ಸತ್ತ ಉಗ್ರನ ಹೆಣದ ಮುಂದೆ ಪ್ರಚೋದನಾಕಾರಿ ಭಾಷಣಕ್ಕೆ ತಡೆ ನೀಡಿದ ಕಾಶ್ಮೀರ ಪೊಲೀಸರು
ಶ್ರೀನಗರ: ಪಾಪಿಕೃತ್ಯಗಳಲ್ಲಿ ಭಾಗಿಯಾಗಿ ಭಾರತೀಯ ಸೈನಿಕರಿಂದ ಹತರಾದ ಭಯೋತ್ಪಾದಕರ ಸತ್ತ ಹೆಣಗಳ ಮುಂದೆ ಭಾಷಣ ಮಾಡಿ ಭಯೋತ್ಪಾದನೆಗೆ ಪ್ರೇರಣೆ ನೀಡುವುದಕ್ಕೆ ಜಮ್ಮು ಕಾಶ್ಮೀರ ಪೊಲೀಸರು ತಡೆ ನೀಡಿದ್ದಾರೆ. ಭಯೋತ್ಪಾದಕ ಅಂತ್ಯ ಸಂಸ್ಕಾರದ ವೇಳೆ ಸೇರುವ ಸಾವಿರಾರು ಜನರ ಎದುರು ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಯುವಕರನ್ನು ಭಯೋತ್ಪಾದಕ ಸಂಘಟನೆಗಳತ್ತ ಸೆಳೆಯಲು ಯತ್ನಿಸಲಾಗುತ್ತಿದೆ. ಆದ್ದರಿಂದ ಈ ನಿಯಮ ಜಾರಿಗೆ ತರಲಾಗಿದೆ ಎಂದು ಡಿಜಿಪಿ ಎಸ್ ಪಿ ವೈದ್ ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಶತಾಯಗತಾಯ ಶಾಂತಿ ಕಾಪಾಡಲೇ ಬೇಕು ಎಂಬ ಕಠಿಣ ನಿರ್ಧಾರಕ್ಕೆ ಬಂದಿರುವ ಕೇಂದ್ರ ಸರ್ಕಾರ. ಸೈನಿಕರಿಗೆ ಮತ್ತು ಪೊಲೀಸರಿಗೆ ಸ್ವಾತಂತ್ರ್ಯ ನೀಡಿದ್ದು, ಅದರ ಸದ್ಭಳಕೆಯನ್ನು ಮಾಡಿಕೊಳ್ಳಲಾಗುತ್ತಿದೆ. ಭಯೋತ್ಪಾದಕನ ಅಂತ್ಯ ಸಂಸ್ಕಾರದ ವೇಳೆ ಆತನ ದೇಹದ ಮೆರವಣಿಗೆ ಮಾಡುವುದು, ಭಾಷಣ ಮಾಡುವುದು, ಗನ್ ಸೆಲ್ಯೂಟ್ ನೀಡಲಾಗುತ್ತದೆ ಇದರಿಂದ ಯುವಕರು ಭಯೋತ್ಪಾದನೆಯತ್ತ ಆಕರ್ಷಿತರಾಗುತ್ತಾರೆ. ಆದ್ದರಿಂದ ಜಮ್ಮು ಕಾಶ್ಮೀರದಲ್ಲಿ ಹತ್ಯೆಯಾದ ಭಯೋತ್ಪಾದಕರ ದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸುವ ವೇಳೆ ಹೆಚ್ಚಿನ ಜನರು ಸೇರದಂತೆ, ಅಂತ್ಯಸಂಸ್ಕಾರದಲ್ಲೂ ಸಾವಿರಾರು ಜನರು ಕೂಡದಂತೆ ರಸ್ತೆಗಳನ್ನು ಬಂದ್ ಮಾಡುವ ಕ್ರಮಗಳನ್ನು ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.
ಸತ್ತ ಭಯೋತ್ಪಾದಕನನ್ನು ಹುತಾತ್ಮನಂತೆ ಬಿಂಬಿಸಿ, ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕ ಸಂಘಟನೆಗಳು ಯುವಕರನ್ನು ಮತ್ತೇ ದುಷ್ಕೃತ್ಯಗಳತ್ತ ಆಕರ್ಷಿಸುತ್ತಿರುವ ಘಟನೆಗಳು ಹೆಚ್ಚುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಡಿಜಿಪಿ ವೈದ್ ಮಾಹಿತಿ ನೀಡಿದ್ದಾರೆ.
Leave A Reply