ಪಾಕಿಸ್ತಾನಕ್ಕೆ ಉತ್ತರ ನೀಡಲು ಕೇಂದ್ರ ದಿಟ್ಟ ಕ್ರಮ, ಗಡಿಯಲ್ಲಿ 14 ಸಾವಿರ ಬಂಕರ್ ನಿರ್ಮಿಸಲು ನಿರ್ಧಾರ
ದೆಹಲಿ: ನಿರಂತರವಾಗಿ ಗಡಿ ನಿಯಮ ಉಲ್ಲಂಘಿಸುವ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಪಾಕಿಸ್ತಾನ ಮತ್ತು ಭಯೋತ್ಪಾದಕರಿಗೆ ಏಕಕಾಲಕ್ಕೆ ಬಿಸಿ ಮುಟ್ಟಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಭಾರತ ಪಾಕಿಸ್ತಾನದ ಗಡಿಯಲ್ಲಿ 14 ಸಾವಿರ ಬಂಕರ್ ಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಪಾಕಿಸ್ತಾನದ ಗಡಿಯಲ್ಲಿರುವ ಗ್ರಾಮಗಳಲ್ಲಿರುವ ಸಾಮಾನ್ಯರ ಪ್ರಾಣ ರಕ್ಷಣೆಯ ಜೊತೆಗೆ ಗಡಿಯಲ್ಲಿ ಅಕ್ರಮವಾಗಿ ನುಸುಳುವ ಭಯೋತ್ಪಾದಕರನ್ನು ನಿಯಂತ್ರಿಸುವುದು ಮತ್ತು ವಿನಾಕಾರಣ ಅಪ್ರಚೋದಿತ ದಾಳಿ ಮಾಡುವ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವುದು ಬಂಕರ್ ಗಳ ನಿರ್ಮಾಣದ ಉದ್ದೇಶವಾಗಿದೆ.
ಕೇಂದ್ರ ಲೋಕೋಪಯೋಗಿ ಇಲಾಖೆ ಸಚಿವ ನಯೀಮ್ ಅಖ್ತರ್ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ, ‘ಅಂತಾರಾಷ್ಟ್ರೀಯ ಗಡಿ’ ಮತ್ತು ‘ಗಡಿ ನಿಯಂತ್ರಣ ರೇಖೆ’ಯ ಬಳಿ ಸುರಕ್ಷತಾ ಬಂಕರ್‌ಗಳು ಹಾಗೂ ಪುನರ್ವಸತಿ ಕೇಂದ್ರಗಳ ನಿರ್ಮಾಣ ಕಾಮಗಾರಿ ಬಗ್ಗೆ ಚರ್ಚಿಸಲಾಗಿದ್ದು, ಸುಮಾರು 400 ಕೋಟಿ ರೂ. ವೆಚ್ಚದಲ್ಲಿ 13,029 ವೈಯಕ್ತಿಕ ಬಂಕರ್‌ಗಳು ಮತ್ತು 1,431 ಸಮುದಾಯ ಬಂಕರ್‌ಗಳನ್ನು ನಿರ್ಮಿಸಲಾಗುವುದು ಎಂದು ರಕ್ಷಣಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪೂಂಚ್ ಮತ್ತು ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ 7,298 ಬಂಕರ್ ನಿರ್ಮಿಸಲಾಗುತ್ತಿದೆ. ಜಮ್ಮು, ಕಠುವಾ ಮತ್ತು ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ 7,162 ಅಂಡರ್ ಗ್ರೌಂಡ್ ಬಂಕರ್ ನಿರ್ಮಿಸಲು ನಿರ್ಧರಿಸಲಾಗಿದೆ. 160 ಚದರ ಅಡಿಗಳ ವೈಯಕ್ತಿಕ ಬಂಕರ್‌ನಲ್ಲಿ 8 ಜನ ಮತ್ತು 800 ಚದರ ಅಡಿಯ ಸಮುದಾಯ ಬಂಕರ್‌ನಲ್ಲಿ 40 ಯೋಧರು ಅಡಗಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
Leave A Reply