ಕಣಿವೆಯಲ್ಲಿ ಮಾನವ ಹಕ್ಕುಗಳ ಬಗ್ಗೆ ಬೊಗಳೆ ಬಿಟ್ಟ ವಿಶ್ವಸಂಸ್ಥೆ, ಪಾಕಿಸ್ತಾನಕ್ಕೆ ಛೀಮಾರಿ
ವಿಶ್ವಸಂಸ್ಥೆ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ವರದಿ ನೀಡಿದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿಯ ಮಾಹಿತಿಯನ್ನು, ಭಾರತ ಸೇರಿ ವಿಶ್ವಸಂಸ್ಥೆಯ ಆರು ರಾಷ್ಟ್ರಗಳು ವಿಶ್ವಸಂಸ್ಥೆಯ ಸಭೆಯಲ್ಲೇ ನಿರಾಕರಿಸುವ ಮೂಲಕ ವಿಶ್ವಸಂಸ್ಥೆ ಮತ್ತು ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯ ವರದಿಯ ಬಗ್ಗೆ ಭಾರತ ಸೇರಿ ಅಫ್ಘಾನಿಸ್ತಾನ, ಮಾರಿಷಸ್, ಬೆಲಾರಸ್, ಕ್ಯೂಬಾ, ಭೂತಾನ್ ಮತ್ತು ವೆನೆಜುವೆಲಾ ರಾಷ್ಟ್ರಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಪಾಕಿಸ್ತಾನಕ್ಕೂ ಇದರಿಂದ ವಿಶ್ವಮಟ್ಟದಲ್ಲಿ ಭಾರಿ ಹಿನ್ನಡೆಯುಂಟಾಗಿದೆ. ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯುಕ್ತ ಜಿದ್ ರಾದ್ ಅಲ್ ಹುಸೇನ್ 49 ಪುಟಗಳ ವರದಿಯನ್ನು ಸಲ್ಲಿಸಿದ್ದರು. ವರದಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ಅಮಾಯಕರ ಮೇಲೆ ದಾಳಿ ನಡೆಸಲಾಗುತ್ತಿದೆ. ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದರು. ಈ ಕುರಿತು ವರದಿ ಪ್ರಕಟಿಸಿದ ದಿನವೇ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ಭಾರತದ ನಿಲುವಿಗೆ ಆರು ರಾಷ್ಟ್ರಗಳು ಬೆಂಬಲಕ್ಕೆ ನಿಂತಿರುವುದು ಹೊಸ ಬಲ ನೀಡಿವೆ.
ವಿಶ್ವಸಂಸ್ಥೆ ವರದಿ ಪೂರ್ವಾಗ್ರಹ ಪೀಡಿತವಾಗಿದ್ದು, ವರದಿ ಆದರಿಸಿ ಯಾವುದೇ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಭೂತಾನ್ ವಿಶ್ವಸಂಸ್ಥೆಗೆ ಆಗ್ರಹಿಸಿದೆ. ಇನ್ನು ವಿಶ್ವಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನದ ಕಾಯಂ ಸದಸ್ಯ ಫಾರುಕ್ ಆಮಿಲ್ ‘ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗೆ ಪ್ರತ್ಯೇಕ ತನಿಖಾ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಯಾವುದೇ ರಾಷ್ಟ್ರಗಳು ಬೆಂಬಲ ನೀಡದಿರುವುದರಿಂದ ಪಾಕಿಸ್ತಾನ ಏಕಾಂಗಿಯಾಗಿ, ತೀವ್ರ ಮುಖಭಂಗ ಎದುರಿಸಿತು.
Leave A Reply