ಮುಳುಗಿದ ಸುಬ್ರಹ್ಮಣ್ಯ ಹೊಸಮಠ ಸೇತುವೆ: ವಾಹನ ಸಂಚಾರ ಸ್ಥಗಿತ
ಮಂಗಳೂರು : ಕಳೆದ 3 ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಎಡೆಬಿಡದೆ ಮಳೆ ಮುಂದುವರಿದ ಪರಿಣಾಮ ಜಿಲ್ಲೆಯ ಜೀವ ನದಿ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ತುಂಬಿ ಉಕ್ಕಿ ಹರಿಯತೊಡಗಿದೆ
ಸುಬ್ರಹ್ಮಣ್ಯ ಬಳಿಯ ಹೊಸಮಠ ಸೇತುವೆ ಮತ್ತೆ ಮುಳುಗಡೆಯಾಗಿದೆ. ಕುಮಾರಧಾರಾ ನದಿಯಲ್ಲಿ ಪ್ರವಾಹ ಪರಿಸ್ಥಿತಿಯಿದೆ. ಹೊಸಮಠ ಸೇತುವೆ ಮುಳುಗಡೆಯಾದ ಕಾರಣ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ – ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಬಂದ್ ಆಗಿದ್ದು ಭಕ್ತರು ಪರದಾಡುವಂತಾಗಿದೆ.
ಇದೇ ವೇಳೆ, ಸಂಗಮ ಕ್ಷೇತ್ರ ಉಪ್ಪಿನಂಗಡಿ ಬಳಿ ನೀರಿನ ಮಟ್ಟ ಏರಿಕೆಯಾಗಿದ್ದು, ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಸಂಗಮಗೊಂಡು ಸಹಸ್ರಲಿಂಗೇಶ್ವರ ದೇವಸ್ಥಾನದ ಅಂಗಣಕ್ಕೆ ನೀರು ನುಗ್ಗುವ ಸಾಧ್ಯತೆ ವ್ಯಕ್ತವಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಇದುವರೆಗೂ ಉಪ್ಪಿನಂಗಡಿಯ ಸಂಗಮ ಕ್ಷೇತ್ರ ಮುಳುಗಡೆಯಾಗಿರಲಿಲ್ಲ ಎಂಬುದು ಗಮನಾರ್ಹ. ಮಳೆಯಿಂದಾಗಿ ಹೆಚ್ಚಿನ ಹಾನಿ ಆಗದಿದ್ದರೂ, ಜನರು ಚಳಿಯಿಂದ ಥರಗುಟ್ಟುವಂತಾಗಿದೆ. ಮಂಗಳೂರಿನ ರಸ್ತೆಗಳಲ್ಲಿ ನೀರು ಹರಿಯತೊಡಗಿದ್ದು ವಾಹನಗಳ ಸಂಚಾರಕ್ಕೆ ತೊಡಕಾಗಿದೆ.
Leave A Reply