ಈ ಮಹಿಳೆಯ ಹಠ, ಬದುಕುತ್ತಿರುವ ರೀತಿಯ ಕತೆ ಕೇಳಿದರೆ ನಮ್ಮ ಸೋಮಾರಿತನವೂ ಓಡಿಹೋಗುತ್ತದೆ!
ಕೋಲ್ಕತ್ತಾ: ನಮ್ಮಲ್ಲಿ ಬಹುತೇಕರು ಇರುವುದೇ ಹೀಗೆ. ಅವರಿಗೆ ದಿನಕ್ಕೆ ಎಂಟು ತಾಸು ಕೆಲಸ ಮಾಡುವುದೇ ಸಾಧನೆ ಹಾಗೂ ಬೇಜಾರು. ಸಣ್ಣ ತಲೆನೋವು ಆವರಿಸಿದರೂ, ಜ್ವರ ಬಂದರೂ ಮೂರು ದಿನ ಕೆಲಸಕ್ಕೆ ರಜೆ ಹಾಕುವ ಕುರಿತು ಯೋಚಿಸುವವರೇ ತುಂಬ ದಿನ. ಅದರಲ್ಲೂ ಇಂದಿನ ಸ್ಮಾರ್ಟ್(ಫೋನ್) ಯುಗದಲ್ಲಿ ಹೊಟೇಲ್ ಹೋಗಿ ಊಟ ಮಾಡಲು ಸಹ ಸೋಮಾರಿತನ ಮಾಡುವವರೂ ಇದ್ದಾರೆ.
ಆದರೆ ಕೋಲ್ಕತ್ತಾದ ಸೋನಾಲಿ ಘೋಷ್ ಎಂಬ 28 ವರ್ಷದ ಮಹಿಳೆ ಮಾತ್ರ, ಸಹಜ ಸೋಮಾರಿತನವನ್ನೂ ಮರೆತು, ಪುರುಷರಿಗೇ ಸವಾಲಾಗುವ ಮೂರು ಗಾಲಿಯ ಸೈಕಲ್ ಮೇಲೆ ಪ್ರಯಾಣಿಕರನ್ನು ಕೂರಿಸಿಕೊಂಡು, ಅವರು ಹೇಳಿದ ಜಾಗಕ್ಕೆ ತಲುಪಿಸುವ ಮೂಲಕ ಸ್ವಾವಲಂಬಿ ಹಾಗೂ ದಿಟ್ಟ ಜೀವನ ಸಾಗಿಸುತ್ತಿದ್ದಾರೆ.
ಇಷ್ಟೇ ಅಲ್ಲ, 2013ರಿಂದ ಮೂರು ಚಕ್ರದ ಸೈಕಲ್ ಓಡಿಸುತ್ತಿರುವ ಸೋನಾಲಿ ಪಶ್ಚಿಮ ಬಂಗಾಳದಲ್ಲಿ ಮೂರು ಚಕ್ರದ ಸೈಕಲ್ ತುಳಿಯುವ ಮೊದಲ ಮಹಿಳೆ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಅಂದಹಾಗೆ, ಪುರುಷರಿಗೇ ಸವಾಲಾಗುವ ಈ ಕೆಲಸವನ್ನು ಚಾಚೂತಪ್ಪದೆ ನಿತ್ಯ ಮಾಡುತ್ತಿರುವುದು ಸೋನಾಲಿ ವೈಶಿಷ್ಟ್ಯ.
ಸೋನಾಲಿ ಘೋಷ್ ಅವರಿಗೆ ಎಲ್ಲರಂತೆಯೇ ಉತ್ತಮ ಬಾಲ್ಯವಿತ್ತು. ಮನೆಯಲ್ಲಿ ನಗುವಿತ್ತು. ಸೋನಾಲಿ 23 ವರ್ಷದವಳಿದ್ದಾಗ ಮದುವೆ ಆಸೆಗಳು ಸಹ ಚಿಗುರೊಡೆದಿದ್ದವು. ಆದರೆ 2013ರಲ್ಲಿ ಅಪ್ಪ ತೀರಿಕೊಂಡ ಬಳಿಕ ಇಡೀ ಕುಟುಂಬವೇ ಬೀದಿಗೆ ಬರುವ ಪರಿಸ್ಥಿತಿ ಎದುರಾಗಿತ್ತು. ಆಗ ಸೋನಾಲಿ ಮೂರು ಗಾಲಿಯ ಸೈಕಲ್ ಓಡಿಸಲು ತೀರ್ಮಾನಿಸಿದ್ದು ಹಾಗೂ ಪ್ರಸ್ತುತ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
23ನೇ ವರ್ಷದಿಂದ ಮೂರು ಚಕ್ರದ ಸೈಕಲ್ ಓಡಿಸಲು ಆರಂಭಿಸಿದೆ. ಅಪ್ಪ ನಮಗೆ ಶಿಕ್ಷಣ ಕೊಡಿಸುವ ಸ್ಥಿತಿಯಲ್ಲಿ ಇರದ ಕಾರಣ ಓದಲಿಲ್ಲ. ಹಾಗಾಗಿ ಶಿಕ್ಷಣ ಬೇಕಾಗದ ಸೈಕಲ್ ತುಳಿಯುವ ಕೆಲಸಕ್ಕೆ ಮುಂದಾದೆ. ಆರಂಭದಲ್ಲಿ ಕಷ್ಟವಾದರೂ ಈಗ ಹೊಂದಿಕೊಂಡಿದ್ದೇನೆ. ನಿತ್ಯ ನೂರಾರು ರೂಪಾಯಿ ದುಡಿಯುತ್ತೇನೆ ಎನ್ನುತ್ತಾರೆ ಸೋನಾಲಿ. ಅದೇನೇ ಇರಲಿ ಮದುವೆಯಾಗಿ, ಸ್ಥಿತಿವಂತ ಗಂಡನ ಮನೆ ಸೇರಬೇಕು ಎನ್ನುವ ಹೆಣ್ಣುಮಕ್ಕಳಿರುವ ಈ ಕಾಲದಲ್ಲಿ ಸೋನಾಲಿ ಕುಟುಂಬಕ್ಕೋಸ್ಕರ ದುಡಿಯುತ್ತಿರುವುದು ಶ್ಲಾಘನೀಯ.
Leave A Reply