ಕಾರವಾರ-ಬೆಂಗಳೂರು ಟ್ರೇನಿನ ಜನರಲ್ ಬೋಗಿಯಲ್ಲಿ ಹೆಂಡ್ತಿ ಮಕ್ಕಳೊಂದಿಗೆ ಪ್ರಯಾಣ-ಹೈರಾಣ!
ನೀವು ಕಾರವಾರದಿಂದ ಮಂಗಳೂರಿಗೆ ಹೊರಟಿದ್ದೀರಾ? ಅದಕ್ಕಾಗಿ ಕಾರವಾರ ಟು ಬೆಂಗಳೂರಿಗೆ ಹೋಗುವ ಸಂಜೆಯ ಟ್ರೇನ್ ನಲ್ಲಿ ಹೋಗುವ ಪ್ಲಾನ್ ಹಾಕಿದ್ದಿರಾ? ಹಾಗಾದರೆ ಒಂದಿಷ್ಟು ಕ್ಯಾರ್ ತೆಗೆದುಕೊಳ್ಳಿ. ಒಂದು ವೇಳೆ ನೀವು ಕುಮುಟಾ, ಗೋಕರ್ಣ, ಬೈಂದೂರಿನಿಂದ ಸಂಜೆ ಮಂಗಳೂರಿಗೆ ಬರುವುದಿದ್ದರೆ ಒಂದು ಟ್ರೇನ್ ಇದೆ. ಆ ಟ್ರೇನ್ ಕಾರವಾರದಿಂದ ಮಂಗಳೂರಿಗೆ ಬಂದು ನಂತರ ಇಲ್ಲಿಂದ ಮೈಸೂರು ಆಗಿ ಬೆಂಗಳೂರಿಗೆ ಹೋಗುತ್ತದೆ. ಆ ಟ್ರೇನ್ ನಲ್ಲಿ ನನಗಾದ ಅನುಭವವನ್ನು ನಿಮಗೆ ಹೇಳುತ್ತೇನೆ. ಯಾಕೆಂದರೆ ಕನಿಷ್ಟ ನೀವಾದರೂ ಈ ಸಮಸ್ಯೆಗೆ ಸಿಲುಕದಿರಲಿ ಎನ್ನುವ ಆಶಯ.ನಾನು ಹಾಗೂ ನನ್ನ ಪತ್ನಿ ಭಾನುವಾರ ಜುಲೈ 23 ರಂದು ಸಂಜೆ 4.55 ಕ್ಕೆ ಕೊಲ್ಲುರಿನಿಂದ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಬಂದೆವು. ಅಲ್ಲಿಂದ ಮಂಗಳೂರಿಗೆ 5 ಗಂಟೆ ಸುಮಾರಿಗೆ ಒಂದು ಟ್ರೇನ್ ಇದೆ ಎಂದು ಮಾಹಿತಿ ನಮಗೆ ಬೆಳಿಗ್ಗೆ ಅಲ್ಲಿ ವಿಚಾರಣೆ ಕೌಂಟರ್ ನಲ್ಲಿದ್ದ ಸಿಬ್ಬಂದಿ ಹೇಳಿದ್ದರು. ಸಂಜೆ ನಾವು ಟ್ರೇನ್ ಇದೆಯಾ? ಎಷ್ಟೊತ್ತಿಗೆ ಎಂದು ಕೇಳಿದಾಗ 5.30 ಗೆ ಇದೆ. ಕಾರವಾರದಿಂದ ಮಂಗಳೂರು ಸೆಂಟ್ರಲ್ ಆಗಿ ಬೆಂಗಳೂರಿಗೆ ಹೋಗುವ ಟ್ರೇನ್ ಎಂದರು. ಸರಿ, ಟಿಕೇಟ್ ಕೊಡಿ ಎಂದಾಗ ಜನರಲ್ ಅಥವಾ ಸ್ಲೀಪರಾ ಎಂದು ಕೇಳಿದರು. ನಾವು ಎಂಟು ಗಂಟೆಯೊಳಗೆ ಮಂಗಳೂರಿಗೆ ತಲುಪುದಕ್ಕಾಗಿ ಜನರಲ್ ಸಾಕು ಎಂದು ಅಂದುಕೊಂಡು ಜನರಲ್ ಟಿಕೇಟಿಗೆ ಇಬ್ಬರಿಗೆ 140 ರೂಪಾಯಿ ಪಾವತಿಸಿ ಟಿಕೇಟ್ ತೆಗೆದುಕೊಂಡೆವು. ಸುಮಾರು 5.40ರ ಆಸುಪಾಸಿನಲ್ಲಿ ಟ್ರೇನ್ ಬಂತು. ಅದರಲ್ಲಿದ್ದ ಬೋಗಿಯಲ್ಲಿ ಕುಳಿತುಕೊಳ್ಳುವುದು ಬಿಡಿ, ನಿಲ್ಲಲು ಕೂಡ ಜಾಗ ಇರಲಿಲ್ಲ. ನಿಲ್ಲುವುದು ಬಿಡಿ, ಅದರ ಒಳಗೆ ಕಾಲಿಡುವುದು ಕೂಡ ಕಷ್ಟ ಎನ್ನುವ ವಾತಾವರಣ ಇತ್ತು. ಅಷ್ಟರಲ್ಲಿ ಒಬ್ಬರು ಮಂಗಳಮುಖಿ ಬಂದು ” ಜಾಗ ಬಿಡಿ, ಹೆಣ್ಣು ಮಗಳು ಒಬ್ಬಳು ಬಂದಿದ್ದಾಳೆ, ಸ್ವಲ್ಪ ನಿಲ್ಲಲು ಜಾಗ ಕೊಡಿ” ಎಂದು ಜೋರು ಮಾಡಿದ ನಂತರ ನನ್ನ ಪತ್ನಿಗೆ ಒಳಗೆ ಕಾಲಿಡುವಷ್ಟು ಜಾಗ ಸಿಕ್ಕಿತು. ಒಳಗೆ ಟಾಯ್ಲೆಟ್ ಪಕ್ಕದಲ್ಲಿ ಒಂದು ಮೂಲೆಯಲ್ಲಿ ಎಷ್ಟು ಕಷ್ಟಪಟ್ಟು ನಾವಿಬ್ಬರು ನಿಂತಿದ್ದೆವೆಂದರೆ ಅಲ್ಲಿ ಸರಿಯಾಗಿ ಗಾಳಿ ಕೂಡ ಹರಿದಾಡದಷ್ಟು ಜನ ಸೇರಿದ್ದರು. ಹಲವರ ಉಸಿರು ಒಬ್ಬೊಬ್ಬರಿಗೆ ತಾಗುವಷ್ಟು ಜನ ತಾಗಿಕೊಂಡು ನಿಂತಿದ್ದರು. ನನ್ನ ಪತ್ನಿಯ ಪಕ್ಕದಲ್ಲಿ ಇನ್ನಿಬ್ಬರು ಹೆಂಗಸರು ಉಸಿರಾಡಲು ಒದ್ದಾಡುತಿದ್ದಂತೆ ಕಂಡು ಬಂತು. ಮಂಗಳೂರಿನ ತನಕ ಹೀಗೆ ನಿಂತರೆ ಉಸಿರುಗಟ್ಟಿ ಸಾಯುವುದು ಗ್ಯಾರಂಟಿ ಎಂದು ಅನಿಸಿತು. ನಾವು ಬೈಂದೂರಿನ ನಂತರ ಕುಂದಾಪುರದ ಸ್ಟಾಪ್ ಬಂದಾಗ ಇಳಿದು ಟ್ರೇನ್ ನ ಕೊನೆಯಲ್ಲಿ ಇರುವ ಮತ್ತೊಂದು ಜನರಲ್ ಬೋಗಿಗೆ ಹೋಗುವ ಎಂದುಕೊಂಡೆವು. ನಾವು ಕುಂದಾಪುರದಲ್ಲಿ ಇಳಿದು ಹಿಂದಿನ ಬೋಗಿಯತ್ತ ಹೆಜ್ಜೆ ಹಾಕುತ್ತಿದ್ದಂತೆ ಯಾರೋ ಹಿಂದಿನಿಂದ ಎಲ್ಲಿಗೆ ಎಲ್ಲಿಗೆ ಎಂದು ಕೂಗಿ ಕರೆಯುವುದು ಕೇಳಿಸಿತು. ತಿರುಗಿದರೆ ಟಿಸಿಯವರು ಜನರಲ್ ಬೋಗಿ ಹೊರಗೆ ನಿಂತಿದ್ದರು. ನಾವು ಬೇರೆ ಜನರಲ್ ಕೋಚ್ ಕಡೆಗೆ ಹೋಗುತ್ತಿದ್ದೇವೆ, ಈ ಕೋಚ್ ನಲ್ಲಿ ಉಸಿರಾಡಲು ಸಾಧ್ಯವಿಲ್ಲ ಎಂದೆವು. ಅದಕ್ಕೆ ಅವರು ಈ ಟ್ರೇನ್ ನಲ್ಲಿ ಇದೊಂದೇ ಜನರಲ್ ಕೋಚ್ ಬೇರೆ ಇಲ್ಲ ಎಂದರು. ಸರಿ, ಬೇರೆಯದ್ದರಲ್ಲಿ ಹೋಗ್ತೀವಿ. ಎಷ್ಟು ಎಕ್ಸಟ್ರಾ ಕೊಡಬೇಕಾಗುತ್ತದೆ ಎಂದು ಕೇಳಿದೆ. ಒಬ್ಬೊಬ್ಬರಿಗೆ ಮಂಗಳೂರು ತನಕ 90 ರೂಪಾಯಿ ಆಗುತ್ತದೆ ಎಂದರು. ಪರವಾಗಿಲ್ಲ ಎಂದೆ. ಹೋಗಿ ಎಸ್ 1 ನಲ್ಲಿ ಕುಳಿತುಕೊಳ್ಳಿ ಎಂದರು.
