ಸೋತು ಸುಣ್ಣವಾಯಿತು. ಆಗ ಜನರಿಂದಲೇ ಆಮ್ ಆದ್ಮಿ ಪಕ್ಷದ ಬಗ್ಗೆ ವಿಪರೀತ ಟೀಕೆ ಟಿಪ್ಪಣಿಗಳು ಕೇಳಿ ಬಂದವು. ನೀವು ಪ್ರತಿಯೊಂದಕ್ಕೂ ಮೋದಿಯನ್ನು ಬೈಯುತ್ತಿರುವುದೇ ಇದಕ್ಕೆ ಕಾರಣ, ಇನ್ನಾದರೂ ಹೊಣೆ ಅರಿತು ಮುಖ್ಯಮಂತ್ರಿಯಂತೆ ಕೆಲಸ ಮಾಡಿ ಎಂದು ಜನ ಹೇಳಲು ಶುರು ಮಾಡಿದರು. ಕೇಜ್ರಿಗೆ ಬೇರೆ ದಾರಿಯಿರಲಿಲ್ಲ. ಒಂದಿಷ್ಟು ದಿನ ತೆಪ್ಪಗಿರುವುದೇ ಬುದ್ಧಿವಂತಿಕೆ ಎಂದು ಅಂದುಕೊಂಡರು. ಅದರ ನಂತರ ಅರವಿಂದ್ ಕೇಜ್ರಿವಾಲ್ ಕಾಣಿಸಿಕೊಂಡದ್ದೇ ಮೊನ್ನೆ ನಮ್ಮ ಕರ್ನಾಟಕದ ವಿಧಾನಸಭೆಯ ಮೆಟ್ಟಿಲುಗಳ ಮೇಲೆ. ಕುಮಾರಸ್ವಾಮಿಯವರ ಪದಗ್ರಹಣ ಸಮಾರಂಭದಲ್ಲಿ ಉಳಿದ ಸಮಾನ ಮನಸ್ಕರೊಂದಿಗೆ ಕಾಣಿಸಿಕೊಂಡ ಕೇಜ್ರಿವಾಲ್ ಆ ಮೂಲಕ ತಮ್ಮ ಮುಂದಿನ ಹೋರಾಟಕ್ಕೆ ಬಿಜೆಪಿಯೇತರ ನಾಯಕರನ್ನು ಒಟ್ಟು ಮಾಡುವ ಕಸರತ್ತಿನಲ್ಲಿ ಇದ್ರು.
ಆರೋಪದಲ್ಲಿ ಹುರುಳಿಲ್ಲ…
ಬೆಂಗಳೂರಿನಿಂದ ಹೊರಟವರೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಕಚೇರಿಯಲ್ಲಿ ವೇಯ್ಟಿಂಗ್ ರೂಂ ಎಂದು ಇರುತ್ತದೆಯಲ್ಲ, ಅಲ್ಲಿ ಪ್ರತಿಭಟನೆಗೆ ಕುಳಿತುಕೊಂಡರು. ಅವರೊಂದಿಗೆ ಆಪ್ ಕ್ಯಾಬಿನೆಟ್ ನ ಮೂರು ಜನ ಸಚಿವರು ಕೂಡ ಪ್ರತಿಭಟನೆಗೆ ಕುಳಿತುಕೊಂಡಿದ್ದಾರೆ. ಇವರ ಮುಖ್ಯ ಉದ್ದೇಶ ಇರುವುದು ತಾವು ಕರೆಯುವ ಸಭೆಗಳಿಗೆ ಐಎಎಸ್ ಆಫೀಸರ್ ಗಳು ಬರುವುದಿಲ್ಲ, ಅವರು ಪ್ರತಿಭಟನೆಯಲ್ಲಿ ಇದ್ದಾರೆ ಎನ್ನುವುದು. ಅವರನ್ನು ಸಭೆಗಳಿಗೆ ಹೋಗಲು ಸೂಚನೆ ನೀಡಿ ಎಂದು ಆಗ್ರಹಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ದೂರು. ಆದರೆ ಐಎಎಸ್ ಅಧಿಕಾರಿಗಳ ಒಕ್ಕೂಟ ನಾವು ಯಾವುದೇ ಪ್ರತಿಭಟನೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. ಈಗ ಉಳಿದಿರುವ ಪ್ರಶ್ನೆ ಹಾಗಾದರೆ ಕೇಜ್ರಿವಾಲ್ ಹೀಗೆ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುವುದು ಮಾತ್ರ. ಈ ನಡುವೆ ಅವರನ್ನು ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಒಳಗೆ ಪ್ರತಿಭಟನೆ ಮಾಡಲು ಬಿಟ್ಟಿರುವುದು ಯಾಕೆ ಎಂದು ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ.
