ಜಾತಿ ಕಾರ್ಡ್ ಎದುರಿಗಿಟ್ಟು ಸದ್ಯ ಭೈರಪ್ಪ ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ!
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಭೈರಪ್ಪ ಮತ್ತು ಅವರ ತಂಡದ ಭ್ರಷ್ಟಾಚಾರದ ವಿವಿಧ ಮಜಲುಗಳನ್ನು ರಾಷ್ಟ್ರೀಯ ವಾಹಿನಿ ನ್ಯೂಸ್ 18 ಮತ್ತು ದಿಗ್ವಿಜಯ ನ್ಯೂಸ್ ನಲ್ಲಿ ನೋಡಿದ ಜನರಿಗೆ ವಿವಿಯ ವಾಸ್ತವ ಗೊತ್ತಾಗಿತ್ತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಕರ್ನಾಟಕದ ರಾಜ್ಯಪಾಲರಿಗೆ ದೂರು ಹೋಯಿತು. ಮಂಗಳೂರು ವಿವಿಯ ಭ್ರಷ್ಟಾಚಾರದ ತನಿಖೆ ಮಾಡುವ ಸಾಧ್ಯತೆ ದಟ್ಟವಾಯಿತು. ವಿವಿಗೆ ನೋಟಿಸ್ ಜಾರಿಗೊಳಿಸಲಾಯಿತು. ಇನ್ನು ಭೈರಪ್ಪನವರನ್ನು ಉಳಿಸುವುದು ಯಾರಿಂದಲೂ ಸಾಧ್ಯವಿಲ್ಲ ಎಂದಾಗ ಭೈರಪ್ಪನವರು ಕೊನೆಯದಾಗಿ ಮಾಡಿದ್ದು ಏನು ಗೊತ್ತಾ? ಸೀದಾ ಬೆಂಗಳೂರಿಗೆ ಹೋಗುತ್ತಾರೆ. ಅಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗುತ್ತಾರೆ. ಅವರು “ಏನ್ ಭೈರಪ್ಪನವರೇ, ನಿಮ್ಮ ವಿವಿ ಭ್ರಷ್ಟಾಚಾರದ ಪ್ರಕರಣ ಸಿಕ್ಕಾಪಟ್ಟೆ ಜಾಸ್ತಿಯಾಗಿದೆಯಂತಲ್ಲ, ಎಲ್ಲಾ ಕಡೆ ಅದೇ ಚರ್ಚೆಯಾಗುತ್ತಿದೆ, ಮಾಧ್ಯಮಗಳಲ್ಲಿಯೂ ತುಂಬಾ ಭರ್ತಾ ಇದೆಯಂತೆ, ಮೊನ್ನೆ ವಿಧಾನಪರಿಷತ್ತಿನಲ್ಲಿ ಕೂಡ ಸಾಕಷ್ಟು ಚರ್ಚೆಯಾಗಿದೆ. ಏನು ಕಥೆ?” ಎಂದು ಕೇಳಿದ್ದಾರೆ. ಅದಕ್ಕೆ ಭೈರಪ್ಪ ಅಂತಿಮವಾಗಿ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂದಾಗ ಜಾತಿ ರಾಜಕೀಯದ ದಾಳವನ್ನು ಉರುಳಿಸಿದ್ದಾರೆ. “ಸರ್, ಅದು ನಾನು ಒಕ್ಕಲಿಗ. ನನ್ನ ಬಗ್ಗೆ ಎಲ್ಲಾ ಮಾಹಿತಿಗಳನ್ನು ಮಾಧ್ಯಮಗಳಿಗೆ ಕೊಟ್ಟಿರುವುದು ವಿವಿಯ ರಿಜಿಸ್ಟ್ರಾರ್. ಅವರು ಜಾತಿಯಲ್ಲಿ ಲಿಂಗಾಯತರು. ಅವರಿಗೆ ನಮ್ಮಂತಹ ಒಕ್ಕಲಿಗರು ದೊಡ್ಡ ದೊಡ್ಡ ಸ್ಥಾನದಲ್ಲಿರುವುದು ಹೊಟ್ಟೆಯುರಿ. ನಿಮಗೆ ಗೊತ್ತಿದೆಯಲ್ಲ ಸರ್, ಲಿಂಗಾಯತರು ನಮ್ಮನ್ನು ಮೇಲೆ ಬರಲು ಬಿಡುತ್ತಾರಾ?” ಈ ಸಮಜಾಯಿಷಿಕೆಯಿಂದ ಕುಮಾರಸ್ವಾಮಿಯವರಿಗೆ ಎಷ್ಟು ತೃಪ್ತಿಯಾಯಿತೋ ಗೊತ್ತಿಲ್ಲ. ಆದರೆ ಭೈರಪ್ಪನವರು ಯಾರು ಸಿಕ್ಕಿದರೂ ತಮ್ಮ ಹಗರಣವನ್ನು ಮುಚ್ಚಿಡಲು ಹೇಳುತ್ತಿರುವುದು ಒಂದೇ ಕಥೆ. ತಾವು ಒಕ್ಕಲಿಗರಾಗಿರುವುದರಿಂದ ಲಿಂಗಾಯತರು ತಮ್ಮನ್ನು ತುಳಿಯಲು ನೋಡುತ್ತಿದ್ದಾರೆ.
