ಕರಾವಳಿಯಲ್ಲಿ ಬಹಳ ದಿನಗಳವರೆಗೆ ಮೀನುಗಳು ಕೆಡದಂತೆ ಕೆಮಿಕಲ್ ಲೇಪಿಸಿ ಮಾರುಕಟ್ಟೆಗಳಲ್ಲಿ ಮಾರಾಟ ಆರೋಪ!
ಮಂಗಳೂರು : ಹಣ್ಣುಗಳು ಕೆಡದಂತೆ, ತರಕಾರಿಗಳು ತಾಜಾ ಕಾಣುವಂತೆ ಮಾಡಲು ಕೆಮಿಕಲ್ ಲೇಪನ ಮಾಡಿ ಮಾರಾಟ ಮಾಡುವ ಘಟನೆಗಳು ಈಗಾಗಲೇ ಬಯಲಾಗಿವೆ. ಈಗ ಮೀನಿನ ಸರದಿ. ಹೌದು ಇಂತಹದೊಂದು ಆರೋಪ ಕೆಲವು ದಿನಗಳಿಂದ ಕೇಳಿಬರುತ್ತಿದೆ. ಬಹಳ ದಿನಗಳವರೆಗೆ ಮೀನುಗಳು ಕೆಡದಂತೆ ಕೆಮಿಕಲ್ ಲೇಪಿಸಿ ತಂದು ಮಾರುಕಟ್ಟೆಗಳಲ್ಲಿ ಮಾರಟ ಮಾಡಲಾಗುತ್ತಿದೆ ಎಂಬ ಆರೋಪ ಕರಾವಳಿಯಲ್ಲಿ ಕೇಳಿಬರುತ್ತಿದೆ. ಇದು ಮೀನು ಪ್ರಿಯರಲ್ಲಿ ಆತಂಕ ಮೂಡಿಸಿದೆ. ಈ ಕುರಿತ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಿಂಗಳುಗಟ್ಟಲೆ ಹಾಳಾಗದಂತೆ ಹಣ್ಣುಗಳಿಗೆ ಕೆಮಿಕಲ್ ಹಾಕಿ ಮಾರಾಟ ಮಾಡುವಂತೆ ಈಗ ಮೀನಿಗೂ ವಿಷಕಾರಿ ಅಮೋನಿಯಾ ಬೆರೆಸಿ ವಾರಗಟ್ಟಲೆ ಮಾರಾಟವಾಗುವಂತೆ ನೋಡಿಕೊಳ್ಳುವ ದಂಧೆ ಕರಾವಳಿಯ ಎಲ್ಲೆಡೆ ಆರಂಭವಾಗಿದೆ ಎಂದು ಆರೋಪಿಸಲಾಗಿದೆ. ವಾರಗಟ್ಟಲೆ ಐಸ್ ನಲ್ಲಿಟ್ಟ ಮೀನುಗಳನ್ನು ಗಿರಾಕಿಗಳಿಗೆ ಫ್ರೆಶ್ ಎಂದು ತೋರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ವಿಡಿಯೋದಲ್ಲಿ ತೋರಿಸಲಾಗಿದೆ. ಕೆಮಿಕಲ್ ಲೇಪನದ ಕುರಿತು ಗ್ರಾಹಕ ಹಾಗೂ ಮೀನು ಚಿಲ್ಲರೆ ಮಾರಾಟಗಾರನ ನಡುವೆ ನಡೆದ ವಾಗ್ವಾದ ಈ ವಿಡಿಯೋದಲ್ಲಿದೆ. ಅದರ ಪ್ರಕಾರ “ಈ ಕೆಮಿಕಲ್ ನಾವು ಹಾಕುವುದಿಲ್ಲ ಬೇರೆ ಯಾರೋ ಹಾಕುತ್ತಾರೆ ” ಎಂದು ಮೀನು ಮಾರಾಟಗಾರ ಸಮಜಾಯಿಸಿ ನೀಡುತ್ತಾನೆ. ಆದರೆ ಕೆಮಿಕಲ್ ಹಾಕುವವರು ಯಾರು ಎಂಬುದನ್ನು ಮೀನು ಮಾರಾಟಗಾರ ಹೇಳಲು ಹಿಂದೇಟು ಹಾಕುವ ಪ್ರಸಂಗ ಈ ವಿಡಿಯೋದಲ್ಲಿದೆ.
ಮೀನಿಗೆ ಅಮೋನಿಯ ಹಾಕುವುದರಿಂದ ಅದು ಬೇಗ ಹಾಳಾಗುವುದಿಲ್ಲ. ಮೀನು ಸ್ವಲ್ಪ ಹಳದಿ ಬಣ್ಣ ಅಥವಾ ಬಿಳಿಚಿದಂತೆ ಕಾಣುವುದು. ತಾಜಾ ಮೀನಿನಲ್ಲಿ ಕಣ್ಣು ಹಾಗೂ ಕಿವಿರಿನ ಬಳಿ ಸ್ವಲ್ಪ ರಕ್ತ ಇರುತ್ತದೆ. ಅಮೋನಿಯಾ ಹಾಕಿದ ಮೀನಿನಲ್ಲಿ ಇದು ಕಾಣುವುದಿಲ್ಲ ಹಾಗೂ ಈ ಭಾಗಗಳು ಬಿಳಿಯಾಗಿರುತ್ತವೆ. ಅದರಲ್ಲೂ ಮುಖ್ಯವಾಗಿ ಅಮೋನಿಯ ಹಾಕಿದ ಮೀನಿಗೆ ನೊಣ ಕುಳಿತುಕೊಳ್ಳುವುದಿಲ್ಲ. ಆದರೆ ಇಂತಹ ಅಮೋನಿಯಾ ಬೆರೆಸಿ ಮಾರುವ ಮೀನಿನ ಸೇವನೆಯಿಂದ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಈ ಕುರಿತು ಆರೋಗ್ಯ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೂಡ ಕೇಳಿಬರುತ್ತಿದೆ.
Leave A Reply