ಭಾರೀ ಮಳೆ: ನಾಲ್ಕನೇ ಬಾರಿ ಮುಳುಗಿದ ಸುಬ್ರಹ್ಮಣ್ಯ ಹೊಸಮಠ ಸೇತುವೆ

ಮಂಗಳೂರು: ಕಳೆದ 3 ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆ ಈಗ ಸ್ವಲ್ಪ ಬಿಡುವು ಪಡೆದಿದೆ. ಮಳೆಯ ಅಬ್ಬರ ಕರಾವಳಿಯಲ್ಲಿ ತಗ್ಗಿದ್ದು, ಮೂರು ದಿನಗಳಿಂದ ಪ್ರವಾಹ ಪರಿಸ್ಥಿತಿ ಇಳಿಮುಖ ಗೊಂಡಿದೆ. ತಗ್ಗು ಪ್ರದೇಶಕ್ಕೆ ನುಗ್ಗಿದ್ದ ಮಳೆನೀರು ಹರಿದು ಹೋಗಿದೆ. ಈ ಹಿನ್ನೆಲೆಯಲ್ಲಿ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಆದರೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಎಡೆಬಿಡದೆ ಮಳೆ ಮುಂದುವರಿದ ಪರಿಣಾಮ ಜಿಲ್ಲೆಯ ನೇತ್ರಾವತಿ ಮತ್ತು ಕುಮಾರಧಾರಾ ಸೇರಿದಂತೆ ಇನ್ನಿತರ ನದಿಗಳು ತುಂಬಿ ಉಕ್ಕಿ ಹರಿಯತೊಡಗಿವೆ. ಸುಬ್ರಹ್ಮಣ್ಯ ಬಳಿಯ ಹೊಸಮಠ ಸೇತುವೆ ಮತ್ತೆ ಮುಳುಗಡೆಯಾಗಿದೆ.ಕುಮಾರಧಾರಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹೊಸಮಠ ಸೇತುವೆ ಮುಳುಗಡೆಯಾದ ಕಾರಣ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ – ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಬಂದ್ ಆಗಿದೆ. ಈ ಪರಿಣಾಮ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಭಕ್ತರು ಪರದಾಡುವಂತಾಗಿದೆ.
ಇದೇ ವೇಳೆ, ಸಂಗಮ ಕ್ಷೇತ್ರ ಉಪ್ಪಿನಂಗಡಿ ಬಳಿ ನೀರಿನ ಮಟ್ಟ ಏರಿಕೆಯಾಗಿದ್ದು, ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಸಂಗಮಗೊಂಡು ಸಹಸ್ರಲಿಂಗೇಶ್ವರ ದೇವಸ್ಥಾನದ ಅಂಗಣಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ಕಳೆದ 1 ತಿಂಗಳಲ್ಲಿ ಇದು 4 ನೇ ಬಾರಿ ಹೊಸಮಠ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮುಳುಗಡೆಯಾದ ಕಾರಣ ಸೇತುವೆಯ ಎರಡು ಬದಿಗಳಲ್ಲಿ ಪೊಲೀಸರು ಬ್ಯಾರಿಕೇಡ್ ಗಳನ್ನು ಅಳವಡಿಸಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದಾರೆ.ನೀರಿನ ಮಟ್ಟ ಇಳಿಕೆಯಾದ ಬಳಿಕ ಮತ್ತೆ ಸೇತುವೆಯ ಮೇಲೆ ವಾಹನ ಸಂಚಾರ ಆರಂಭವಾಗಲಿದೆ. ಇನ್ನು ಜಡಿ ಮಳೆಯಿಂದಾಗಿ ಹೆಚ್ಚಿನ ಹಾನಿ ಆಗದಿದ್ದರೂ, ಜನರು ಚಳಿಯಿಂದ ಥರಗುಟ್ಟುವಂತಾಗಿದೆ.
Leave A Reply