ಮಂಗಳೂರು: ಸೆಲ್ ಫೋನ್ ಗೆ ಪರ್ಯಾಯವಾಗಿ ಲೈ – ಫೋನ್ ಆವಿಷ್ಕಾರ!
ಮಂಗಳೂರು: ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಸೆಲ್ ಫೋನ್ ಗಳಿಗೆ ಎಷ್ಟು ಅಡಿಕ್ಟ್ ಅಥವಾ ದಾಸರಾಗಿದ್ದೇವೆ ಎಂದರೆ ಸೆಲ್ ಫೋನ್ ಗಳಿಲ್ಲದೇ ಜೀವನವೇ ಇಲ್ಲ ಎನ್ನುವ ಮಟ್ಟಕ್ಕೆ ತಲುಪಿದ್ದೇವೆ . ಸೆಲ್ ಫೋನ್ ಮೂಲಕವೇ ನಮ್ಮ ದಿನ ಆರಂಭವಾದರೆ ಸೆಲ್ ಫೋನ್ ಗಳ ಬಟನ್ ಗಳನ್ನು ಒತ್ತುತ್ತಾ , ಜಾಲತಾಣಗಳಲ್ಲಿ ಸರ್ಚ್ ಮಾಡುತ್ತಾ ದಿನ ಕೊನೆಗೊಳ್ಳುತ್ತದೆ.
ಸೆಲ್ ಫೋನ್ ಕಿವಿಗೆ ಅಂಟಿಕೊಂಡೆ ಇರುತ್ತದೆ. ಈ ರೀತಿಯ ವರ್ತನೆ ತೋರದವರನ್ನು ಅನ್ಯಗ್ರಹ ಜೀವಿಗಳಂತೆ ಕಾಣಲಾಗುತ್ತದೆ. ಇದು ಇಂದಿನ ಹಕೀಕತ್ತು. ಆದರೆ ಈ ಸೆಲ್ ಫೋನ್ ಗಳು ಹೊರ ಸೂಸುವ ರೇಡಿಯೋ ತರಂಗಾಂತರಗಳಿಂದಾಗಿ ನಮ್ಮ ದೇಹದ ಮೇಲಾಗುತ್ತಿರುವ ಅದರಲ್ಲೂ ಮೆದುಳಿನ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ನಮ್ಮ ಬಿಡುವಿಲ್ಲದ ಕೆಲಸಗಳ ಮಧ್ಯೆ ಯೋಚಿಸಲು ಪುರುಸೊತ್ತಿಲ್ಲ. ಈ ರೇಡಿಯೋ ತರಂಗಾಂತರಗಳ ಅಪಾಯದ ಕುರಿತು ಗಮನಹರಿಸಿದ ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೆಲ್ ಫೋನ್ ಗೆ ಪರ್ಯಾಯವಾಗಿ ಲೈ- ಫೋನ್ ಎಂಬ ಆರೋಗ್ಯ ಸ್ನೇಹಿ ಫೋನ್ ಗಳನ್ನುಆವಿಷ್ಕರಿಸಿದ್ದಾರೆ.
ಸೆಲ್ ಫೋನ್ ಗಳಲ್ಲಿ ಉಪಯೋಗವಾಗುವ ರೇಡಿಯೋ ಫ್ರಿಕ್ವೆನ್ಸಿಗಳು ಧ್ವನಿ, ಚಿತ್ರ ಅಥವಾ ಪಠ್ಯಗಳನ್ನು ವಿದ್ಯುತ್ ಆಥವಾ ಕಾಂತೀಯ ಸಂಕೇತಗಳನ್ನಾಗಿ ಪರಿವರ್ತಿಸಿ ಪ್ರವರ್ತಿಸುತ್ತದೆ. ಈ ಸಂಕೇತಗಳನ್ನು ಇನ್ನೊಂದು ಸೆಲ್ ಫೋನ್ ಸ್ವೀಕರಿಸಿ ಕೇಳುಗನಿಗೆ ತಲುಪಿಸುತ್ತದೆ. ಇಲ್ಲಿ ಸಂವಹನದ ಮಾಧ್ಯಮ ರೇಡಿಯೋ ತರಂಗಗಳು.ಆದರೆ ಲೈ- ಫೋನ್ ಗೆ ಬೇಕಿರುವುದು ಎಲ್ ಇ ಡಿ ಬೆಳಕು. ಈ ಬೆಳಕಿನಡಿ ಕುಳಿತು ಈ ಫೋನ್ ಬಳಸಬಹುದು. ಮೊಬೈಲ್ ಸಿಮ್ಮನ್ನು ಸೆಲ್ಯುಲರ್ ನ ಗೇಟ್ ವೇಗೆ ಜೋಡಿಸಿದರೆ ಸೆಲ್ ಫೋನ್ ನ ಕರೆಗಳು , ಮೆಸೇಜ್ ಗಳು ಲೈ-ಫೋನ್ ತೆರೆಯಲ್ಲಿಮೂಡುತ್ತದೆ. ಬಳಿಕ ಸೆಲ್ ಫೋನ್ ನ ಎಲ್ಲಾ ಕೆಲಸಗಳನ್ನು ನಡೆಸಬಹುದಾಗಿದೆ.
ಲೈ- ಫೋನ್ ನಲ್ಲಿ ಆರ್ ಎಫ್ ತರಂಗಾಂತರಗಳು ಇಲ್ಲ. ಆರ್ ಡಿ ಎಲ್ ನ ವಿಶೇಷ ತರಂಗಾಂತರ ಸಂಸ್ಕರಣೆಯಿಂದ ಆರ್ ಎಫ್ ತರಂಗಾಂತರಗಳು ಬೆಳಕಿನ ದತ್ತಾಂಶಗಳಾಗಿ ಪರಿವರ್ತನೆ ಗೊಂಡು ಲೈ -ಫೋನ್ ತಲುಪುತ್ತದೆ. ಸೆಲ್ ಫೋನ್ ಗಳ ವಿಕಿರಣಗಳ ಯಾವ ದುಷ್ಪರಿಣಾಮಗಳು ಇಲ್ಲಿ ಇರುವುದಿಲ್ಲೆಂದು ಹೇಳಲಾಗಿದೆ.
Leave A Reply