ಕಾಪು, ಅಂಗಡಿಗಳಿಗೆ ದಾಳಿ 250 ಕೆ.ಜಿ. ಪ್ಲಾಸ್ಟಿಕ್ ಚೀಲ ವಶ

ಕಾಪು: ಕಾಪು ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ನೇತೃತ್ವದ ತಂಡ ಶನಿವಾರ ಸಂಜೆ ಪೇಟೆಯ ವಿವಿಧ ಅಂಗಡಿಗಳಿಗೆ ದಾಳಿ ನಡೆಸಿ ಸುಮಾರು 250 ಕೆ.ಜಿ.ಯಷ್ಟು ಪ್ಲಾಸ್ಟಿಕ್ ಚೀಲಗಳನ್ನು ವಶಕ್ಕೆ ಪಡೆದುಕೊಂಡಿದೆ.
ಉಡುಪಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಪುರಸಭೆ ವ್ಯಾಪ್ತಿಯಲ್ಲಿ ಕಡ್ಡಾಯ ಪ್ಲಾಸ್ಟಿಕ್ ನಿಷೇಧ ಕಾನೂನು ಜಾರಿಗೆ ತರಲಾಗಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ರಾಯಪ್ಪ ಅವರು ಆರೋಗ್ಯಾಧಿಕಾರಿ ಸಹಿತ ಪೌರ ಕಾರ್ಮಿಕರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಆದೇಶ ಹೊರಡಿಸ ಲಾಗಿದ್ದರೂ, ಅದನ್ನು ಉಲ್ಲಂಘಿಸಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ. ಪ್ಲಾಸ್ಟಿಕ್ ಕೈಚೀಲಗಳನ್ನು ಬಳಸುತ್ತಿದ್ದ ಅಂಗಡಿಗಳ ಮಾಲಕರಿಂದ 3,000 ರೂ. ದಂಡ ಸಂಗ್ರಹಿಸಲಾಗಿದೆ ಎಂದು ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದ್ದಾರೆ.
ಪ್ಲಾಸ್ಟಿಕ್‌ಚೀಲ ಬದಲಿಗೆ ಬಟ್ಟೆ ಚೀಲ ನೀಡಿದ ಮುಖ್ಯಾಧಿಕಾರಿ ಪೇಟೆಯ ವಿವಿಧೆಡೆ ಪ್ಲಾಸ್ಟಿಕ್ ವಿರುದ್ಧ ಕಾರ್ಯಾಚರಣೆ ನಡೆಸಿದ ಮುಖ್ಯಾಧಿಕಾರಿ, ಪ್ಲಾಸ್ಟಿಕ್ ಚೀಲಗಳಲ್ಲಿ ಸಾಮಗ್ರಿ ಕೊಂಡೊಯ್ಯುತ್ತಿದ್ದವರನ್ನು ನಿಲ್ಲಿಸಿ, ಅವರಿಗೆ ಬಟ್ಟೆ ಚೀಲಗಳನ್ನು ನೀಡಿ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಿದರು.
Leave A Reply