ಲೋಕಾಯುಕ್ತವನ್ನು ಬಲಪಡಿಸುತ್ತೇನೆ ಎಂದಿದ್ದ ಕುಮಾರಸ್ವಾಮಿಯವರಿಗೆ ನೆನಪು ಮಾಡುವ ಪ್ರಯತ್ನ ಅಷ್ಟೇ!!

ನಿನ್ನೆ ಪಬ್ಲಿಕ್ ಟಿವಿ ವಾಹಿನಿಯಲ್ಲಿ ಒಂದು ನ್ಯೂಸ್ ಬಿತ್ತರವಾಗುತ್ತಿತ್ತು. ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಭಜನೆ ನಡೆಯುತ್ತಿದೆ ಎಂದು ದೃಶ್ಯ ಸಹಿತ ತೋರಿಸಲಾಗುತ್ತಿತ್ತು. ಇದು ಲೋಕಾಯುಕ್ತದ ಸದ್ಯದ ಪರಿಸ್ಥಿತಿ. ನಮ್ಮ ಕರ್ನಾಟಕದ ರಾಜಕೀಯವನ್ನು ಕೆಲವು ದಿನಗಳ ಹಿಂದೆ ರಿವೈಂಡ್ ಮಾಡಿ ನೋಡಿ. ಆಗ ಮುಖ್ಯಮಂತ್ರಿಯಾಗಿದ್ದವರು ಸಿದ್ಧರಾಮಯ್ಯ. ಇನ್ನೇನೂ ತಮ್ಮ ಸಚಿವ ಸಂಪುಟದ ಮಂತ್ರಿಗಳಲ್ಲಿ ಒಬ್ಬೊಬ್ಬರೇ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಲೋಕಾಯುಕ್ತದಿಂದ ಜೈಲು ಪಾಲಾಗುವ ಸಾಧ್ಯತೆ ಬರುತ್ತಿದ್ದಂತೆ ಸಿದ್ಧರಾಮಯ್ಯ ಹುಶಾರಾಗಿದ್ದರು. ಎಷ್ಟೆಂದರೂ ತಮ್ಮ ಸಚಿವ ಸಂಪುಟದಲ್ಲಿ ಯಾರೊಬ್ಬರೂ ಜೈಲು ಪಾಲಾಗಿ ತಮ್ಮ ಸರಕಾರದ ಮುಖಕ್ಕೆ ಮಸಿ ಬಳಿಯಬಾರದೆಂದು ಅವರು ಧೃಡ ನಿಶ್ಚಯ ಹೊಂದಿದ್ದರು. ಅದಕ್ಕೆ ಅವರು ಮಾಡಿದ ಉಪಾಯವೆನೆಂದರೆ ತಮ್ಮ ಮಂತ್ರಿಗಳನ್ನು ಹೇಗೂ ಭ್ರಷ್ಟಾಚಾರ ಮಾಡಬೇಡಿ ಎಂದು ಹೇಳಲು ಆಗುವುದಿಲ್ಲ, ಹೇಳಿದರೂ ಅವರ್ಯಾರು ಕೇಳುವುದಿಲ್ಲ. ಆದ್ದರಿಂದ ಭ್ರಷ್ಟಾಚಾರಿಗಳನ್ನು ಬಂಧಿಸುವ ಲೋಕಾಯುಕ್ತವನ್ನೇ ದುರ್ಬಲ ಮಾಡಿದರೆ ಹೇಗೆ ಎನ್ನುವ ಉಪಾಯ ಸಿದ್ಧರಾಮಯ್ಯ ಮಾಡಿದರು. ಅಲ್ಲಿಗೆ ಅವರು ಒಂದು ಹಂತಕ್ಕೆ ವಿಜಯ ಸಾಧಿಸಿದರು. ಜನರು, ಮಾಧ್ಯಮಗಳ ಎದುರು ತಾವು ಸಾಚಾ ಎಂದು ತೋರಿಸಲು ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಿದ ನಾಟಕ ಮಾಡಿದರು. ಅಷ್ಟಕ್ಕೂ ಇವರು ಪ್ರಾರಂಭಿಸಿದ ಎಸಿಬಿ ಅದೊಂದು ಪೊಲೀಸ್ ಸಿಬ್ಬಂದಿಗಳ ಪಡೆಯಂತೆ ಕಾರ್ಯ ನಿರ್ವಹಿಸುತ್ತಿದೆ ಬಿಟ್ಟರೆ ಅದಕ್ಕೂ ವಿಶೇಷವಾದ ತಾಕತ್ತಿಲ್ಲ. ಒಟ್ಟಿನಲ್ಲಿ ಅತ್ತ ಲೋಕಾಯುಕ್ತವನ್ನು ದುರ್ಬಲ ಮಾಡಿದ ಸಿದ್ಧರಾಮಯ್ಯ ಇತ್ತ ಹಲ್ಲಿಲ್ಲದ ಎಸಿಬಿಯನ್ನು ಬಿಟ್ಟು ಭ್ರಷ್ಟರ ರಕ್ಷಣೆಗೆ ಪಣ ತೊಟ್ಟಂತೆ ವರ್ತಿಸಿದರು.
ಆಗ ಕುಮಾರಸ್ವಾಮಿ ಅಬ್ಬರಿಸಿದ ರೀತಿ ಹೇಗಿತ್ತು ಗೊತ್ತಾ….
ಆ ದಿನಗಳಲ್ಲಿ ಎಸಿಬಿಗೆ ಬಲ ಇಲ್ಲ, ಲೋಕಾಯುಕ್ತಕ್ಕೆ ಶಕ್ತಿ ಇಲ್ಲ ಎಂದು ಹೊರಪ್ರಪಂಚಕ್ಕೆ ಸಿದ್ಧರಾಮಯ್ಯನವರ ಕಪಟ ನಾಟಕದ ಪರದೆ ಎತ್ತಿ ತೋರಿಸಿದವರು ಇಬ್ಬರು, ಒಬ್ಬರು ಯಡಿಯೂರಪ್ಪ, ಇನ್ನೊಬ್ಬರು ಎಚ್ ಡಿ ಕುಮಾರಸ್ವಾಮಿ. ಯಡಿಯೂರಪ್ಪನವರು ಈಗ ವಿಪಕ್ಷ ನಾಯಕರಾಗಿದ್ದಾರೆ. ಅವರ ಕೈಯಲ್ಲಿ ಅಧಿಕಾರ ಇಲ್ಲ. ಇನ್ನೊಬ್ಬರು ಮುಖ್ಯಮಂತ್ರಿಯಾಗಿದ್ದಾರೆ. ಅವರ ಕೈಯಲ್ಲಿ ಅಧಿಕಾರ ಇದೆ. ಈಗ ನನ್ನ ಪ್ರಶ್ನೆ ಇರುವುದು ಕುಮಾರಸ್ವಾಮಿಯವರೇ, ನೀವು ಆವತ್ತು ಬಬ್ರುವಾಹನನಂತೆ ಅಬ್ಬರಿಸಿ ಬೊಬ್ಬರಿಸಿದ್ದು ಇದೇ ವಿಷಯದ ಮೇಲೆ ಅಲ್ಲವೇ. ಎಸಿಬಿಗೆ ಶಕ್ತಿ ಇಲ್ಲ, ತಾನು ಮುಖ್ಯಮಂತ್ರಿಯಾದ ಕೂಡಲೇ ಲೋಕಾಯುಕ್ತಕ್ಕೆ ಬಲ ತುಂಬುತ್ತೇನೆ ಎಂದು ಹೇಳಿದ್ದು ನೀವೆ ಅಲ್ಲವೇ. ಹಾಗಾದರೆ ಅದೆಲ್ಲ ಈಗ ನೆನಪಿನಲ್ಲಿ ಇದೆಯೋ ಅಥವಾ ಈ ಅಂಕಣ ನಿಮಗೆ ಯಾರಾದರೂ ತಲುಪಿಸಿ ನೀವು ಓದಿದರೆ ಮಾತ್ರ ನೆನಪು ಆಗುತ್ತದೆಯೋ?
