ಹೊಸಾಡು ಗ್ರಾಮದಲ್ಲಿ ಸಿಗಡಿ ಕೃಷಿ ಕೆರೆಗೆ ವಿಷ: 25 ಲಕ್ಷ ರೂ.ನಷ್ಟ
ಉಡುಪಿ: ಮಾರಾಟ ಮಾಡಲು ಸಿದ್ಧವಾಗಿದ್ದ ಸುಮಾರು 25 ಲಕ್ಷ ರೂ. ಮೌಲ್ಯದ ಸಿಗಡಿಗಳಿದ್ದ 2 ಕೆರೆಗಳಿಗೆ ಕಿಡಿಗೇಡಿಗಳು ವಿಷವಿಕ್ಕಿದ ಘಟನೆ ಬೈಂದೂರು ತಾಲೂಕಿನ ಹೊಸಾಡು ಗ್ರಾಮದಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ನಡೆದಿದೆ.
ಬಂಟ್ವಾಡಿ ನಿವಾಸಿ ನರಸಿಂಹ ಮೊಗ ವೀರ ಅವರು ಹೊಸಾಡು ಗ್ರಾಮದ ಅರಾಟೆಯ ತಮ್ಮ 1.60 ಎಕರೆ ವಿಸ್ತೀ ರ್ಣದ ಜಾಗದಲ್ಲಿ ಮಾಡಿದ ಎರಡು ಸಿಗಡಿ ಕೆರೆಗೆ ದುಷ್ಕರ್ಮಿಗಳು ಬೆಳ್ಳಂಬೆಳಗ್ಗೆ ವಿಷ ಹಾಕಿದ್ದಾರೆ. ನರಸಿಂಹ ಮೊಗವೀರ ಕಳೆದ 90 ದಿನಗಳಿಂದ ಇಲ್ಲಿ ಸಿಗಡಿ ಕೃಷಿ ಮಾಡುತ್ತಿದ್ದರು. 1.60 ಎಕರೆ ವಿಸ್ತೀರ್ಣದ 2 ಕೆರೆಗಳ ಪೈಕಿ ಒಂದು ಇವರ ಸ್ವಂತದ್ದಾಗಿದ್ದು, ಇನ್ನೊಂದನ್ನು ದೇವಸ್ಥಾನದಿಂದ ಲೀಸ್ ಗೆ ಪಡೆದು ಸಿಗಡಿ ಕೃಷಿ ಮಾಡುತ್ತಿದ್ದರು. ಒಟ್ಟು 9,000 ಸಾವಿರ ಕೆಜಿ ಸಿಗಡಿ ಸಿಗಲಿತ್ತು. ದುಷ್ಕರ್ಮಿಗಳಿಂದಾಗಿ 9 ಟನ್ ಸಿಗಡಿ ಕೃಷಿಯೇ ನಾಶವಾಗಿದೆ.
ನರಸಿಂಹ ಅವರು ಆ ಕೆರೆಯ ಪಕ್ಕದಲ್ಲೇ ಶೆಡ್ ನಿರ್ಮಿಸಿ ಕಳೆದ 15 ದಿನಗಳಿಂದ ಪ್ರತಿ ರಾತ್ರಿ ಕಾವಲು ಕಾಯುತ್ತಿದ್ದರು. ಭಾನುವಾರ ಮಧ್ಯರಾತ್ರಿ 12.30ರ ವೇಳೆ ಎಚ್ಚರವಾಗಿದ್ದು, ಆಗ ಎಲ್ಲ ಕಡೆಗೆ ಲೈಟ್ ಹಾಕಿ ನೋಡಿದ್ದಾರೆ. ಮುಂಜಾನೆ 4.30ರ ಸುಮಾರಿಗೆ ಮತ್ತೆ ಎಚ್ಚರವಾಗಿದ್ದು, ಲೈಟ್ ಹಾಕಿ ನೋಡಿದಾಗ ಒಂದು ಕೆರೆಯಲ್ಲಿ ಕೆಮಿಕಲ್ ಇರುವ ಬಕೆಟ್ ಸಿಕ್ಕಿತ್ತು.
ತತ್‌ಕ್ಷಣ ಶೆಡ್ ನಲ್ಲಿ ನನ್ನೊಂದಿಗೆ ಕೆಲಸಕ್ಕಿದ್ದ ಇಬ್ಬರು ಕೆಲಸದವರನ್ನು ಕರೆದು ಎಲ್ಲ ಕಡೆ ಲೈಟ್ ಹಾಕಿ ನೋಡಿದಾಗ ಸಿಗಡಿಗಳು ಸತ್ತು ಬಿದ್ದಿದ್ದವು ಎಂದು ನರಸಿಂಹ ಮೊಗವೀರ ಅವರು ತಿಳಿಸಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Leave A Reply