ಮಾಜಿ ಶಾಸಕ ಲೋಬೋ ಅವರ ಖಾತೆಯಿಂದ ಹಣ ಎಗರಿಸಿದ ಕಳ್ಳರು!!
ಎಷ್ಟೇ ಜಾಗೃತಿ ಉಂಟು ಮಾಡುವ ಪ್ರಯತ್ನ ನಡೆಯುತ್ತಿದ್ದರೂ ಬುದ್ಧಿವಂತರ ಜಿಲ್ಲೆಯಲ್ಲಿ ಜನ ಮತ್ತೆ ಮತ್ತೆ ಮೋಸಕ್ಕೆ ಒಳಗಾಗುತ್ತಿರುವುದು ನಡೆದೆ ಇದೆ. ಈ ಬಾರಿ ಮೋಸಕ್ಕೆ ಒಳಗಾಗುವ ಸರದಿ ಜೆ ಆರ್ ಲೋಬೋ ಅವರದ್ದು. ಜೆ ಆರ್ ಲೋಬೋ ಅವರು ಮಾಜಿ ಶಾಸಕರು. ಕೆಎಎಸ್ ಅಧಿಕಾರಿಯಾಗಿದ್ದವರು. ಅವರು ಕದ್ರಿ ಪೊಲೀಸ್ ಠಾಣೆಯಲ್ಲಿ ತಮಗಾದ ಮೋಸದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ಹಿನ್ನಲೆ:
ಜೆ ಆರ್ ಲೋಬೋ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿರುತ್ತಾರೆ. ಅದಕ್ಕೆ ಸಂಬಂಧಿಸಿ 5046454066600003776 ನೇ ನಂಬ್ರದ ಡೆಬಿಟ್ ಕಾರ್ಡ್ ಹೊಂದಿರುತ್ತಾರೆ. ದಿನಾಂಕ 05/07/2018 ರಂದು ಅವರ ಮೊಬೈಲ್ ನಂಬ್ರವಾದ 9448375245 ನಂಬ್ರಕ್ಕೆ +916295289265 ದಿಂದ ಕರೆ ಬಂದಿದೆ. ಕರೆ ಮಾಡಿದವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಿಂದ ಕರೆ ಮಾಡುತ್ತಿದ್ದೇವೆ ಎಂದಿದ್ದಾರೆ. ನೀವು ನಿಮ್ಮ ಎಟಿಎಂನ ಕೀ ವಿವರಗಳನ್ನು ನೀಡದೇ ಇರುವುದರಿಂದ ನಿಮ್ಮ ಎಟಿಎಂ ಅನ್ನು ಬ್ಲಾಕ್ ಮಾಡುತ್ತೇವೆ ಎಂದಿದ್ದಾರೆ. ನಂತರ ಲೋಬೋ ಅವರ ಡೆಬಿಟ್ ಕಾರ್ಡ್ ನಂಬ್ರ ಪಡೆದುಕೊಂಡು ಬಳಿಕ ಒಟಿಪಿ ಸಂಖ್ಯೆಯನ್ನು ಪಡೆದು ಲೋಬೋ ಅವರ ಖಾತೆಯಿಂದ ಒಮ್ಮೆ 25000 ರೂ, ಇನ್ನೊಮ್ಮೆ 19999 ರೂ ಮತ್ತೊಮ್ಮೆ 5000 ರೂಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ಈ ಬಗ್ಗೆ ಲೋಬೋ ಅವರು ಪ್ರಕರಣ ದಾಖಲಿಸಿದ್ದಾರೆ.
