ಖಾಸಗಿ ಶಾಲೆಯಲ್ಲಿ ಓದುವ ಬಡಮಕ್ಕಳಿಗೆ ಉಚಿತ ಬಸ್ ಪಾಸ್ ಬೇಡವೇ ಕುಮಾರಸ್ವಾಮಿಯವರೇ?
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ನಮಸ್ಕಾರ. ಹೇಗಿದ್ದೀರಿ? ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಕೇವಲ 38 ಸೀಟು ಪಡೆದರೂ, ಕಾಂಗ್ರೆಸ್ಸನ್ನು ಪ್ಯಾಕೆಟ್ ಮಾಡಿಕೊಂಡು ಮುಖ್ಯಮಂತ್ರಿಯಾಗಿರುವ ನೀವು ಖುಷಿಯಲ್ಲೇ ಇರುತ್ತೀರಿ ಬಿಡಿ. ಅದರಲ್ಲೂ 104 ಸೀಟು ಪಡೆದ ಬಿಜೆಪಿಯನ್ನು ಹಿಂದಿಕ್ಕಿ ನೀವು ಮುಖ್ಯಮಂತ್ರಿಯಾಗುವುದು, ರಾಜ್ಯವನ್ನು ಆಳುವುದು ಎಂದರೆ ಸುಮ್ಮನೆಯಾ?
ಆದರೆ ನೀವೇಕೆ ಹೀಗೆ ಕುಮಾರಸ್ವಾಮಿಯವರೇ? ನೀವು ಬಹುಮತ ಪಡೆಯದಿದ್ದರೂ ಮುಖ್ಯಮಂತ್ರಿಯಾಗಿದ್ದು ನ್ಯಾಯಬದ್ಧವಾಗಿಯೇ ಇದೆ ಎಂದು ನಾವು ಸುಮ್ಮನಾದೆವು. ಯಾವ ಸರ್ಕಾರವಾದರೂ ಬರಲಿ, ರೈತರ, ಜನರ ಸಮಸ್ಯೆ ಬಗೆಹರಿದರೆ ಸಾಕು ಎಂದು ಸಮಾಧಾನಪಟ್ಟುಕೊಂಡೆವು. ಅದರಲ್ಲೂ ನೀವು ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆಯ ಭರವಸೆ ನೆನೆದು, ಅವುಗಳಾದರೂ ಸಾಕಾರವಾಗಲಿ ಎಂದು ಆಶಿಸಿದೆವು.
ಆದರೆ ನೀವೇನು ಮಾಡಿದಿರಿ ಕುಮಾರಸ್ವಾಮಿಯವರೇ? ರೈತರ ಸಾಲ ಮನ್ನಾ ಮಾಡಲು ಸರ್ಕಾರದ ಬಳಿ ದುಡ್ಡಿಲ್ಲ ಎಂದಿರಿ. ಕೇಂದ್ರ ಸರ್ಕಾರದತ್ತ ಬೆರಳು ಮಾಡಿದಿರಿ. ಸಾಲ ಮನ್ನಾ ಮಾಡಲು ಸ್ವಲ್ಪ ಸಮಯ ಬೇಕು ಎಂದಿರಿ. ಅಷ್ಟೇ ಆಗಿದ್ದರೆ ನಾವೂ ನಿಮ್ಮನ್ನು ಕ್ಷಮಿಸುತ್ತಿದ್ದೆವು. ಆದರೆ ನೀವು, ಕೊಳಕು ರಾಜಕಾರಣದ ಕೆಸರಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ನಾನು ಏಳು ಕೋಟಿ ಜನರ ಮುಖ್ಯಮಂತ್ರಿಯಲ್ಲ, ನಾನು ಕಾಂಗ್ರೆಸ್ ಎಂಬ ಹಂಗಿನರಮನೆಯ ಸಾಂದರ್ಭಿಕ ಶಿಶು ಎಂದುಬಿಟ್ಟಿರಿ. ಆಗಲೇ ನೋಡಿ, ನಿಮ್ಮ ಮೇಲಿನ ಗೌರವ ಮಣ್ಣು ಪಾಲಾಗಿದ್ದು.
