ಡ್ರಗ್ಸ್ ಮಾಫಿಯಾದ ಕಿಂಗ್ ಪಿನ್ ಗಳನ್ನು ಹಿಡಿದರೆ ಹಸ್ತಕ್ಷೇಪ ಮಾಡಲ್ಲ ಎಂದಿರುವ ಕರಾವಳಿಯ ಶಾಸಕರು!
ಡ್ರಗ್ಸ್ ಮಾಫಿಯಾದ ವಿಷಯ ವಿಧಾನಸಭೆಯಲ್ಲಿ ಪ್ರತಿನಿಧಿಸಿದೆ. ರಾಜ್ಯದ ಕಾಂಗ್ರೆಸ್, ಭಾರತೀಯ ಜನತಾ ಪಾರ್ಟಿಯ ನಾಯಕರು ಮಾತನಾಡಿದ್ದಾರೆ. ಕರಾವಳಿಯಿಂದ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ|ಭರತ್ ಶೆಟ್ಟಿ ಮಾತನಾಡಿದ್ದಾರೆ. ಡ್ರಗ್ಸ್ ಮಾಫಿಯಾಕ್ಕೆ ಮಂಗಳೂರು ನಗರದ ಯುವಜನ ಬಲಿಯಾಗುತ್ತಿರುವುದು ಇವತ್ತು ನಿನ್ನೆಯಿಂದ ಅಲ್ಲ, ಅನೇಕ ವರ್ಷಗಳಿಂದ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಲಿಯಾಗುತ್ತಿದ್ದಾರೆ. ಯಾವುದಾದರೂ ಹುಡುಗಿಯ ಆತ್ಮಹತ್ಯೆ, ಹುಡುಗಿ ಗಾಂಜಾ ಆಸೆಗೆ ಅನ್ಯ ಧರ್ಮದ ಯುವಕನೊಂದಿಗೆ ಓಡಿಹೋದಾಗ ಈ ವಿಷಯ ಮಾಧ್ಯಮಗಳಲ್ಲಿ ಎದ್ದು ಕಾಣುತ್ತದೆ. ಒಂದಿಷ್ಟು ದಿನ ಟಿವಿ ಚಾನೆಲ್ ಗಳಲ್ಲಿ ಚರ್ಚೆಯಲ್ಲಿ ಇರುತ್ತದೆ. ಅದರ ನಂತರ ಎಲ್ಲರೂ ಮರೆತು ಬಿಡುತ್ತಾರೆ, ಮತ್ತೊಂದು ದೊಡ್ಡ ದುರಂತ ಆಗುವ ತನಕ.
ಚರ್ಚೆಯಾಗುವುದು ದುರ್ಘಟನೆ ನಡೆದಾಗ ಮಾತ್ರ…
ಕಳೆದ ಬಾರಿ ಪಾಲಿಕೆಯ ಮಾಜಿ ಜನಪ್ರತಿನಿಧಿಯೊಬ್ಬರ ಮಗನ ಗಾಂಜಾ ಚಟ ಅನ್ಯಕೋಮಿನ ಹುಡುಗಿಗೆ ತಗುಲಿ ಆಕೆ ಅದಕ್ಕೆ ಬಲಿ ಬಿದ್ದು ಕೊನೆಗೆ ಅವಳನ್ನು ಮತ್ತೆ ಸಹಜ ಜೀವನಕ್ಕೆ ತರಬೇಕಾದರೆ ಹುಡುಗಿಯ ಕುಟುಂಬಕ್ಕೆ ಸಾಕೋ ಸಾಕಾಗಿತ್ತು. ಅದರ ನಂತರ ಹೀಗೆ ಆದಾಗ ಒಂದಿಷ್ಟು ಸುದ್ದಿಗೋಷ್ಟಿಗಳು, ಸಂಘಟನೆಗಳ ಪ್ರತಿಭಟನೆ, ಪೊಲೀಸ್ ಅಧಿಕಾರಿಗಳಿಗೆ ಮನವಿ ಕೊಡುವುದು ಇದೆಲ್ಲಾ ನಡೆಯುತ್ತವೆ. ರಾಜ್ಯ ಮಟ್ಟದ ವಾಹಿನಿಗಳು ಈ ಕುರಿತು ವಿಶೇಷ ಸ್ಟೋರಿಗಳನ್ನು ಮಾಡುತ್ತವೆ. ಪೊಲೀಸ್ ಅಧಿಕಾರಿಗಳು ಕೂಡ ಸುದ್ದಿಗೋಷ್ಟಿ ಕರೆದು ತಾವು ಮಾಡಿರುವ ಕಾನೂನು ಕ್ರಮಗಳ ಬಗ್ಗೆ ಮಾತನಾಡುತ್ತಾರೆ. ಇದೆಲ್ಲ ಒಂದು ದೊಡ್ಡ ಮಳೆಯಂತೆ ಬಂದು ಹೋಗುತ್ತದೆ. ಒಂದಿಷ್ಟು ದಿನ ನೆಲ ಒದ್ದೆಯಾಗಿರುತ್ತದೆ. ಬಳಿಕ ಎಲ್ಲವೂ ಸಹಜ ಸ್ಥಿತಿಗೆ ಬರುತ್ತದೆ. ಒಂದಿಷ್ಟು ದಿನ ಈ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಗಾಂಜಾ, ಅಫೀಮು ಸಹಿತ ಡ್ರಗ್ಸ್ ದಂಧೆಯಲ್ಲಿ ಇರುವವರು ಮೌನವಾಗಿರುತ್ತಾರೆ. ಎಲ್ಲವೂ ನಾರ್ಮಲ್ ಗೆ ಬರುತ್ತಿದ್ದಂತೆ ಮತ್ತೆ ಚಿಗುರಿಕೊಳ್ಳುತ್ತಾರೆ. ಒಂದಂತೂ ನಿಜ, ಡ್ರಗ್ಸ್ ಜಾಲದಲ್ಲಿ ಬಲಿಯಾಗುವವರಲ್ಲಿ ಹತ್ತಕ್ಕೆ ಎಂಟು ಮಂದಿ ಯುವಕ, ಯುವತಿಯರು. ಅದೇ ರೀತಿಯಲ್ಲಿ ಈ ಡ್ರಗ್ಸ್ ಜಾಲವನ್ನು ಯಶಸ್ವಿಯಾಗಿ ನಡೆಸುತ್ತಿರುವವರು ಯಾವತ್ತಿಗೂ ಇಲ್ಲಿಯ ತನಕ ಸಿಕ್ಕಿ ಬಿದ್ದು ಜೈಲು ಪಾಲಾಗಿಲ್ಲ. ಆದರೂ ಅದು ಬೆರಳೆಣಿಕೆಯ ದಿನ ಮಾತ್ರ. ಡ್ರಗ್ಸ್ ಜಾಲದ ಹಿಂದಿರುವ ಕಿಂಗ್ ಪಿನ್ ಗಳು ಇವತ್ತಿನ ತನಕ ಪೊಲೀಸರ ಕೈಗೆ ಸಿಕ್ಕಿಬಿದ್ದಿಲ್ಲ. ಅದರ್ಥ ಪೊಲೀಸರಿಗೆ ಈ ಬಗ್ಗೆ ಅಥವಾ ಡ್ರಗ್ಸ್ ಜಾಲವನ್ನು ಮಂಗಳೂರಿನಲ್ಲಿ ನಡೆಸಿಕೊಂಡು ಬರುತ್ತಿರುವವರು ಯಾರು ಎನ್ನುವುದರ ಬಗ್ಗೆ ಗೊತ್ತಿಲ್ಲ ಎಂದಲ್ಲ.
150 ಗ್ರಾಂಗಿಂತ ಜಾಸ್ತಿ ಹಿಡಿದರಷ್ಟೇ ದೊಡ್ಡ ಪ್ರಕರಣ…
ಜನರೇ ಹೇಳುವಂತೆ ಗಾಂಜಾ ಮಾಫಿಯಾದ ಹಿಂದಿರುವ ಕಾಣದ ಕೈಗಳ ಬಗ್ಗೆ ಪೊಲೀಸರಿಗೆ ಗೊತ್ತಿರುತ್ತದೆ. ಗಾಂಜಾ ಸೇವನೆ ಮಾಡುತ್ತಿರುವವರನ್ನು ಹಿಡಿದಿರುವ ಬಗ್ಗೆ ಆಗಾಗ ಪತ್ರಿಕೆಗಳ ಮೂಲೆಗಳಲ್ಲಿ ವಿಷಯ ಬಂದಿರುತ್ತದೆ. ಆದರೆ ಗಾಂಜಾವನ್ನು ಮಾರಾಟ ಮಾಡುತ್ತಿರುವವರನ್ನು ಹಿಡಿದಿರುವ ಬಗ್ಗೆ ಬರುವುದು ಅಪರೂಪ. ಅದರಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಗಾಂಜಾ ಪತ್ತೆ ಹಚ್ಚಿರುವ ನ್ಯೂಸ್ ಕಾಣಸಿಗುವುದು ಕಡಿಮೆ. ನಿಮಗೆ ಗೊತ್ತಿರುವಂತೆ ಪೊಲೀಸರು 150 ಗ್ರಾಂಗಿಂತ ಹೆಚ್ಚು ಗಾಂಜಾ ಮಾರಾಟ ಮಾಡುತ್ತಿರುವ ಅಥವಾ ಸಾಗಿಸುತ್ತಿರುವವನ್ನು ಹಿಡಿದರೆ ಮಾತ್ರ ಕಠಿಣ ಕೇಸ್ ಹಾಕಬಹುದು. ಅದೇ 150 ಗ್ರಾಂಗಿಂತ ಕಡಿಮೆ ಗಾಂಜಾ ಸಿಕ್ಕಿದರೆ ಆಗ ಕೇಸ್ ಚಿಕ್ಕದಾಗಿರುತ್ತದೆ. ಆರೋಪಿಗೆ ಸುಲಭವಾಗಿ ಜಾಮೀನು ಸಿಗುತ್ತದೆ. ಅನೇಕ ಬಾರಿ ಜನರು ಹೇಳುವಂತೆ 150 ಗ್ರಾಂಗಿಂತ ಹೆಚ್ಚೆ ಗಾಂಜಾವನ್ನು ಪೊಲೀಸರು ಒಬ್ಬ ಆರೋಪಿಯಿಂದ ವಶಪಡಿಸಿಕೊಂಡರೂ ದಾಖಲೆಯಲ್ಲಿ ತೋರಿಸುವಾಗ ಕಡಿಮೆ ತೋರಿಸಿ ಆರೋಪಿ ಕಾನೂನಿನ ಬಲೆಯಿಂದ ತಪ್ಪಿಸಿಕೊಳ್ಳಲು ನೆರವಾಗುತ್ತಾರೆ ಎನ್ನಲಾಗುತ್ತದೆ. ಗಾಂಜಾ ಮಾಫಿಯಾದ ಬಗ್ಗೆ ಮಂಗಳೂರಿನ ಜನರಿಗೆ ಭಯಂಕರ ಆಕ್ರೋಶವಿದೆ. ಅನೇಕ ಪೋಷಕರಿಗೆ ತಮ್ಮ ಮಕ್ಕಳು ಎಲ್ಲಿಯಾದರೂ ಇದರಲ್ಲಿ ಸಿಕ್ಕಿಬೀಳುತ್ತಾರೋ ಎನ್ನುವ ಹೆದರಿಕೆ ಇದೆ. ಎಂತೆಂತಹ ಪ್ರಕರಣಗಳನ್ನು ಭೇದಿಸಿರುವ ಮಂಗಳೂರು ಪೊಲೀಸರಿಗೆ ಗಾಂಜಾ ಅಥವಾ ಡ್ರಗ್ಸ್ ಜಾಲದ ಹಿಂದಿರುವ ಮಾಸ್ಟರ್ ಮೈಂಡ್ ಗಳನ್ನು ಸೆರೆಹಿಡಿಯುವುದು ಕಷ್ಟದ ವಿಷಯ ಅಲ್ಲ. ಆದರೆ ಇದಕ್ಕೆ ಇಲ್ಲಿಯ ತನಕ ಸರಿಯಾದ ಅಂಕುಶ ಹಾಕಲು ಜನಪ್ರತಿನಿಧಿಗಳು ಬಿಡುತ್ತಿರಲಿಲ್ಲವೇನೋ. ಆದರೆ ಈಗ ಕರಾವಳಿಯ ಶಾಸಕರುಗಳು ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಒಂದು ವೇಳೆ ಪೊಲೀಸರು ಕಿಂಗ್ ಪಿನ್ ಗಳನ್ನು ಬಂಧಿಸಿದರೆ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಸರಕಾರ ಕಠಿಣ ಕಾನೂನು ಜಾರಿಗೆ ತರಬೇಕು ಎಂದಿದ್ದಾರೆ. ಅನೇಕ ಪ್ರಖ್ಯಾತ ವಿದ್ಯಾ ಸಂಸ್ಥೆಗಳನ್ನು ಹೊಂದಿರುವ ಕರಾವಳಿಗೆ ಡ್ರಗ್ಸ್ ಮಾಫಿಯಾ ದೊಡ್ಡ ಶಾಪ. ಈ ಶಾಪದಿಂದ ವಿಮುಕ್ತಿ ಹೊಂದುವ ಸಮಯ ಹತ್ತಿರ ಬಂದಂತೆ ಕಾಣುತ್ತದೆ. ಅದು ಆದಷ್ಟು ಬೇಗ ಈಡೇರಲಿ, ಗಾಂಜಾ ದಂಧೆಯಲ್ಲಿರುವವರಿಗೆ ಬಿಸಿ ಮುಟ್ಟಿಸುವ ಕೆಲಸ ನಡೆಯಲಿ ಎಂದು ಹಾರೈಸುತ್ತೇನೆ
Leave A Reply