ನಿಮಗೆ ಯಾರಾದರೂ ಕರೆ ಮಾಡಿ ನಿಮ್ಮ ಬ್ಯಾಂಕಿನ ಯಾವುದೇ ದಾಖಲೆ, ಪಿನ್ ನಂಬ್ರಗಳನ್ನು ಕೇಳುವುದಿಲ್ಲ, ಕೇಳಿದರೂ ಕೊಡುವ ಅವಶ್ಯಕತೆ ಇಲ್ಲ ಎನ್ನುವ ಸಂದೇಶವನ್ನು ವಿವಿಧ ಬ್ಯಾಂಕುಗಳು ಎಸ್ ಎಂಎಸ್ ಸಂದೇಶಗಳ ಮೂಲಕ ಜನರಲ್ಲಿ ಜಾಗೃತಿ ಉಂಟು ಮಾಡುವ ಕೆಲಸ ಮಾಡುತ್ತಿವೆ. ಇನ್ನೊಂದು ಕಡೆ ಪೊಲೀಸ್ ಕಮೀಷನರೇಟ್ ಕಡೆಯಿಂದ ಕೂಡ ಇಂತಹ ಸಂದೇಶಗಳು ನಮ್ಮ ಮೊಬೈಲಿಗೆ ಬರುತ್ತಾ ಇರುತ್ತವೆ. ಇನ್ನೊಂದೆಡೆ ಮೋಸಕ್ಕೆ ಒಳಗಾದವರ ನ್ಯೂಸ್ ಗಳು ಆಗಾಗ ಮಾಧ್ಯಮಗಳಲ್ಲಿ ಬರುತ್ತವೆ. ಇಷ್ಟಿದ್ದೂ ಮೋಸಕ್ಕೆ ಒಳಗಾಗುವವರ ಸಂಖ್ಯೆ ಕಡಿಮೆ ಆಗಿಲ್ಲ ಎನ್ನುವುದೇ ಆಶ್ಚರ್ಯಕರ ಸಂಗತಿ. ಅದರಲ್ಲಿಯೂ ಸಾಕಷ್ಟು ಕಲಿತವರೇ ಹೀಗೆ ಮೋಸಕ್ಕೆ ಒಳಗಾಗುತ್ತಿರುವುದು ಇನ್ನೊಂದು ಸೋಜಿಗ.
ಇಂತಹ ಮೋಸಗಳು ಹೇಗೆ ನಡೆಯುತ್ತವೆ?
ಮೊದಲನೇಯದಾಗಿ ಕರೆ ಮಾಡಿದ ವ್ಯಕ್ತಿ ನಿಮ್ಮ ಬ್ಯಾಂಕ್ ಖಾತೆಯ ಬಗ್ಗೆ ಅತಂಕಕಾರಿ ವಿಷಯವನ್ನು ನಿಮಗೆ ಹೇಳುತ್ತಾನೆ. ನೀವು ಗಾಬರಿಯಾಗುವಂತೆ ಮಾಡುತ್ತಾನೆ. ಅದಕ್ಕೆ ತನ್ನ ಬಳಿ ಪರಿಹಾರ ಇದೆ ಎಂದು ಹೇಳಿ ನಿಮ್ಮ ಡಿಬಿಟ್ ಕಾರ್ಡ್ ನಂಬ್ರ ಕೇಳುತ್ತಾನೆ. ನೀವು ಪರಿಹಾರ ಸಿಕ್ಕಿದರೆ ಸಾಕು ಎಂದು ಡಿಬಿಟ್ ಕಾರ್ಡ್ ನಂಬ್ರ ಕೊಡುತ್ತೀರಿ. ಕೆಲವೇ ನಿಮಿಷಗಳ ಒಳಗೆ ಆತ ನಿಮ್ಮ ಮೊಬೈಲ್ ನಲ್ಲಿ ಎಸ್ ಎಂ ಎಸ್ ಮೂಲಕ ಒಟಿಪಿ ನಂಬ್ರ ಬಂದಿದೆ, ಅದನ್ನು ಕೂಡಲೇ ಹೇಳಿ ಎನ್ನುತ್ತಾನೆ. ನೀವು ಕೊಟ್ಟು ಬಿಡುತ್ತಿರಿ. ಅಲ್ಲಿ ಅವನು ಹಣವನ್ನು ಡ್ರಾ ಮಾಡಿಕೊಳ್ಳುತ್ತಾನೆ. ಎಲ್ಲವೂ ಇಂಟರ್ ನೆಟ್ ಮೂಲಕ ನಡೆಯುವುದರಿಂದ ಯಾರು ಎಲ್ಲಿಂದ ನಿಮ್ಮ ಹಣವನ್ನು ಡ್ರಾ ಮಾಡಿಕೊಂಡರು ಎಂದು ನಿಮಗೆ ಗೊತ್ತೇ ಆಗುವುದಿಲ್ಲ. ಎಲ್ಲಿಯೋ ಕುಳಿತ ವ್ಯಕ್ತಿ ತನ್ನ ಲ್ಯಾಪ್ ಟಾಪ್ ಒಪನ್ ಮಾಡಿ ನಿಮ್ಮ ಡಿಬಿಟ್ ನಂಬ್ರ ಕೇಳಿ ಲಾಗ್ ಇನ್ ಆಗುವಾಗ ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತದೆ. ಅದು ಮೊದಲ ಎಚ್ಚರಿಕೆ. ತಕ್ಷಣ ಒಂದು ಕರೆ ಬಂದು ಆ ಓಟಿಪಿ ನಂಬ್ರ ಕೇಳಿ ನೀವು ಕೊಟ್ಟಿರೋ ಮುಗಿಯಿತು. ಹಣ ಹೋಯಿತು ಎಂದೇ ಲೆಕ್ಕ!
Leave A Reply