ಕೇರಳದ ಮಾಂಸ ತ್ಯಾಜ್ಯ ಮಾಫಿಯಾ ಪತ್ತೆ ಹಚ್ಚಿದ ಇರ್ದೆ ಗ್ರಾಮಸ್ಥರು
Posted On July 17, 2018
ಮಂಗಳೂರು : ಕೇರಳದ ಮಾಂಸ ವರ್ತಕರು ಕರ್ನಾಟಕದ ಗಡಿ ಭಾಗವನ್ನು ತ್ಯಾಜ್ಯ ಸುರಿಯುವ ಡಂಪಿಂಗ್ ಯಾರ್ಡ್ ಆಗಿ ಪರಿವರ್ತಿಸಿದ್ದು, ಕೇರಳದ ಕ್ಯಾಲಿಕಟ್ ನಿಂದ ಕೋಳಿ ತ್ಯಾಜ್ಯ ಮತ್ತು ಇತರ ಮಾಂಸ ತ್ಯಾಜ್ಯಗಳನ್ನು ಕರ್ನಾಟಕದ ಪ್ರದೇಶದಲ್ಲಿ ಸುರಿಯುವ ಮಾಫಿಯಾವೊಂದನ್ನು ಪುತ್ತೂರಿನಲ್ಲಿ ಪತ್ತೆ ಹಚ್ಚಲಾಗಿದೆ. ಕಳೆದ ಕೆಲವು ದಿನಗಳಿಂದ ಪುತ್ತೂರು ತಾಲೂಕು ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಟನ್ ಗಟ್ಟಲೆ ಕೋಳಿ ತ್ಯಾಜ್ಯ ಹಾಗೂ ಇತರ ಮಾಂಸದ ತ್ಯಾಜ್ಯಗಳನ್ನು ರಾತ್ರೋ ರಾತ್ರಿ ಪುತ್ತೂರು, ಸುಳ್ಯ ಪ್ರದೇಶದಲ್ಲಿ ಸುರಿದು ಹೋಗುವ ತಂಡವೊಂದನ್ನು ಪುತ್ತೂರಿನ ಇರ್ದೆ ಗ್ರಾಮಸ್ಥರು ಮತ್ತು ಪಂಚಾಯತ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ತಂಡ ಕೇರಳದಿಂದ ತ್ಯಾಜ್ಯವನ್ನು ತಂದು ಕರ್ನಾಟಕದ ಹೆದ್ದಾರಿ ಬದಿಯಲ್ಲಿ ಹಾಗೂ ಅರಣ್ಯ ಪ್ರದೇಶಗಳಲ್ಲಿ ಸುರಿಯುತ್ತಿರುವ ವಿಚಾರವನ್ನು ಬಾಯ್ಬಿಟ್ಟಿದೆ. “ಲಾರಿ ಹಾಗೂ ಕಾರಿನಲ್ಲಿ ಬಂದು ತ್ಯಾಜ್ಯ ವಿಲೇವಾರಿ ಮಾಡಿ ಹೋಗುತ್ತಿದ್ದೆವು. ಇದಕ್ಕೆ ಸ್ಥಳೀಯ ಯುವಕನೊಬ್ಬ ದಾರಿ ತೋರಿಸಿ ಏಜೆಂಟ್ ರೀತಿ ಸಹಕರಿಸುತ್ತಿದ್ದ” ಎಂದು ಕಿಡಿಗೇಡಿಗಳು ಬಾಯಿಬಿಟ್ಟಿದ್ದಾರೆ. ಕೇರಳದ ಕ್ಯಾಲಿಕಟ್ ನಿಂದ ಸುಮಾರು 300 ಕಿ.ಮೀ. ಕ್ರಮಿಸಿ ಬಂದು ತ್ಯಾಜ್ಯವನ್ನು ಪುತ್ತೂರು, ಸುಳ್ಯದ ಅರಣ್ಯ ಹಾಗು ರಸ್ತೆ ಬದಿ ಸುರಿದು ಹೋಗುವ ಈ ದಂಧೆ ಲಕ್ಷಾಂತರ ರೂಪಾಯಿ ವಹಿವಾಟು ಹೊಂದಿದೆ ಎಂದು ಹೇಳಲಾಗುತ್ತಿದೆ. ಕೇರಳದ ಅನಧಿಕೃತ ಕಸಾಯಿಖಾನೆಗಳ ತ್ಯಾಜ್ಯ ವಿಲೇವಾರಿಗೆ ಕಾನೂನು ಬಿಡುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ತ್ಯಾಜ್ಯವನ್ನು ಚೀಲಗಳಲ್ಲಿ ತೊಂಬಿಸಿ ಇಲ್ಲಿ ಎಸೆಯಲಾಗುತ್ತಿದೆ ಎಂದು ಹೇಳಲಾಗಿದೆ.
- Advertisement -
Leave A Reply