ಕೆರೆ ಬಾವಿ ಶುಲ್ಕದಿಂದ ಮೂಡಾ ಮಾಡಿರುವ ಒಂದು ಕೆರೆ ಅಭಿವೃದ್ಧಿ ತೋರಿಸಿ!!
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ದಲ್ಲಿ ಒಂದು ವಿಶಿಷ್ಟ ರೀತಿಯ ಶುಲ್ಕ ಇದೆ. ಅದನ್ನು ಕೆರೆ ಅಭಿವೃದ್ಧಿ ಶುಲ್ಕ ಎಂದು ಹೆಸರಿಟ್ಟಿದ್ದಾರೆ. ಈ ಶುಲ್ಕ ನೀವು ಯಾವಾಗ ಕಟ್ಟಬೇಕು ಎಂದರೆ ನೀವು ಮನೆ ಕಟ್ಟಲು ಲೈಸೆನ್ಸ್ ತೆಗೆದುಕೊಳ್ಳಲು ಹೋಗುವಾಗ ಮೂಡಾ ನಿಮ್ಮಿಂದ ಈ ಶುಲ್ಕವನ್ನು ಕಟ್ಟಿಸಿಕೊಳ್ಳುತ್ತದೆ. ಈ ಕೆರೆಬಾವಿ ಅಭಿವೃದ್ಧಿ ಶುಲ್ಕವು ದೊಡ್ಡ ಮಟ್ಟದ ಲೇಔಟ್ ಮಾಡುವವರಿಗೆ ಎಕರೆಗೆ ಒಂದು ಲಕ್ಷದಂತೆ ನಿಗದಿಪಡಿಸಿದ್ದಾರೆ. ಇದನ್ನು ಮೂಡಾದಲ್ಲಿ ಹೊಸ ಟಿಪಿಎಂ ಬಂದ ನಂತರ 2,3 ಸೆಂಟ್ಸ್ ನವರಿಗೆ ಕೂಡ ವಿಧಿಸುತ್ತಿದ್ದಾರೆ. ಇದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಈಗ ಯಾರಾದರೂ ಒಬ್ಬರು ತಾನು ಹತ್ತು ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟುತ್ತಿದ್ದೇನೆ ಎಂದರೆ ಅಲ್ಲಿ ಕೆರೆ ಅಭಿವೃದ್ಧಿ ಶುಲ್ಕ ಹಾಕುವ ಅಗತ್ಯ ಏನು? ಈ ಶುಲ್ಕದ ಹಿಂದಿರುವ ಉದ್ದೇಶ ಎಂದರೆ ನೀವು ಮನೆ ಕಟ್ಟುವ ಜಾಗದಲ್ಲಿ ಕೆರೆ ಇತ್ತೆಂದರೆ ಅಲ್ಲಿ ನೀವು ಕೆರೆಯನ್ನು ಮುಚ್ಚಿ ಕಟ್ಟಡ ಎಬ್ಬಿಸುತ್ತಿದ್ದರೆ ಆಗ ಬೇರೆ ಕಡೆ ಕೆರೆಯನ್ನು ಅಭಿವೃದ್ಧಿ ಮಾಡುವುದೋ ಅಥವಾ ಕೆರೆಯನ್ನು ನಿರ್ಮಿಸುವುದೋ ಮಾಡುವುದಾದರೆ ಆಗ ಈ ಶುಲ್ಕ ಉಪಯೋಗಕ್ಕೆ ಬೇಕಾಗುತ್ತದೆ ಎನ್ನುವ ಕಾರಣಕ್ಕೆ ನಿಮ್ಮಿಂದ ಶುಲ್ಕವನ್ನು ತೆಗೆದುಕೊಳ್ಳಲಾಗುತ್ತದೆ. ಹಾಗೆ ಬಾವಿ ಕೂಡ ನೀವು ಮನೆ ಕಟ್ಟುವಾಗ ಮುಚ್ಚುವ ಪರಿಸ್ಥಿತಿ ಬಂದರೆ ಇದೇ ಸೂತ್ರವನ್ನು ಅಳವಡಿಸಿ ಮೂಡಾ ನಿಮ್ಮಿಂದ ಹಣವನ್ನು ತೆಗೆದುಕೊಳ್ಳುತ್ತದೆ.
ಕೆರೆ ಇಲ್ಲದಿದ್ದರೂ ಅಭಿವೃದ್ಧಿ ಶುಲ್ಕ ಯಾಕೆ…
ಇಲ್ಲಿ ಈಗ ಎರಡು ಪ್ರಶ್ನೆ ಉದ್ಭವಿಸುತ್ತದೆ. ಒಂದು ಹತ್ತು, ಹದಿನೈದು ಸೆಂಟ್ಸ್ ನಲ್ಲಿ ಕೆರೆ ಬರಲ್ಲ, ಆದ್ದರಿಂದ ಮುಚ್ಚುವಂತಹ ವಿಷಯವೇ ಬರುವುದಿಲ್ಲ. ಇನ್ನು ಒಂದು ವೇಳೆ ಬಾವಿ ಆ ಪ್ರದೇಶದಲ್ಲಿ ಬಂದರೆ ಹೆಚ್ಚಿನವರು ಇವತ್ತಿನ ದಿನಗಳಲ್ಲಿ ಬಾವಿಯನ್ನು ಅನಿವಾರ್ಯವಾಗಿ ಉಳಿಸುತ್ತಾರೆ ಮತ್ತು ಸಾಧ್ಯವಾದಷ್ಟು ಚೆನ್ನಾಗಿ ಇಟ್ಟುಕೊಳ್ಳಲು ಶ್ರಮಿಸುತ್ತಾರೆ. ಅವರು ಬಾವಿಯನ್ನು ಮುಚ್ಚದಿದ್ದರೆ ಮತ್ತು ಚೆನ್ನಾಗಿ ಇಟ್ಟುಕೊಂಡರೆ ಅವರು ಕೆರೆಬಾವಿ ಅಭಿವೃದ್ಧಿ ಶುಲ್ಕವನ್ನು ಕಟ್ಟುವ ಅಗತ್ಯವಾದರೂ ಏನು? ಒಟ್ಟಿನಲ್ಲಿ ಈ ಶುಲ್ಕ ಮಧ್ಯಮ ವರ್ಗದವರಿಗೆ ಹೊರೆಯಾಗಿ ಬದಲಾಗಿದೆ. ಆದ್ದರಿಂದ ಇದನ್ನು ರದ್ದುಪಡಿಸಬೇಕು ಎಂದು ನಾನು ನಗರಾಭಿವೃದ್ಧಿ ಸಚಿವರೂ ಆಗಿರುವ ಯುಟಿ ಖಾದರ್ ಅವರಿಗೆ ಮುಡಾ ಅದಾಲತ್ ನಲ್ಲಿ ಮನವಿ ಮಾಡಿದ್ದೇನೆ. ಇದರೊಂದಿಗೆ ಆಶ್ಚರ್ಯ ಎಂದರೆ ಮೂಡಾದವರು ಹೀಗೆ ಕೆರೆಬಾವಿ ಅಭಿವೃದ್ಧಿ ಶುಲ್ಕ ಎಂದು ಸಂಗ್ರಹ ಮಾಡುತ್ತಿರುವ ಹಣವೇ ಈಗ ಕೆಲವು ಕೋಟಿಗಳಷ್ಟಾಗಿವೆ. ಈ ಹಣದಿಂದ ಇವರು ಎಷ್ಟು ಕೆರೆ ಅಭಿವೃದ್ಧಿ ಮಾಡಿದ್ದಾರೆ ಎಂದು ಕೇಳಿ. ಯಾವುದೂ ಇಲ್ಲ ಅಂದರೆ ಶುಲ್ಕ ಮಾತ್ರ ವಸೂಲಿ ಮಾಡಲಾಗುತ್ತದೆ, ಅದು ಕೂಡ ಅವೈಜ್ಞಾನಿಕವಾಗಿ. ಬೇಕಾದರೆ ಬಿಲ್ಡರ್ ಗಳ ಹತ್ತಿರ ಎಕರೆಗೆ ಒಂದು ಲಕ್ಷ, ಅರ್ಧ ಎಕರೆಗೆ ಐವತ್ತು ಸಾವಿರ ಪಡೆದುಕೊಳ್ಳಲಿ. ಅದೇ ಜನಸಾಮಾನ್ಯರ ಬಳಿ ಹೀಗೆ ಮನೆಕಟ್ಟುವಾಗ ಗಾಯದ ಮೇಲೆ ಬರೆ ಎಳೆಯುವುದನ್ನು ನಿಲ್ಲಿಸಲಿ. ಖಾದರ್ ಪರಿಶೀಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ನೋಡೋಣ ಯಾವಾಗ ಮಾಡುತ್ತಾರೆ ಅಂತ.