ಭೈರಪ್ಪನವರ ಸೂಚನೆಯಂತೆ ಕಡತಗಳಿಗೆ ಟಿಪ್ಪಣಿ…
ಇನ್ನು ಭೈರಪ್ಪನವರು ಮೊನ್ನೆ ತಾನೆ ನಿವೃತ್ತರಾಗಿದ್ದಾರೆ. ಸದ್ಯ ಮೈಸೂರಿನಲ್ಲಿದ್ದಾರೆ. ಆದರೆ ಮಂಗಳೂರು ವಿವಿಯ ಆಡಳಿತವನ್ನು ಅಲ್ಲಿಂದಲೇ ನಿರ್ವಹಿಸುತ್ತಿದ್ದಾರೆ ಎನ್ನುವುದರ ಬಗ್ಗೆ ಬಲವಾದ ಅನುಮಾನಗಳು ಹಲವರಿಗೆ ಇದೆ. ಹೇಗೆ ಎಂದರೆ ಭೈರಪ್ಪನವರು ಕುಲಪತಿಯಾಗಿದ್ದಾಗ ಅವರು ಕಡತಗಳಿಗೆ ಟಿಪ್ಪಣಿ ಬರೆಯುವ ಕ್ರಮ ಇತ್ತು. ಪ್ರತಿಯೊಬ್ಬರು ಬರೆಯುವ ಶೈಲಿ ಎನ್ನುವುದು ಬೇರೆ ಬೇರೆಯಾಗಿರುತ್ತದೆ. ಒಬ್ಬ ವ್ಯಕ್ತಿಯ ಬರೆಯುವ ಶೈಲಿ ಒಂದಿಷ್ಟು ವರ್ಷ ಸೂಕ್ಷ್ಮವಾಗಿ ಗಮನಿಸಿದರೆ ನಂತರ ಹೆಸರು ಹಾಕದಿದ್ದರೂ ಆ ವ್ಯಕ್ತಿ ಇಲ್ಲದಿದ್ದರೂ ಇದೇ ವ್ಯಕ್ತಿ ಬರೆದದ್ದು ಎಂದು ಯಾರು ಬೇಕಾದರೂ ಹೇಳಬಹುದು. ಹಾಗೆ ಅನೇಕ ವರ್ಷಗಳಿಂದ ಮಂಗಳೂರು ವಿವಿಯಲ್ಲಿ ಇರುವವರಿಗೆ ಭೈರಪ್ಪನವರ ಟಿಪ್ಪಣೆ ಬರೆಯುವ ಶೈಲಿ ಗೊತ್ತಿದೆ. ಈಗ ಅವರು ನಿವೃತ್ತರಾಗಿದ್ದರೂ, ಇಲ್ಲಿ ಇಲ್ಲದಿದ್ದರೂ ಕಡತಗಳಲ್ಲಿ ಇರುವ ಟಿಪ್ಪಣಿ ಶೈಲಿ ಅದೇ ತೆರನಾಗಿದೆ. ಅಂದರೆ ಇಲ್ಲಿಂದ ಪ್ರತಿನಿತ್ಯ ಭೈರಪ್ಪನವರಿಗೆ ಏನೇನೂ ಆಗುತ್ತದೆ ಎಂದು ಹೇಳಿಕೊಡುವವರು ಇದ್ದಾರೆ. ಭೈರಪ್ಪನವರ ಬಳಿ ಕೇಳಿ ಇಲ್ಲಿ ಟಿಪ್ಪಣಿ ಬರೆಯುವವರು ಇದ್ದಾರೆ. ಭೈರಪ್ಪನವರ ಬಳಿ ಎಲ್ಲವನ್ನು ಕೇಳಿ ಮುಂದುವರೆಯುವವರು ಇದ್ದಾರೆ. ಅದೆಲ್ಲ ಮಾಡುವವರು ಬೇರೆ ಯಾರೂ ಅಲ್ಲ. ಭೈರಪ್ಪನವರ ಆಪ್ತ ಪ್ರಶಾಂತ್. ಭೈರಪ್ಪನವರಿಗೆ ಕರೆ ಮಾಡಿ ಪ್ರಶಾಂತ್ ಟಿಪ್ಪಣಿ ಬಟ್ಟಿ ಇಳಿಸುತ್ತಾರೆ. ಸದ್ಯ ಮಂಗಳೂರು ವಿವಿಯ ಹಂಗಾಮಿ ಕುಲಪತಿಯಾಗಿರುವವರು ಕಿಶೋರ್ ಕುಮಾರ್. ಅವರನ್ನು ನೇಮಿಸಿದ್ದು ಇದೇ ಭೈರಪ್ಪ. ಕಿಶೋರ್ ಕುಮಾರ್ ಎಷ್ಟೆಂದರೂ ನಾಮಕಾವಸ್ತೆ ಹಂಗಾಮಿ ಕುಲಪತಿ. ಆಡಳಿತ ಮೈಸೂರಿನಲ್ಲಿರುವ ಭೈರಪ್ಪನವರಿಂದಲೇ ನಿಯಂತ್ರಿಸಲ್ಪಡುತ್ತಿದೆ. ಅದರೊಂದಿಗೆ ರಿಜಿಸ್ಟ್ರಾರ್ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಿಸಿ ಭೈರಪ್ಪ ನಿಟ್ಟುಸಿರುಬಿಡಲಿದ್ದಾರೆ. ಏಕೆಂದರೆ ಅವರ ಹಗರಣದ ಸಮಸ್ತ ಮಾಹಿತಿ ರಿಜಿಸ್ಟ್ರಾರ್ ಬಳಿ ಇದೆ. ಒಟ್ಟಿನಲ್ಲಿ ಭೈರಪ್ಪನವರ ಭ್ರಷ್ಟಾಚಾರ ಮಣ್ಣು ಪಾಲಾಗುತ್ತಾ? ಅಥವಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವವರೆಗೆ ಹೋಗುತ್ತಾ? ಉತ್ತರ ಸದ್ಯಕ್ಕೆ ಇಲ್ಲ ಎಂದು ಅನಿಸುತ್ತದೆ!
Leave A Reply