ಕಡಲ್ಕೊರೆತ : ಡೇಂಜರ್ ಝೋನ್ ನಲ್ಲಿ ಸೋಮೇಶ್ವರದ ಕಿನಾರೆ
ಮಂಗಳೂರು : ಕರ್ನಾಟಕದ ಕರಾವಳಿಯಲ್ಲಿ ಮುಂಗಾರು ತೀವ್ರವಾಗುತ್ತಿದ್ದಂತೆ ಸಮುದ್ರ ಕಿನಾರೆಯಲ್ಲಿ ಕಡಲ ಕೊರೆತದ ಭೀತಿ ಆವರಿಸತೊಡಗುತ್ತದೆ. ಮಂಗಳೂರು ಸುತ್ತಮತ್ತ ಕಡಲ ತಡಿಯ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣ ಹಾಗು ಬ್ರೇಕ್ ವಾಟರ್ ನಿಂದಾಗಿ ಕಳೆದ 2 ವರ್ಷಗಳಿಂದ ಕಡಲ ಕೊರೆತದ ಭೀತಿ ತಗ್ಗಿತ್ತು. ಆದರೆ ಈ ಬಾರಿ ಮಳೆಯ ಅಬ್ಬರ ಹೆಚ್ಚಿರುವ ಹಿನ್ನೆಲೆಯಲ್ಲಿ ಮಂಗಳೂರು ಹೊರವಲಯದಲ್ಲಿ ಮತ್ತೆ ಕಡಲ ಕೊರೆತ ಆರಂಭವಾಗಿದೆ.
ಮಂಗಳೂರು ಹೊರವಲಯದ ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಕಡಲಕೊರೆತ ತೀವ್ರಗೊಂಡಿದೆ. ಈ ಹಿನ್ನಲೆಯಲ್ಲಿ ಸೋಮೇಶ್ವರ ಕಡಲ ಕಿನಾರೆಯನ್ನು ಜಿಲ್ಲಾಡಳಿತ ಡೇಂಜರ್ ಝೋನ್ ಎಂದು ಘೋಷಿಸಿದೆ. ಉಳ್ಳಾಲದ ಕೈಕೊ, ಸುಭಾಷ್ ನಗರ ಸೇರಿದಂತೆ ಉಚ್ಚಿಲ ಪ್ರದೇಶದಲ್ಲಿ ಆಳೆತ್ತರದ ಕಲೆಗಳು ಏಳುತ್ತಿದ್ದು ಕಡಲು ರೌದ್ರಾವತಾರ ತಾಳಿದೆ. ಸಮುದ್ರ ತೀರದ ಹಲವಾರು ಮರಗಳನ್ನು ಸಮುದ್ರ ಈಗಾಗಲೆ ಆಪೋಷನ ತೆಗೆದುಕೊಂಡಿದೆ. ಕಲಡ ತೀರದಲ್ಲಿ ವಾಸಿಸುವ ನೂರಾರು ಕುಟುಂಬಗಳು ಆತಂಕದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪ್ರದೇಶದಲ್ಲಿ ಮರಳು ಕರಗಿ ಸಮುದ್ರ ಪಾಲಾಗುತಿದ್ದು ಭೂ ಪ್ರದೇಶ ಸಮುದ್ರದ ಒಡಲು ಸೇರುತ್ತಿದೆ. ಉಲ್ಲಾಳದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳು ಅಪಾಯದ ಅಂಚಿನಲ್ಲಿವೆ. ಸಂಜೆ ಆಗುತ್ತಿದ್ದಂತೆ ಭಾರೀ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಕಳೆದೊಂದು ವಾರದಿಂದ ಸೋಮೇಶ್ವರ – ಉಚ್ಚಿಲದಲ್ಲಿ ಭಾರೀ ಕಡಲ್ಕೊರೆತ ಆರಂಭವಾಗಿದ್ದು ಈ ಕುರಿತು ಜಿಲ್ಲಾಡಳಿತ ಸೇರಿದಂತೆ ಸ್ಥಳಿಯಾಡಳಿತಕ್ಕೆ ಮಾಹಿತಿ ನೀಡಿದ್ದರು ಈ ವರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Leave A Reply