ಮತ್ತೊಂದು ಟ್ರಾಫಿಕ್ ಜಾಮ್ ಪರಿಹಾರದ ಸಭೆ ನಡೆಯಿತು, ಸಮಸ್ಯೆ ಬಗೆಹರಿಯುತ್ತಾ!!
ಮಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಮತ್ತೊಂದು ಸಭೆ ನಡೆಯಿತು. ಪೊಲೀಸ್ ಕಮೀಷನರ್ ಸುರೇಶ್ ಅವರು ವಿವಿಧ ಶಾಲೆ, ಕಾಲೇಜುಗಳ ಪ್ರಮುಖರನ್ನು, ಎನ್ ಜಿಒಗಳ ಮುಖ್ಯಸ್ಥರನ್ನು ಕರೆದು ಟ್ರಾಫಿಕ್ ಸಮಸ್ಯೆಗೆ ಪರಿಹಾರದ ಸಲಹೆಗಳನ್ನು ಕೇಳಿದ್ದಾರೆ. ಸಲಹೆಗಳನ್ನು ಕೇಳುವುದರಲ್ಲಿ ತಪ್ಪಿಲ್ಲ, ಆದರೆ ಅವುಗಳನ್ನು ಅನುಷ್ಟಾನಗೊಳಿಸುವುದರಲ್ಲಿ ಪೊಲೀಸ್ ಇಲಾಖೆ ಎಷ್ಟು ಆಸಕ್ತಿ ತೆಗೆದುಕೊಳ್ಳುತ್ತದೆ ಎನ್ನುವುದು ಪ್ರತಿ ಬಾರಿಯ ಸಭೆಯ ನಂತರ ಉಳಿಯುವ ಪ್ರಶ್ನೆ. ಬೇರೆ ಬೇರೆಯವರು ವಿವಿಧ ಸಲಹೆಗಳನ್ನು ಕೊಟ್ಟರು. ಆದರೆ ನನ್ನ ಬಾರಿ ಬಂದಾಗ ನಾನು ಹೇಳಿದ್ದು ಏನೆಂದರೆ “ನಾನು ಈ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಬೇಕೆನ್ನುವ ನಿಮ್ಮ ಕಾಳಜಿಯನ್ನು ಮೆಚ್ಚುತ್ತೇನೆ. ಅದಕ್ಕಾಗಿ ನೀವು ಸಲಹೆ ಕೇಳಿ ಕರೆದ ಅಷ್ಟೂ ಸಭೆಗಳಲ್ಲಿ ಭಾಗವಹಿಸಿದ್ದೇನೆ. ಸಲಹೆಗಳನ್ನು ಕೊಟ್ಟಿದ್ದೇನೆ. ಆದರೆ ಅದರಲ್ಲಿ ಹೆಚ್ಚಿನವು ಅನುಷ್ಟಾನಕ್ಕೆ ಬಂದಿಲ್ಲ. ಆದರೂ ಇವತ್ತಿನ ಸಭೆಯಲ್ಲಿ ಭಾಗವಹಿಸಿದ್ದೇನೆ, ಸಲಹೆಗಳನ್ನು ಕೊಡುತ್ತೇನೆ. ಸಮಸ್ಯೆ ಪರಿಹಾರವಾಗಬಹುದು ಎನ್ನುವ ನಿರೀಕ್ಷೆ ಇದೆ” ಎಂದೆ.