ಹೈಕೋರ್ಟ್ ಪ್ರಶ್ನೆ…
ಮೊದಲನೇಯದಾಗಿ ಕೇಜ್ರಿವಾಲ್ ಅವರಿಗೆ ತಾವು ಹೇಗಾದರೂ ಮಾಡಿ ಲೈಮ್ ಲೈಟ್ ಗೆ ಬರಬೇಕು ಎಂದು ಆಸೆ ಹುಟ್ಟಿದೆ. ಅದಕ್ಕಾಗಿ ತಾವು ಒಬ್ಬ ಕೇಂದ್ರ ಸರಕಾರದ ಮಾಜಿ ಅಧಿಕಾರಿ ಎನ್ನುವುದನ್ನು ಕೂಡ ಮರೆತು ಒಬ್ಬ ಅಧಿಕಾರಿಯ ಕಚೇರಿಯ ಒಳಗೆನೆ ಪ್ರತಿಭಟನೆಗೆ ಕುಳಿತಿದ್ದಾರೆ. ಒಬ್ಬ ವ್ಯಕ್ತಿ ಪ್ರತಿಭಟನೆ ಮಾಡುವಾಗ ತಾವು ಯಾರ ವಿರುದ್ಧ ಪ್ರತಿಭಟನೆ ಮಾಡುತ್ತೆವೆಯೋ ಅವರ ಕಚೇರಿಯಲ್ಲಿಯೇ ಮಾಡಲು ಸಾಧ್ಯವಿಲ್ಲ. ಅದಕ್ಕೆ ಒಂದಿಷ್ಟು ನೀತಿ ನಿಯಮಗಳಿವೆ. ನೀವು ಜಿಲ್ಲಾಧಿಕಾರಿಯವರ ವಿರುದ್ಧ ಪ್ರತಿಭಟನೆ ಮಾಡುವುದಾದರೆ ಮುಖ್ಯದ್ವಾರದ ಹೊರಗೆನೆ ಮಾಡಬೇಕಾಗುತ್ತದೆ. ಗೇಟಿನಲ್ಲಿ ಪೊಲೀಸರು ನಿಂತಿರುತ್ತಾರೆ. ನೀವು ಅವರನ್ನು ತಳ್ಳಿ ಒಳಗೆ ಹೋಗಲು ಸಾಧ್ಯವಾಗುತ್ತದೆಯಾ? ಹಾಗಿರುವಾಗ ಕೇಜ್ರಿ ನೇರವಾಗಿ ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಒಳಗೆ ಹೋಗಿ ಅವರ ಕಚೇರಿಯಲ್ಲಿಯೇ ಸೋಫಾದಲ್ಲಿ ಮಲಗಿ ನಾಟಕ ಮಾಡುತ್ತಾರಲ್ಲ. ಅವರಿಗೆ ಒಳಗೆ ಪ್ರತಿಭಟನೆ ಮಾಡಲು ಬಿಟ್ಟದ್ಯಾರು ಎನ್ನುವುದು ಹೈಕೋರ್ಟ್ ಪ್ರಶ್ನೆ. ಎಸಿಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿರುವ ಕೇಜ್ರಿಯವರಿಗೆ ತಮ್ಮ ಹಳೆಯ ದಿನಗಳ ಪ್ರತಿಭಟನೆಗಳು ಮರೆತಿರಬಹುದಾ? ಅಥವಾ ತಾವು ಈಗಲೂ ವಿಪಕ್ಷದಲ್ಲಿಯೇ ಇದ್ದೇವೆ ಎಂದು ಅಂದುಕೊಂಡಿದ್ದಾರಾ? ಕೊಟ್ಟ ಕುದುರೆ ಏರಲು ಆಗದವನು ಧೀರನೂ ಅಲ್ಲ, ಶೂರನೂ ಅಲ್ಲ. ಕೇಜ್ರಿ ಈಗ ಕುದುರೆಯಿಂದ ಕೆಳಗಿಳಿಯಲು ದಿನಗಣನೆ ಆರಂಭವಾಗಿದೆ!
Leave A Reply