ಅಲ್ಲದೆ, ಕಳೆದ ಸರ್ಕಾರದಲ್ಲಿ ಘೋಷಿಸಿದ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ನೀಡುವ ಯೋಜನೆಗೂ ನೀವು ಚೌಕಾಸಿ ಮಾಡಿದಿರಿ. ನಿಮ್ಮ ಸರ್ಕಾರದ ಸಚಿವರೇ ಒಮ್ಮೆ ಉಚಿತವಾಗಿ ನೀಡುತ್ತೇವೆ ಎಂದರು, ಆಮೇಲೆ ವಿಳಂಬ ಮಾಡಿ ವಿದ್ಯಾರ್ಥಿಗಳ ಆಕ್ರೋಶಕ್ಕೂ ಒಳಗಾದರು. ನಿಮ್ಮ ಸರ್ಕಾರಕ್ಕೆ ಸ್ಪಷ್ಟ ಕಲ್ಪನೆಯೇ ಇಲ್ಲವೇ ಕುಮಾರಸ್ವಾಮಿಯವರೇ.
ಇದಿಷ್ಟೇ ಅಲ್ಲ, ಉಚಿತ ಬಸ್ ಪಾಸ್ ಗಾಗಿ ವಿದ್ಯಾರ್ಥಿಗಳು ಬೀದಿಗೆ ಇಳಿಯಬೇಕಾಯಿತು. ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಯಿತು. ಆದರೂ ಕೊನೆಗೆ ನೀವು ಸರ್ವಸಮ್ಮತವಾದ ನಿರ್ಧಾರ ಕೈಗೊಳ್ಳಲೇ ಇಲ್ಲ. ಈಗ ಸರ್ಕಾರಿ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಉಚಿತವಾಗಿ ಬಸ್ ಪಾಸ್ ನೀಡುತ್ತೇವೆ ಎಂದು ಘೋಷಿಸಿದ್ದೀರಿ.
ಖಂಡಿತವಾಗಿಯೂ ಕುಮಾರಸ್ವಾಮಿಯವರೇ, ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಓದುವವರು ಬಹುತೇಕರು ಬಡವರೇ ಆಗಿದ್ದು, ನಿಮ್ಮ ಈ ಘೋಷಣೆಯಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆದರೆ, ಸಿಎಂ ಸಾಹೇಬ್ರೇ, ಖಾಸಗಿ ಶಾಲೆಯ ವಿದ್ಯಾರ್ಥಿಗಳು ಯಾವ ಪಾಪ ಮಾಡಿದ್ದರು? ಅವರಿಗೇಕೆ ಉಚಿತವಾಗಿ ಬಸ್ ಪಾಸ್ ನೀಡುವುದಿಲ್ಲ?
ಹೌದು, ಖಾಸಗಿ ಶಾಲೆ ಕಾಲೇಜುಗಳಲ್ಲಿ ದುಡ್ಡಿದ್ದವರ ಮಕ್ಕಳೇ ಓದುತ್ತಾರೆ ಎಂದಿಟ್ಟುಕೊಳ್ಳೋಣ. ಆದರೆ ಈ ಶಾಲೆ-ಕಾಲೇಜುಗಳಲ್ಲಿ ಆರ್.ಟಿ.ಇ. ಅನ್ವಯವೋ, ರ್ಯಾಂಕ್ ಪಡೆದುಕೊಂಡೋ ಖಾಸಗಿ ಶಾಲೆ-ಕಾಲೇಜುಗಳಲ್ಲಿ ಪ್ರವೇಶ ಪಡೆದ ಬಡಮಕ್ಕಳು ಬಸ್ ಪಾಸ್ ಗಾಗಿ ಏನು ಮಾಡಬೇಕು? ಆರ್.ಟಿ.ಇ. ಅನ್ವಯ ಶೇ.25ರಷ್ಟು ಸೀಟುಗಳನ್ನು ಬಡವರಿಗಾಗಿ ನೀವೇ ಮೀಸಲಿಟ್ಟಿದ್ದೀರಿ. ಈಗ ಅವರಿಗೆ ನೀವೇ ಬಸ್ ಪಾಸ್ ನೀಡುವುದಿಲ್ಲ ಎಂದರೆ ಹೇಗೆ? ನೀವೇ ಹೇಳಿ, ಖಾಸಗಿ ಶಾಲೆ-ಕಾಲೇಜುಗಳಲ್ಲಿ ಓದುವ ಬಡ ವಿದ್ಯಾರ್ಥಿಗಳು ಉಚಿತವಾಗಿ ಬಸ್ ಪಾಸ್ ಪಡೆಯಲು ಅರ್ಹರಲ್ಲವೇ? ಇಂತಹ ಇಬ್ಬಂದಿತನದ ಯೋಜನೆ ಬಿಟ್ಟು, ಮೊದಲು ಎಲ್ಲ ವಿದ್ಯಾರ್ಥಿಗಳಿಗೂ ಉಚಿತವಾಗಿ ಪಾಸ್ ನೀಡಿ ಸಿಎಂ.
Leave A Reply