ಗಡಿಯಲ್ಲಿ ಉಗ್ರರು ನುಸುಳಿದರೇ ಹೊಡೆದುರುಳಿಸಲು ಭಾರತೀಯ ಸ್ನಿಪರ್ ಪಡೆ
ದೆಹಲಿ: ಜಮ್ಮು ಕಾಶ್ಮೀರದ ಗಡಿಯಲ್ಲಿ ನಿರಂತರವಾಗಿ ಅಕ್ರಮವಾಗಿ ನುಸುಳುವ ಮೂಲಕ ಕಿತಾಪತಿ ನಡೆಸುವ ಪಾಕಿ ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಲು ಭಾರತೀಯ ಸೇನೆ ಸಜ್ಜಾಗಿದ್ದು, ಗಡಿ ನುಸುಳುವ ಉಗ್ರರನ್ನು ಅದೇ ಸ್ಥಳದಲ್ಲೇ ಹೊಡೆದುರುಳಿಸಲು ಭರ್ಜರಿ ಪ್ಲಾನ್ ರೂಪಿಸಿದೆ. ಉಗ್ರರನ್ನು ಪ್ರವೇಶದ ಸ್ಥಳದಲ್ಲೇ ಉಡೀಸ್ ಮಾಡಲು ಸೇನೆ ಗಡಿಯಲ್ಲಿ ಸ್ನಿಪರ್ ಪಡೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಈ ಮೂಲಕ ಕಣಿವೆ ರಾಜ್ಯದಲ್ಲಿ ವಿಶೇಷವಾಗಿ ಅಮರನಾಥ ಯಾತ್ರೆ ವೇಳೆ ದಾಳಿ ನಡೆಸಲು ಉದ್ದೇಶಿಸಿರುವ ಉಗ್ರರ ಷಡ್ಯಂತ್ರ ತಡೆಯಲು ಸೇನೆ ಮುಂದಾಗಿದೆ.
ಗಡಿಯಲ್ಲಿ ಅರಣ್ಯ, ಮಂಜಿನ ಗುಡ್ಡಗಳು ಸೇರಿ ಆಯಾ ವಾತಾವರಣಕ್ಕೆ ತಕ್ಕಂತೆ ಸೈನಿಕರಿಗೆ ವೇಷಭೂಷಣಗಳನ್ನು ಸಿದ್ಧಪಡಿಸಿ, ಆ ವಾತಾವರಣದಲ್ಲಿ ಸೈನಿಕರನ್ನು ವಿಲೀನಗೊಳಿಸಿ, ಶತ್ರುಗಳ ವಿರುದ್ಧ ಹೋರಾಡುವುದೇ ಸ್ನಿಪರ್ ಪಡೆಯಾಗಿದೆ. ಈ ಪಡೆಯ ಸೈನಿಕರಿಗೆ ಮಧ್ಯಪ್ರದೇಶದ ಇಂದೋರ್ ನಲ್ಲಿ ಇರುವ ಸೆಂಟ್ರಲ್ ಸ್ಕೂಲ್ ಆಫ್ ವೆಪನ್ ಆ್ಯಂಡ್ ಟ್ಯಾಕ್ಟಿಕ್ಸ್ ಕೇಂದ್ರದಲ್ಲಿ ಕಠಿಣ ತರಬೇತಿ ನೀಡಲಾಗುತ್ತದೆ. ತರಬೇತಿಯಲ್ಲಿ ಭಾಗಿಯಾದ ನೂರು ಯೋಧರಲ್ಲಿ ಒಬ್ಬರನ್ನು ಸ್ನಪರ್ ಪಡೆಗೆ ಆಯ್ಕೆ ಮಾಡಲಾಗುತ್ತದೆ. ಅವರಿಗೆ ಪುನಃ 60 ದಿನಗಳ ಕಠಿಣ ತರಬೇತಿ ನೀಡುವ ಮೂಲಕ ಸ್ನಿಪರ್ ಗಳನ್ನಾಗಿ ಸಿದ್ಧಪಡಿಸಲಾಗುತ್ತದೆ. ಇವರು ಗಡಿಯಲ್ಲಿ ಆಯಾ ವಾತಾವರಣಕ್ಕೆ ತಕ್ಕಂತೆ ವೇಷಭೂಷಣ ತೊಟ್ಟುಕೊಂಡು, ಹೋರಾಟ ಮಾಡುತ್ತಾರೆ.
ಎಂಥಹುದ್ದೇ ವಾತಾವರಣದಲ್ಲೂ ಕಾರ್ಯನಿರ್ವಹಿಸುವ ಸ್ನಿಪರ್ ಪಡೆಯು ಹಿಮಚ್ಛಾದಿತ ಪ್ರದೇಶದಿಂದ ಹಿಡಿದು ದುರ್ಗಮವಾದ ಅರಣ್ಯ, ಗುಡ್ಡ ಕಾಡುಗಳಲ್ಲೂ ಕಾರ್ಯ ನಿರ್ವಹಿಸುವ ಕ್ಷಮತೆಯನ್ನು ಹೊಂದಿರುತ್ತದೆ. ಭಯೋತ್ಪಾದಕರು ಒಳನುಸುಳುವ ಪ್ರದೇಶವನ್ನು ಮೊದಲು ಗುರುತಿಸಿ, ಆ ಪ್ರದೇಶದ ಮೇಲೆ ನಿಗಾ ಇಡಲು ಅದರ ಸಮೀಪದಲ್ಲಿ ಇನ್ನೊಂದು ಸ್ಥಳವನ್ನು ಗುರುತಿಸಿ, ಅಲ್ಲಿಯೇ ಅಡಗಿ ಕುಳಿತು ಕಾರ್ಯಾಚರಣೆ ನಡೆಸಲಾಗುತ್ತದೆ. ಈ ಪಡೆಯು ಅಗತ್ಯಬಿದ್ದರೇ ಶತ್ರು ರಾಷ್ಟ್ರವನ್ನು ಪ್ರವೇಶಿಸಿ ವಿಶೇಷ ಕಾರ್ಯಾಚರಣೆಯನ್ನು ನಡೆಸುತ್ತದೆ.
Leave A Reply