ತಪ್ಪಿದ ಅನಾಹುತ: ಪ್ರಯಾಣಿಕರನ್ನು ರಕ್ಷಿಸಿದ ಬಸ್ ಕಂಡಕ್ಟರ್!
ಉಡುಪಿ: ಶಿವಮೊಗ್ಗದಿಂದ ಉಡುಪಿಗೆ ಬರಬೇಕಿದ್ದ ಖಾಸಗಿ ಬಸ್ಸಿನ ಕಂಡಕ್ಟರ್ ಒಬ್ಬರು ಪ್ರಯಾಣಿಕರ ಜೀವವನ್ನು ಉಳಿಸಿದ್ದಾರೆ. ಶಿವಮೊಗ್ಗದಿಂದ ಕ್ರಿಸ್ತರಾಜ್ ಬಸ್ಸು ಉಡುಪಿಗೆ ಹೊರಟಿತ್ತು. 3.20ಕ್ಕೆ ಉಡುಪಿಗೆ ಬರಬೇಕಿತ್ತು. ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ 17ನೇ ಮೈಲಿಕಲ್ಲು ಗಾಜನೂರು ತುಂಗಾ ಅಣೆಕಟ್ಟಿನ ಹಿನ್ನೀರಿನ ಪ್ರದೇಶದ ರಸ್ತೆಯಾಗಿ ಬಸ್ಸು ಸಾಗುತ್ತಿದ್ದಾಗ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಚಾಲಕನಿಗೆ ತಲೆಸುತ್ತು ಬಂದಿತ್ತು. ಈ ವೇಳೆ ನಿಯಂತ್ರಣ ತಪ್ಪಿದ ಬಸ್ಸು ಎಡಬದಿಗೆ ಸಾಗಿತ್ತು. ಕಂಡಕ್ಟರ್ ತೀರ್ಥಹಳ್ಳಿಯ ಭಗವಾನ್ ಅವರು ಚಾಲಕರ ಸೀಟಿನ ಪಕ್ಕದಲ್ಲಿಯೇ ಇದ್ದರು. ಬಸ್ಸು ನಿಯಂತ್ರಣ ತಪ್ಪಿದ ಕೂಡಲೇ ಚಾಲಕನ ಸೀಟಿನತ್ತ ಧಾವಿಸಿದ ಭಗವಾನ್ ಅವರು ಸ್ಟೇರಿಂಗ್ ಹಿಡಿದು ಬಸ್ಸನ್ನು ಬಲಬದಿಗೆ ಸರಿಸಿ ರಸ್ತೆಯತ್ತ ತಂದರು. ಇಲ್ಲದಿದ್ದರೆ ಬಸ್ಸು ಹೊಳೆಯ ಗುಂಡಿಗೆ ಬಿದ್ದು ಪ್ರಾಣಹಾನಿಯಾಗುತ್ತಿತ್ತು.
ಬಸ್ಸು ಚಾಲಕನ ನಿಯಂತ್ರಣ ತಪ್ಪುತ್ತಲೇ ಇಬ್ಬರು ಬಸ್ಸಿನಿಂದ ಹಾರಲು ಬಸ್ಸಿನ ಕಿಟಕಿ ಗಾಜು ಒಡೆದರು. ಅಷ್ಟರಲ್ಲಿ ಬಸ್ಸು ನಿಯಂತ್ರಣಕ್ಕೆ ಬಂತು. ನಿರ್ವಾಹಕನಿಗೆ ಬಸ್ಸು ಚಲಾಯಿಸಲು ಬರುತ್ತಿದ್ದ ಕಾರಣ ಪ್ರಯಾಣಿಕರು ಬಚಾವ್ ಆಗಿದ್ದಾರೆ. ನಿರ್ವಾಹಕರ ಈ ಕಾರ್ಯವನ್ನು ಪ್ರಯಾಣಿಕರು ಶ್ಲಾಘಿಸಿದ್ದಾರೆ.
Leave A Reply