ರೈಟ್, ಲೆಫ್ಟ್ ಕೊಡಿ…
ನಾನು ಹೇಳಿದ್ದು ಏನೆಂದರೆ ಮಂಗಳೂರಿನಲ್ಲಿ ಪೀಕ್ ಹವರ್ ನಲ್ಲಿ ಬ್ಲಾಕ್ ಆಗುವ ದಟ್ಟಣೆಯ ಪ್ರದೇಶ ಯಾವುದೆಂದರೆ ಅದು ಕರಂಗಲಪಾಡಿ ಏರಿಯಾ. ಈ ಜ್ಯೋತಿ, ಕದ್ರಿ ಕಡೆಯಿಂದ ಬರುವ ವಾಹನಗಳು ಕರಂಗಲಪಾಡಿ ಕಡೆಯಿಂದ ತಂದೂರ್ ಹೋಟೇಲಿನ ಕಡೆ ಹೋಗಲು ಬಲಭಾಗಕ್ಕೆ ತಿರುಗುತ್ತವೆ. ಇಲ್ಲಿ ಏನಾಗುತ್ತದೆ ಎಂದರೆ ಮೊದಲೇ ಅಲ್ಲಿ ಹೆವಿ ಟ್ರಾಫಿಕ್. ಒಂದು ವಾಹನ ರೈಟ್ ತೆಗೆದುಕೊಳ್ಳಲು ಅಲ್ಲಿ ನಿಂತಿತು ಎಂದರೆ ಇನ್ನೊಂದು ಅದರ ಹಿಂದೆ ಬಂದು ನಿಲ್ಲುತ್ತದೆ. ಈ ಮೂಲಕ ಬಂಟ್ಸ್ ಹಾಸ್ಟೆಲ್ ತನಕ ಕ್ಯೂ ಇರುತ್ತದೆ. ಈ ಮೂಲಕ ಪಿವಿಎಸ್ ಕಡೆ ಹೋಗುವ ವಾಹನಗಳಿಗೂ ನೇರವಾಗಿ ಹೋಗಲು ಅಲ್ಲಿ ಜಾಗ ಕಿರಿದಾಗಿರುತ್ತದೆ. ಅವು ನಿಧಾನಗತಿಯಲ್ಲಿ ತೆವಳಿ ಸಾಗಬೇಕಾಗುತ್ತದೆ. ಮತ್ತೊಂದೆಡೆ ಕರಂಗಲಪಾಡಿಗೆ ವಾಹನಗಳು ರೈಟ್ ತೆಗೆದುಕೊಳ್ಳುವಾಗ ಪಿವಿಎಸ್ ಕಡೆಯಿಂದ ಬರುವ ವಾಹನಗಳು ಜಾಗ ಬಿಟ್ಟುಕೊಳ್ಳಲು ನಿಲ್ಲಬೇಕಾಗಿರುವುದರಿಂದ ಅದರಿಂದ ರೋಡ್ ಮತ್ತೆ ಬ್ಲಾಕ್ ಆಗುತ್ತದೆ. ಇದನ್ನು ನಿಲ್ಲಿಸಿ, ಅಲ್ಲಿ ರೈಟ್ ಇಲ್ಲ ಎಂದರೆ ವಾಹನಗಳು ಬೇಕಾದರೆ ಪಿವಿಎಸ್ ಕಡೆ ಹೋಗಿ ಕೆನರಾ ಕಾಲೇಜಿನ ರಸ್ತೆಯಲ್ಲಿ ಒಳಗೆ ಬರುವಂತೆ ಮಾಡಬಹುದು.
ಇನ್ನು ಎಂಪೈರ್ ಮಾಲ್ ನ ಹತ್ತಿರ ಕೊಡಿಯಾಲ್ ಗುತ್ತು ವೆಸ್ಟ್ ಮತ್ತು ಈಸ್ಟ್ ಎರಡು ಕಡೆಯಿಂದ ಬರುವ ವಾಹನಗಳು ಅಲ್ಲಿ ರಸ್ತೆ ಬ್ಲಾಕ್ ಆಗಲು ದೊಡ್ಡ ಕೊಡುಗೆ ಕೊಡುತ್ತಿವೆ. ಅದಕ್ಕೆ ಏನು ಮಾಡಬೇಕು ಎಂದರೆ ಎಂಪೈರ್ ಪಕ್ಕದ ರಸ್ತೆಯಲ್ಲಿ ಬರುವ ವಾಹನಗಳಿಗೆ ರೈಟ್ ಕೊಡಲೇಬಾರದು. ಅವು ಬೇಕಾದರೆ ಬಳ್ಳಾಲ್ ಬಾಗ್ ಕಡೆಗೆ ಹೋಗಿ ಅಲ್ಲಿ ಯೂಟರ್ನ್ ತೆಗೆದುಕೊಂಡು ಬರಲಿ. ಹಾಗೆಯೇ ಕೊಡಿಯಾಲ್ ಗುತ್ತು ಈಸ್ಟ್ ಕಡೆಯಿಂದ ಬರುವ ವಾಹನಗಳು ಲೆಫ್ಟ್ ತೆಗೆದುಕೊಂಡು ಪಿವಿಎಸ್ ಕಡೆ ಹೋಗಿ ಯೂಟರ್ನ್ ತೆಗೆದುಕೊಂಡು ಬರಲಿ. ಹೀಗೆ ಮಾಡುವುದರಿಂದ ಬ್ಲಾಕ್ ಆಗುವುದು ತುಂಬಾ ಕಡಿಮೆ ಮಾಡಬಹುದು.