ಕರ್ನಾಟಕದ ಲೋಕಾಯುಕ್ತದ ಇತಿಹಾಸದಲ್ಲಿ ಲೋಕಾಯುಕ್ತ ಇದೆ ಎಂದು ಮೊದಲು ಗೊತ್ತಾದದ್ದು ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರು ಲೋಕಾಯುಕ್ತರಾದ ಮೇಲೆ. ಅದರ ನಂತರ ಲೋಕಾಯುಕ್ತರು ರಾಜ್ಯದ ಒಬ್ಬ ಮುಖ್ಯಮಂತ್ರಿಯನ್ನು ಕೂಡ ಜೈಲಿಗೆ ಕಳುಹಿಸಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ. ಅದರ ನಂತರ ಲೋಕಾಯುಕ್ತದಲ್ಲಿಯೇ ಭ್ರಷ್ಟಾಚಾರದ ವಾಸನೆ ಹೊಡೆದು ಮಗನೇ ಪರಮ ಭ್ರಷ್ಟ ಎಂದು ಗೊತ್ತಾದದ್ದು ಭಾಸ್ಕರ ರಾವ್ ಲೋಕಾಯುಕ್ತರಾದ ಮೇಲೆ. ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿಯವರು ಲೋಕಾಯುಕ್ತರ ಮೇಲೆ ಅವರ ಮೇಲೆನೆ ಕೊಲೆ ಪ್ರಯತ್ನವಾಗಿ ಲೋಕಾಯುಕ್ತ ಎನ್ನುವ ಸಂಸ್ಥೆಯ ಗ್ರಹಚಾರ ಮತ್ತೆ ಜಗಜ್ಜಾಹೀರವಾಯಿತು. ಅದರ ನಡುವೆ ಎಸಿಬಿಯ ಧೈರ್ಯ, ಪರಾಕ್ರಮ ಕೇವಲ ಚಾರ್ಜ್ ಶೀಟ್ ಹಾಕುವುದಕ್ಕೆ ಮಾತ್ರ ಸೀಮಿತವಾಗಿದೆ. ಇಷ್ಟಿದ್ದೂ ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿಯಾದ ನಂತರ ಏನೂ ಮಾಡಲು ಆಗುತ್ತಿಲ್ಲ. ಯಾಕೆ?
ಅಣ್ಣನ ರಕ್ಷಣೆಗೆ ನಿಂತ್ರಾ ಕುಮಾರಸ್ವಾಮಿ…
ಅದಕ್ಕೆ ಅವರೇ ಕಣ್ಣೀರು ಹಾಕುತ್ತಾ ಉತ್ತರ ಕೊಡಬೇಕು ಎಂದು ನಾನು ಬಯಸುವುದಿಲ್ಲ. ಆದರೆ ಜನರಿಗೆ ಅವರು ಕೊಟ್ಟ ಭರವಸೆ ಈಡೇರಿಸಲಿ ಎನ್ನುವ ಆಶಯ ನನ್ನದು. ಮೊದಲನೇಯದಾಗಿ ಅವರೀಗ ಮುಲಾಜಿನ ಮುಖ್ಯಮಂತ್ರಿಯಾಗಿರುವುದರಿಂದ ಅವರಿಗೆ ಲೋಕಾಯುಕ್ತವನ್ನು ಬಲಪಡಿಸುವುದಕ್ಕೆ ಸಾಧ್ಯವಿಲ್ಲ ಎಂದು ಅಂದುಕೊಳ್ಳಬೇಕಾ? ಹಾಗಿದ್ದರೆ ಅವರು ಆತ್ಮಸಾಕ್ಷಿಯಾಗಿ ಕಾಂಗ್ರೆಸ್ ತನ್ನ ಭ್ರಷ್ಟರನ್ನು ಪೊರೆಯಲು ಲೋಕಾಯುಕ್ತವನ್ನು ವೀಕ್ ಮಾಡಿದ್ರು ಎಂದು ಒಪ್ಪಿಕೊಳ್ಳುತ್ತಾರಾ ಅಥವಾ ಹೇಗೂ ವೀಕ್ ಆಗಿ ಹೋಗಿದೆ, ತಮ್ಮ ಸಹೋದರ ಅನೇಕ ಜನ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ತಮ್ಮ ತೀಜೋರಿ ತುಂಬಿಸಿಕೊಳ್ಳುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಲೋಕಾಯುಕ್ತವನ್ನು ಸ್ಟ್ರಾಂಗ್ ಮಾಡುವುದೂ ಒಂದೇ ಅಣ್ಣನ ಕಾಲ ಮೇಲೆ ಚಪ್ಪಡಿ ಎಳೆಯುವುದೂ ಒಂದೇ ಎನ್ನುವ ಕಾರಣಕ್ಕೆ ಎಚ್ ಡಿಕೆ ಲೋಕಾಯುಕ್ತವನ್ನು ಬಲಪಡಿಸಲು ಹೋಗುತ್ತಿಲ್ಲವಾ? ಅನೇಕ ಪ್ರಶ್ನೆಗಳು ಲೋಕಾಯುಕ್ತ ಕಚೇರಿಯಲ್ಲಿ ಗಿರಕಿ ಹೊಡೆಯುತ್ತಿವೆ. ಅಲ್ಲಿನ ಸಿಬ್ಬಂದಿಗಳು ಮಾಡಲು ಸರಿಯಾದ ಕೆಲಸ ಇಲ್ಲದೆ ಭಜನೆ ಮಾಡುತ್ತಿದ್ದಾರಂತೆ!
Leave A Reply