ಉಡುಪಿಯಲ್ಲಿ ಮುಂದುವರೆದ ಮಳೆ ಆರ್ಭಟ: ತೀವ್ರಗೊಂಡ ಕಡಲ್ಕೊರೆತ

ಉಡುಪಿ: ಉಡುಪಿಯಾದ್ಯಂತ ಇಂದೂ ಕೂಡ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದೆರಡು ದಿನಗಳಿಂದ ಉಡುಪಿಯ ಮೂರೂ ತಾಲೂಕುಗಳಲ್ಲಿ ಒಂದೇ ಸಮನೆ ಮಳೆಯಾಗುತ್ತಿದೆ.
ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು ,ಜಲಾಶಯಗಳು ಭರ್ತಿಯಾಗಿವೆ. ಮಳೆ ತೀವ್ರಗೊಂಡಿರುವುದರಿಂದ ಉಡುಪಿಯ ಕೆಲವು ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತಿದ್ದು ಕೃತಕ ನೆರೆ ಸೃಷ್ಟಿಯಾಗಿದೆ. ಮಳೆಯಿಂದಾಗಿ ಪಾದಚಾರಿಗಳು, ವಾಹನ ಸವಾರರು ಮತ್ತು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇದೇ ವೇಳೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಕಡಲ್ಕೊರೆತವೂ ತೀವ್ರಗೊಂಡಿದ್ದು, ಅಲ್ಲಿ ತಡೆಗೋಡೆ ಕಾರ್ಯ ಬಿರುಸುಗೊಂಡಿದೆ. ಈ ಋತುವಿನ ಯಾಂತ್ರೀಕೃತ ಮತ್ತು ಆಳಸಮುದ್ರ ಮೀನುಗಾರಿಕೆ ಕೊನೆಗೊಂಡಿದ್ದು, ಮೀನುಗಾರರು ನಾಡದೋಣಿ ಮೀನುಗಾರಿಕೆ ಪ್ರಾರಂಭಿಸಿದ್ದಾರೆ.
ಕಳೆದೊಂದು ವಾರದಿಂದ ಕಡಲು ಪ್ರಕ್ಷುಬ್ದಗೊಂಡಿದ್ದು, ಕಡಲ್ಕೊರೆತ ತೀವ್ರಗೊಂಡಿದೆ. ಮಲ್ಪೆಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಕಡಲತೀರದ ಜನರು ಆತಂಕಗೊಂಡಿದ್ದಾರೆ. ಇನ್ನು ತೂಫಾನಿನ ತೀವ್ರತೆ ಹೆಚ್ಚಿದ್ದು ಮೀನುಗಾರರು ಕಡಲಿಗೆ ಇಳಿಯಲು ಹಿಂಜರಿಯುವಂತಾಗಿದೆ. ಕಳೆದ ನಾಲ್ಕಾರು ದಿನಗಳ ಮಳೆಯ ಆರ್ಭಟಕ್ಕೆ ಕಡಲು ಒಂದೇ ಸಮನೆ ಭೋರ್ಗರೆಯತ್ತಿದೆ. ಇದರ ಪರಿಣಾಮವಗಿ ಕೆಲವೆಡೆಗಳಲ್ಲಿ ಕಡಲ್ಕೊರೆತವೂ ತೀವ್ರಗೊಂಡಿದೆ. ಈ ಪ್ರದೇಶಗಳಲ್ಲಿ ಮೀನುಗಾರರ ಅನೇಕ ಮನೆಗಳಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.
Leave A Reply