ನಿಟ್ಟಡೆ ಗ್ರಾಮದಲ್ಲಿ ಜೀವದ ಹಂಗು ತೊರೆದು ಗೆಳೆಯನನ್ನು ರಕ್ಷಿಸಿದ ಬಾಲಕ
ಬೆಳ್ತಂಗಡಿ : ನೀರು ಪಾಲಾಗುವ ವೇಳೆ ತನ್ನ ಗೆಳೆಯನನ್ನು ಪುಟ್ಟ ಬಾಲಕನೊಬ್ಬ ಜೀವದ ಹಂಗು ತೊರೆದು ರಕ್ಷಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ನಿಟ್ಟಡೆ ಗ್ರಾಮದ ಫಂಡಿಜೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಆದಿತ್ಯ ಹಾಗೂ ಆತನ ಗೆಳೆಯ ಅದೇ ಶಾಲೆಯ 5ನೇ ತರಗತಿಯ ಸುಜಯ ನಿನ್ನೆ ಸಂಜೆ ಶಾಲೆಯಿಂದ ಮನೆಗೆ ಮರಳುತ್ತಿದ್ದರು. ದಂಬೆ ಎಂಬಲ್ಲಿ ತೊರೆಯೊಂದು ಹರಿಯುತ್ತಿದ್ದು, ಇದನ್ನು ದಾಟಿ ಹೋಗಲು ನಿರ್ಮಿಸಿರುವ ಅಡಿಕೆ ಮರದ ಕಾಲು ಸೇತುವೆ ಬಳಿ ಸುಜಯ್ ನ ಹಿಂದೆ ಬರುತ್ತಿದ್ದ ಆದಿತ್ಯನ ಕಾಲು ಆಕಸ್ಮಾತ್ ಜಾರಿದೆ. ತಕ್ಷಣ ಇದನ್ನು ಗಮನಿಸಿದ ಸುಜಯ ಆತನನ್ನು ರಕ್ಷಿಸಲು ಯತ್ನಿಸಿದ್ದಾನೆ.
ಆದಿತ್ಯನ ಒಂದು ಕಾಲನ್ನು ಸುಜಯ ಹಿಡಿದುಕೊಂಡು ಮೇಲೆತ್ತಲು ಯತ್ನಿಸಿದ್ದಾನೆ . ಈ ಹಂತದಲ್ಲಿ ಆದಿತ್ಯನ ಇಡೀ ಶರೀರ ಸಂಕದ ಕೆಳಗೆ ನೇತಾಡತೊಡಗಿತ್ತು. ಶಾಲೆಯ ಬ್ಯಾಗ್ , ಕೊಡೆಯೊಂದಿಗೆ ಆದಿತ್ಯನನ್ನು ಮೇಲೆತ್ತೆಲು ಸುಜಯಗೆ ಆಗಲಿಲ್ಲ. ಆದರೆ ಆ ಕ್ಷಣ ಗೆಳೆಯನನ್ನು ಬದುಕಿಸಲು ರಕ್ಷಣೆಗಾಗಿ ಬೊಬ್ಬೆ ಹೊಡೆದಿದ್ದಾನೆ. ಬಾಲಕರ ಬೊಬ್ಬೆ ಕೇಳಿ ಕೂಡಲೇ ಅಣತಿ ದೂರದ ಮನೆಯ ಜಯಾನಂದ ಸಾಠೆ ಹಾಗೂ ಆದಿತ್ಯನ ತಂದೆ ರತ್ನಾಕರ ಹೆಬ್ಬಾರ್ ಹಾಗೂ ಇತರರು ತಕ್ಷಣ ಸ್ಥಳಕ್ಕೆ ಬಂದು ಆದಿತ್ಯನನ್ನು ಮೇಲೆತ್ತಿದ್ದಾರೆ. ಸುಮಾರು ನಾಲ್ಕೈದು ನಿಮಿಷಗಳ ಕಾಲ ಸುಜಯ ಆದಿತ್ಯನನ್ನು ಹಿಡಿದುಕೊಂಡಿದ್ದು ಮಿತ್ರನ ರಕ್ಷಣೆ ಮಾಡಿದ್ದಾನೆ. ಸುಜಯನ ಸಮಯ ಪ್ರಜ್ಞೆಯಿಂದಾಗಿ ಆದಿತ್ಯನ ಪ್ರಾಣ ಉಳಿಯುವಂತಾಗಿದೆ. ಬಾಲಕನ ಸಾಹಸಕ್ಕೆ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ
Leave A Reply