ದಾಖಲೆ ಬರೆಯಿತು ಯೋಗ ದಿನಾಚರಣೆ, 1.05 ಲಕ್ಷ ಜನರ ಸೇರಿಸಿ ಗಿನ್ನೆಸ್ ದಾಖಲೆ ಬರೆದ ಬಾಬಾ ರಾಮದೇವ್!
2015ರಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುತ್ತ ಬರುತ್ತಿದ್ದು, ಯೋಗದ ಜನಕನಾದ ಭಾರತದಲ್ಲಿ ಯೋಗದ ಕುರಿತು ಹಲವು ದಾಖಲೆ ನಿರ್ಮಾಣವಾಗುತ್ತಿರುವುದು ಹಾಗೂ ಲಕ್ಷಾಂತರ ಯುವಕರು ಸ್ಫೂರ್ತಿಯಿಂದ ಪಾಲ್ಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕಳೆದ ವರ್ಷ ನಮ್ಮ ಮೈಸೂರಿನಲ್ಲಿ ಒಂದು ಲಕ್ಷ ಜನ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ವಿಶ್ವದಾಖಲೆ ಬರೆದಿದ್ದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿತ್ತು.
ಅದೇ ರೀತಿ ಈ ಬಾರಿಯೂ ಪ್ರತಿ ಭಾರತೀಯನೂ ಹೆಮ್ಮೆ ಪಡುವ ಸಂಗತಿ ಜರುಗಿದ್ದು, ರಾಜಸ್ಥಾನದ ಕೋಟಾದಲ್ಲಿ ಯೋಗ ಗುರು ಬಾಬಾ ರಾಮದೇವ್ ನೇತೃತ್ವದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಸುಮಾರು 1.05 ಲಕ್ಷ ಜನ ಪಾಲ್ಗೊಂಡು ಯೋಗ ಮಾಡಿದ್ದಾರೆ. ಇದು ಒಂದೇ ಕಾರ್ಯಕ್ರಮದಲ್ಲಿ ಹೆಚ್ಚು ಜನ ಪಾಲ್ಗೊಂಡಿದ್ದಾರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಗಿನ್ನೆಸ್ ದಾಖಲೆಯಾಗಿದೆ.
ಹೌದು, ಪತಂಜಲಿ ಸಂಸ್ಥೆಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೆ ಶಿಂಧ್ಯಾ ಸೇರಿ ಹಲವು ಗಣ್ಯರು ಭಾಗವಹಿಸಿದ್ದಾರೆ. ಇದುವರೆಗೆ ಒಂದು ಲಕ್ಷ ಜನ ಯೋಗ ಮಾಡಿದ್ದು ದಾಖಲೆಯಾಗಿತ್ತು. ಆದರೆ ಈ ಬಾರಿ 1.05 ಲಕ್ಷ ಜನ ಸೇರುವ ಮೂಲಕ ಗಿನ್ನೆಸ್ ದಾಖಲೆ ಬರೆಯಲಾಗಿದೆ.
ಅಲ್ಲದೆ ಈ ಹಿಂದೆ ಪತಂಜಲಿ ಸಂಸ್ಥೆಯಿಂದ ಸುಮಾರು 51 ತಾಸುಗಳ ಸತತ ಯೋಗ ಮ್ಯಾರಾಥಾನ್ ಆಯೋಜಿಸಿದ್ಸು ಸಹ ವಿಶ್ವ ದಾಖಲೆಯಾಗಿತ್ತು. ಈ ಯೋಗ ಮ್ಯಾರಾಥಾನ್ ನಲ್ಲಿ ಪತಂಜಲಿ ಯೋಗ ಪೀಠದ ಜೈಪಾಲ್ ಗೋಪಾಲ್ ಡಂಗಿ ಹಾಗೂ ಮೋಹನ್ ಶಂಕರ್ ರಾವ್ ಠಾಕ್ರೆ ಸೇರಿ ಹಲವು ಜನ ಭಾಗವಹಿಸಿದ್ದರು.
ಇಂದು ಬೆಳಗ್ಗೆ ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಆಯೋಜಿಸಿದ್ದ ಯೋಗ ದಿನದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಯೋಗ ಮಾಡಲಾಗಿದ್ದು, ಸುಮಾರು 50 ಸಾವಿರಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.
Leave A Reply