ಅಷ್ಟರಲ್ಲಿ ಟ್ರೇನ್ ಬಿಡುವ ಶಬ್ದ ಕೇಳಿತು. ನಾವಿಬ್ಬರು ಎದುರಿಗೆ ಸಿಕ್ಕಿದ ಸ್ಲೀಪರ್ ಸೆಲ್ ನಲ್ಲಿ ಹತ್ತಿದೆವು. ಟ್ರೇನ್ ಬಿಡುತ್ತಿದ್ದಂತೆ ಟಿಸಿ ಬಂದರು. ಟಿಕೇಟ್ ಕೇಳಿದರು. ನಾನು ತೋರಿಸಿದೆ. ಅದನ್ನು ನೋಡಿ ನೀವು ಇನ್ನು 140 ರೂಪಾಯಿ ಕೊಡಬೇಕಾಗುತ್ತೆ ಎಂದೆ. ಆಯಿತು ಎಂದು ಪರ್ಸ ತೆಗೆದೆ. 140 ಕೊಟ್ಟೆ. ಅವರು ಒಂದು ಟಿಕೇಟ್ ಬುಕ್ ತೆಗೆದು, ಅದರಲ್ಲಿ ವೈದ್ಯರ ಅಕ್ಷರಗಳಿಗಿಂತ ಫಾಸ್ಟ್ ಆಗಿ ಕಾಲಂ ತುಂಬಿಸಿ ಅದರ ನಕಲು ಕಾಪಿ (ಅಸಲು ಅವರೇ ಇಟ್ಟುಕೊಂಡರು) ಕೊಟ್ಟರು. ಅದರ ನಂತರ ನಾವು ಆರಾಮವಾಗಿ ಮಂಗಳೂರಿಗೆ ಬಂದೆವು. ಬರುವಾಗ ಸುರತ್ಕಲ್ ಸ್ಟಾಪಿನಲ್ಲಿ ಇಳಿದೆವು. ಅದಕ್ಕಾಗಿ ನಾನೀಗ ಹೇಳುವುದೇನೆಂದರೆ ನೀವು ಕಾರವಾರ ಮತ್ತು ಅದರ ನಂತರ ಸಿಗುವ ಯಾವುದೇ ಸ್ಟಾಪಿನಲ್ಲಿ ಹತ್ತಿದರೆ ಒಂದು ವೇಳೆ ನೀವು ಪತ್ನಿ, ಮಕ್ಕಳೊಂದಿಗೆ ಪ್ರಯಾಣಿಸಬೇಕಾದರೆ ದಯವಿಟ್ಟು ಸ್ಲೀಪರ್ ಕ್ಲಾಸಿನಲ್ಲಿ ಪ್ರಯಾಣಿಸಲು ಕೌಂಟರಿನಲ್ಲಿ ಟಿಕೇಟ್ ಪಡೆದುಕೊಳ್ಳಿ. ಇಲ್ಲಿಯೇ ಮಂಗಳೂರು ಒಂದೆರಡು ಗಂಟೆಯ ಪ್ರಯಾಣ ಎಂದು ಅಂದುಕೊಂಡು ಜನರಲ್ ಟಿಕೇಟ್ ತೆಗೆದುಕೊಂಡರೋ ಆ ರಶ್ ನಲ್ಲಿ ಉಸಿರುಗಟ್ಟಿ ಹೈರಾಣಾಗುವುದು ನೂರಕ್ಕೆ ನೂರು ಶೇಕಡಾ ಗ್ಯಾರಂಟಿ.