ಸಾರ್ವಜನಿಕರ ದೂರಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿ ಎಂದು ಪೊಲೀಸರಿಗೆ ಉತ್ತಮ ಸಲಹೆ ನೀಡಿದ ಫಡ್ನವೀಸ್!
ಮುಂಬೈ: ಪೊಲೀಸರು ಎಂದರೆ ಸಾರ್ವಜನಿಕರ ದೂರುಗಳಿಗೆ ಕಿವಿಗೊಡದವರು, ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳು ಹೇಳಿದ ಹಾಗೆ ಕೇಳಿಕೊಂಡು ಇರುವವರು ಹಾಗೂ ಸಾರ್ವಜನಿಕರ ರಕ್ಷಣೆ ಎಂದರೆ ಅಸಡ್ಡೆಯಾಗಿ ವರ್ತಿಸುವವರು ಎಂಬುದು ತುಂಬ ಜನರ ಆರೋಪ ಹಾಗೂ ಸಾರ್ವಕಾಲಿಕ ಟೀಕೆ.
ಆದರೆ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೇ ಪೊಲೀಸರಿಗೆ ಕಿವಿಮಾತು ಹೇಳಿದ್ದು, ಸಾರ್ವಜನಿಕರು ನೀಡು ದೂರುಗಳಿಗೆ ಸೂಕ್ಷ್ಮವಾಗಿ ವರ್ತಿಸಿ. ಅವರಿಗೆ ಸೂಕ್ತವಾಗಿ ಭದ್ರತೆ ನೀಡಿ ಎಂದು ಸಲಹೆ ನೀಡುವ ಮೂಲಕ ಮೇಲ್ಪಂಕ್ತಿ ಹಾಕಿದ್ದಾರೆ.
ಮುಂಬೈನ ಕಮಿಷನರ್ ಪೊಲೀಸ್ ಠಾಣೆಯಲ್ಲಿ ಡಯಲ್ 100 ಹಲವು ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಫಡ್ನವೀಸ್, ಸಾರ್ವಜನಿಕರು ಯಾವುದೇ ದೂರು ಹಾಗೂ ಅಭದ್ರತೆ ಕುರಿತು ಮಾಹಿತಿ ನೀಡಲು ಪೊಲೀಸ್ ಠಾಣೆಗೆ ಬಂದಾಗ ಅವರೊಂದಿಗೆ ಕಠೋರವಾಗಿ ವರ್ತಿಸಬೇಡಿ. ಸೂಕ್ಷ್ಮವಾಗಿ ವರ್ತಿಸಿ, ಅವರ ದೂರು ಆಲಿಸಿ ಸಮಸ್ಯೆ ಬಗೆಹರಿಸಿ ಎಂದು ಸಲಹೆ ನೀಡಿದ್ದಾರೆ.
ಡಯಲ್ 100 ಯೋಜನೆಯು ಸಾರ್ವಜನಿಕ ಸ್ನೇಹಿಯಾಗಿ ಕಾರ್ಯನಿರ್ವಹಿಸಲಿದ್ದು, ಪೊಲೀಸ್ ಕಂಟ್ರೋಲ್ ರೂಮ್ ಕಾರ್ಯಕ್ಷಮತೆ ಹೆಚ್ಚಿಸಲಿದೆ. ಯಾರೇ ದೂರು ಹೊತ್ತು ತಂದರೂ, ಕರೆ ಮಾಡಿ ಮಾಹಿತಿ ನೀಡಿದರೂ ಸೂಕ್ಷ್ಮವಾಗಿ ಪರಿಗಣಿಸಿ, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಫಡ್ನವೀಸ್ ಪೊಲೀಸರಿಗೆ ಸೂಚಿಸಿದ್ದಾರೆ.
ಯಾವಾಗಲೂ ಪೊಲೀಸರು ಎಂದರೆ ತಮ್ಮ ಸೇವಕರೆಂದು ತಿಳಿದುಕೊಂಡಿರುವ, ಅವರ ಜತೆ ಹಾಗೆಯೇ ವರ್ತಿಸುವ ರಾಜಕಾರಣಿಗಳಿದ್ದಾರೆ. ಆದರೆ ಮುಖ್ಯಮಂತ್ರಿಯಂಥ ಮುಖ್ಯಮಂತ್ರಿಯೇ ಪೊಲೀಸರು ಸಾರ್ವಜನಿಕರ ಜತೆ ಸೂಕ್ಷ್ಮವಾಗಿ ವರ್ತಿಸಿ, ಅವರ ಸಮಸ್ಯೆ ಬಗೆಹರಿಸಿ ಎಂದು ಹೇಳಿರುವುದು ಉತ್ತಮ ಬೆಳವಣಿಗೆಯಾಗಿದೆ.
Leave A Reply