ಮಳೆ ಅಬ್ಬರ: ಪುತ್ತೂರಿನಲ್ಲಿ ಗೋಡೆ ಕುಸಿದು ಅಜ್ಜಿ, ಮೊಮ್ಮಗ ಸಾವು!
ಮಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಪುತ್ತೂರಿನಲ್ಲಿ ಮನೆ ಗೋಡೆ ಕುಸಿದು ಬಿದ್ದು ಅಜ್ಜಿ ಮತ್ತು ಮೊಮ್ಮಗ ಬಲಿಯಾಗಿದ್ದಾರೆ. ಶುಕ್ರವಾರ ಮುಂಜಾನೆಯಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಪುತ್ತೂರು, ಸುಳ್ಯ, ಬೆಳ್ತಂಗಡಿ ,ಬಂಟ್ವಾಳ, ಮೂಡಬಿದಿರೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನೀರಿನ ಹರಿವು ಹೆಚ್ಚಳವಾಗಿರುವುದರಿಂದ ನದಿ ನಾಲೆಗಳು ಅಪಾಯ ಮಟ್ಟದಲ್ಲಿ ಉಕ್ಕಿ ಹರಿಯುತ್ತಿವೆ. ಜಿಲ್ಲೆಯ ಮೂಡಬಿದಿರೆ, ಸುಳ್ಯ, ಬೆಳ್ತಂಗಡಿ ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಎಲ್ಲೆಡೆ ಧಾರಾಕಾರ ಮಳೆಯಾಗುತ್ತಿರುವುದರಿಂದ ವಾಹನ ಸಂಚಾರ ಕಷ್ಟವಾಗಿದೆ. ಜನರು ಹೊರಗೆ ಓಡಾಡಲು ಪರದಾಡುತ್ತಿದ್ದು, ಇದರಿಂದ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದೆ.
ಅಜ್ಜಿ, ಮೊಮ್ಮಗ ಸಾವು: ಮಳೆಯಿಂದ ತೇವಗೊಂಡಿದ್ದ ಗೋಡೆ ಕುಸಿದು ಇಬ್ಬರು ಮೃತಪಟ್ಟ ಘಟನೆ ಪುತ್ತೂರಿನ ಹೆಬ್ಬಾರಬೈಲಿನಲ್ಲಿ ನಡೆದಿದೆ. ಶುಕ್ರವಾರ ಸುರಿದ ವಿಪರೀತ ಮಳೆಯಿಂದ ಹಸಿಯಾಗಿದ್ದ ಗೋಡೆ, ಶುಕ್ರವಾರ ರಾತ್ರಿ ಮನೆಯಲ್ಲಿ ಮಲಗಿದ್ದ ಅಜ್ಜಿ ಮತ್ತು ಮೊಮ್ಮಗನ ಮೇಲೆ ಬಿದ್ದಿದೆ. ಇದರಿಂದ ಪಾರ್ವತಿ (65) ಹಾಗೂ ಅವರ ಮೊಮ್ಮಗ ಧನುಷ್ (11) ಮೃತಪಟ್ಟಿದ್ದಾರೆ. ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪುತ್ತೂರು ಸಹಾಯಕ ಕಮಿಷನರ್ ಎಚ್.ಕೃಷ್ಣಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Leave A Reply