ಕಾಶ್ಮೀರದಲ್ಲಿ ಸುಳ್ಳು ಹರಡುವವರಿಗೆ ಬಿತ್ತು ಬ್ರೇಕ್. ವಾಟ್ಸಪ್ ಗ್ರೂಪ್, ಫೇಸ್ ಬುಕ್ ಖಾತೆ ಆರಂಭಕ್ಕೆ ಬೇಕಿನ್ನು ಪೊಲೀಸ್ ಅನುಮತಿ
ಶ್ರೀನಗರ: ಕಣಿವೆಯಲ್ಲಿ ನಿರಂತರವಾಗಿ ಸುಳ್ಳುಗಳನ್ನು ಹರಡಿ, ಜನರ ಮನಸ್ಸು ಕದಡಿಸಿ, ಅಶಾಂತಿ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ವಾಟ್ಸಪ್ ಗ್ರೂಪ್ ಮತ್ತು ಫೇಸ್ ಬುಕ್ ಪೇಜ್ ಗಳನ್ನು ಆರಂಭಿಸಲು ಪೊಲೀಸರ ಅನುಮತಿ ಕಡ್ಡಾಯ ಮಾಡುವ ಮೂಲಕ ಜಮ್ಮು ಕಾಶ್ಮೀರ ಪೊಲೀಸರು ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ. ಇದೀಗ ಕೇವಲ ಕಿಶ್ತ್ವಾರ ಜಿಲ್ಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಈಗಾಗಲೇ ಇರುವ ಖಾತೆಗಳು ಮತ್ತು ಗ್ರೂಪ್ ಗಳು ತಮ್ಮ ಎಲ್ಲ ಮಾಹಿತಿಯನ್ನು ಪೊಲೀಸರಿಗೆ ನೀಡಿ ಅನುಮತಿ ಪಡೆಯಬೇಕು. ಇಲ್ಲದಿದ್ದರೇ 10ದಿನಗಳ ನಂತರ ಗ್ರೂಪ್ ಮತ್ತು ಪೇಜ್ ಗಳನ್ನು ನಿಷ್ಕೃಯಗೊಳಿಸಲಾಗುವುದು ಎಂದು ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.
ಗ್ರೂಪ್ ಅಡ್ಮಿನ್ ಕಾನೂನು ಪ್ರಕಾರ ಸೂಚಿಸಿರುವ ಎಲ್ಲ ಮಾಹಿತಿಯನ್ನು ನೀಡಬೇಕು. ಗ್ರೂಪ್ ಮತ್ತು ಪೇಜ್ ಗಳಲ್ಲಿ ಅಪ್ಲೋಡ್ ಆಗುವ ಎಲ್ಲ ಮಾಹಿತಿಗೆ ಅವರೇ ಜವಾಬ್ದಾರರಾಗಿರುತ್ತಾರೆ. ಪ್ರಚೋದನಾತ್ಮಕ ಅಂಶಗಳಿದ್ದರೇ ಗ್ರೂಪಿನ್ ಅಡ್ಮಿನ್ ಕಾನೂನು ತೊಡಕುಗಳನ್ನು ಎದುರಿಸಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿಶ್ತ್ವಾರ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಅಂಗ್ರೆಜ್ ಸಿಂಗ್ ರಾಣಾ ಈ ಕುರಿತು ಆದೇಶ ಹೊರಡಿಸಿದ್ದು, ಭಯೋತ್ಪಾದನೆ ನಿಯಂತ್ರಣ ಕಾನೂನು, ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಪ್ರಕಾರ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೈಬರ್ ಕ್ರೈಮ್ ಮತ್ತು ಐಟಿ ಕಾಯಿದೆ ಪ್ರಕಾರ ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಆದೇಶ ಕೈಗೊಳ್ಳಲಾಗಿದೆ. ವದಂತಿಗಳನ್ನು ಹರಡುವುದು, ಸುಳ್ಳು ಮಾಹಿತಿ, ಪ್ರಚೋಧನಾತ್ಮಕ ಅಂಶಗಳನ್ನು ಹಂಚಿಕೊಂಡವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಎಲ್ಲದಕ್ಕೂ ಗ್ರೂಪ್ ಮತ್ತು ಫೇಸ್ ಬುಕ್ ಪೇಜಿನ ಅಡ್ಮಿನ್ ಹೊಣೆ. ಎಲ್ಲರಿಗೂ ಭಾವನೆಗಳನ್ನು ಹಂಚಿಕೊಳ್ಳುವ ಹಕ್ಕು ಇದೆ. ಆದರೆ ಅದು ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು ಎಂದು ತಿಳಿಸಿದ್ದಾರೆ.
Leave A Reply