ಬಸ್ ಸ್ಟಾಪ್ ಶಿಫ್ಟ್ ಮಾಡಿ…
ಇನ್ನು ಬಂಟ್ಸ್ ಹಾಸ್ಟೆಲ್ ನಲ್ಲಿ ಕದ್ರಿ ಕಡೆ ಹೋಗುವ ಬಸ್ಸು ಸ್ಟಾಪ್ ಬದಲಾಯಿಸಬೇಕು. ಅಲ್ಲಿಂದ ಅದನ್ನು ತೆಗೆದು ಸಿವಿ ನಾಯಕ್ ಹಾಲ್ ಹತ್ತಿರ ಶಿಫ್ಟ್ ಮಾಡಬೇಕು. ಹಾಗೆ ಕದ್ರಿ ಮಲ್ಲಿಕಟ್ಟೆ ಕಡೆಯಿಂದ ಬರುವ ಬಸ್ಸುಗಳನ್ನು ಮಧುಸಾರ ನಸ್ಸರಿಯ ಪಕ್ಕದಲ್ಲಿರುವ ಜಾಗದಲ್ಲಿ ಬಸ್ ಸ್ಟಾಪ್ ನಿರ್ಮಿಸಬೇಕು. ಹೀಗೆ ಮಾಡುವುದರಿಂದ ಅಲ್ಲಿ ಬ್ಲಾಕ್ ಆಗುವುದು ತಪ್ಪಿಸಬಹುದು. ಕಾರ್ ಸ್ಟ್ರೀಟ್ ನಲ್ಲಿ ರಸ್ತೆ ಹಿಂದೆ ಅಗಲಕಿರಿದಾಗಿತ್ತು. ಅದರ ನಂತರ ಅಗಲ ಮಾಡಲಾಯಿತು. ಆದರೆ ಹಿಂದಿಗಿಂತ ಈಗ ರಸ್ತೆ ಅಗಲ ಕಡಿಮೆ ಆದಂತೆ ಆಗುತ್ತಿದೆ. ಯಾಕೆಂದರೆ ವಾಹನಗಳನ್ನು ರಸ್ತೆಯ ಎರಡು ಕಡೆ ಮನಸ್ಸು ಬಂದ ಕಡೆ ನಿಲ್ಲಿಸಿಕೊಂಡು ಹೋಗಲಾಗುತ್ತಿದೆ. ಯಾವುದೇ ಪೊಲೀಸರು ಕೂಡ ಅಲ್ಲಿರುವುದಿಲ್ಲ. ಇನ್ನು ಮಂಗಳೂರಿನಲ್ಲಿ 164 ಕಾಂಟ್ರಾಕ್ಟ್ ಬಸ್ ಗಳಿವೆ. ಅವು ಜ್ಯೋತಿ ಟಾಕೀಸಿನಿಂದ ಮುಂದೆ ಹೋಗುವುದಕ್ಕೆ ನಿರ್ಬಂಧಗಳಿವೆ. ಆದರೆ ಅವುಗಳಲ್ಲಿ ಹೆಚ್ಚಿನ ಬಸ್ಸುಗಳು ಮಂಗಳೂರಿನ ಒಳಗೆ ತಿರುಗುತ್ತಿರುತ್ತವೆ. ಇನ್ನು ಮದುವೆ ಸಭಾಂಗಣದ ಹೊರಗೆ ಪಾರ್ಕಿಂಗ್ ಮಾಡಿ ಹೋಗುವ ವಾಹನಗಳ ಮಾಲೀಕರಿಗೆ ಮಾತ್ರ ಪೊಲೀಸರು ಫೈನ್ ಹಾಕಿದರೆ ಸಾಲುವುದಿಲ್ಲ. ಅದರೊಂದಿಗೆ ಸಭಾಂಗಣದ ಮಾಲೀಕರ ಮೇಲೆಯೂ ಫೈನ್ ಹಾಕಬೇಕು. ಇನ್ನು ನಮ್ಮ ಬಸ್ಸುಗಳು ಪ್ರಯಾಣಿಕರು ಎಲ್ಲಿ ರಸ್ತೆಯ ಮಧ್ಯ, ಸ್ಟಾಪ್ ಇಲ್ಲದ ಕಡೆ ನಿಲ್ಲಿಸಿ ಕೈ ತೋರಿಸಿದರೂ ನಿಲ್ಲುತ್ತವೆ. ಇದನ್ನೆಲ್ಲ ಮೊದಲು ಸರಿ ಮಾಡಿ, ಟ್ರಾಫಿಕ್ ಜಾಮ್ ಅರ್ಧ ಕರ್ಧ ಕಡಿಮೆಯಾಗುತ್ತದೆ ಎಂದೆ!
Leave A Reply