ಮೂಡಾ ಒಳಗಿನ ವೈಯಕ್ತಿಕ ಸಮಸ್ಯೆ…
ಇನ್ನು ವಿನ್ಯಾಸ ನಕ್ಷೆಯ ಬಗ್ಗೆ ಇರುವ ಗೊಂದಲವನ್ನು ಶೀಘ್ರದಲ್ಲಿ ಬಗೆಹರಿಸಬೇಕು ಎಂದು ಮನವಿ ಮಾಡಿದ್ದೇನೆ. ಅಲ್ಲಿರುವ ಗೊಂದಲ ಬೇರೆ ರೀತಿಯದ್ದು. ಮನೆ ಕಟ್ಟುವಾಗ ವಿನ್ಯಾಸ ನಕ್ಷೆಯನ್ನು ಮೂಡಾಕ್ಕೆ ಕೊಡಲು ಇದೆ. ಗ್ರಾಮ ಪಂಚಾಯತ್ ಗಳಿಗೆ ಒಳಪಟ್ಟ ಪ್ರದೇಶಗಳ ವಿನ್ಯಾಸ ನಕ್ಷೆಯನ್ನು ಮಾಡಲು ಮೂಡಾ ಸರ್ವೆಯರ್ ಆದ ಪ್ರಸನ್ನ ಎನ್ನುವವರಿಗೆ ಆಯುಕ್ತರು ಲಿಖಿತವಾಗಿ ಆದೇಶ ನೀಡಿದ್ದಾರೆ. ಆದರೆ ಪ್ರಸನ್ನ ಅವರು ಮಾಡುವ ವಿನ್ಯಾಸ ನಕ್ಷೆಯನ್ನು ಟಿಪಿಎಂ ಅವರು ಆಕ್ಷೇಪ ಎತ್ತುತ್ತಾರೆ. ಸರಿಯಾಗಿ ನೋಡಿದರೆ ಟಿಪಿಎಂ ಅವರು ಮೂಡಾ ಆಯುಕ್ತರಿಗಿಂತ ಕೆಳಗಿನ ಸ್ಥಾನದಲ್ಲಿರುವವರು. ಅವರು ತಮ್ಮ ಮೇಲಾಧಿಕಾರಿ ಸೂಚಿಸಿರುವ ವ್ಯಕ್ತಿಯ ಕೆಲಸಕ್ಕೆ ಆಕ್ಷೇಪ ಎತ್ತುವಂತಿಲ್ಲ. ಆದ್ದರಿಂದ ಇಲ್ಲಿ ಏನು ಮಾಡಬೇಕು ಎಂದರೆ ಸಿಟಿ ಸರ್ವೆಯರ್ ಗಳಿಂದ ಅಥವಾ ಪ್ರಸನ್ನ ಅವರಿಂದ ಯಾರೂ ಮಾಡಿದರೂ ತೊಂದರೆ ಇಲ್ಲ ಎನ್ನುವ ಸೂಚನೆ ಬರಬೇಕು. ಅದು ಬಿಟ್ಟು ಮೂಡಾದ ಒಳಗಿನ ಅಧಿಕಾರಿಗಳ ವೈಯಕ್ತಿಕ ಸಮಸ್ಯೆಗಳಿಂದ ಜನಸಾಮಾನ್ಯರು ತೊಂದರೆ ಅನುಭವಿಸುವುದು ಸರಿಯಲ್ಲ ಎನ್ನುವ ಮನವಿ ಮಾಡಿದ್ದೇನೆ. ಯಾಕೆಂದರೆ ಮೂಡಾದವರು ಕೇವಲ ರಸ್ತೆ ಮಾತ್ರ ನೋಡುವುದರಿಂದ ಯಾರು ನಕ್ಷೆ ಮಾಡಿದರೂ ತೊಂದರೆ ಇಲ್ಲ. ಒಂದು ವೇಳೆ ದಸ್ತಾವೇಜು ನಕ್ಷೆ ತಾಳೆ ಬರದಿದ್ದರೆ ರಿಜೆಕ್ಟ್ ಮಾಡುವ ಅವಕಾಶ ಇದೆ.
ಇಷ್ಟೇ ಅಲ್ಲ, ಇನ್ನು ಕೆಲವು ಜನಸಾಮಾನ್ಯರು ಮೂಡಾದಲ್ಲಿ ಅನುಭವಿಸುವ ಸಮಸ್ಯೆಗಳ ಬಗ್ಗೆ ಸಚಿವರಿಗೆ ತಿಳಿಸಿದ್ದೇನೆ. ಅದನ್ನು ನಾಳೆ ಬರೆಯಲಿದ್ದೇನೆ. ಒಂದು ವೇಳೆ ನೀವು ಈ ಸಮಸ್ಯೆಗಳನ್ನು ಅನುಭವಿಸಿದ್ದರೆ ನನಗೆ ಕಮೆಂಟ್ ಮಾಡಬಹುದು. ಇದನ್ನು ಬಿಟ್ಟು ಬೇರೆ ಸಮಸ್ಯೆಗಳನ್ನು ನೀವು ಅನುಭವಿಸಿದ್ದರೆ ಅಥವಾ ಯಾರಾದರೂ ಅನುಭವಿಸಿದ್ದು ನಿಮ್ಮ ಗಮನಕ್ಕೆ ಬಂದರೆ ಅದನ್ನು ಕೂಡ ಈ ಸಾಮಾಜಿಕ ತಾಣದಲ್ಲಿ ಬರೆದು ತಿಳಿಸಿ. ಏಕೆಂದರೆ ಆಗಾಗ ಮೂಡಾ ಅದಾಲತ್ ಮತ್ತು ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸುವುದಾಗಿ ಸಚಿವರು ಹೇಳಿದ್ದಾರೆ. ಈ ಬಾರಿ ಆಗದಿದ್ದರೆ ಮುಂದಿನ ಬಾರಿ ಮತ್ತೆ ಕೇಳೋಣ. ಅಷ್ಟಕ್ಕೂ ಇದೆಲ್ಲ ನನ್ನ ವೈಯಕ್ತಿಕ ಸಮಸ್ಯೆ ಅಲ್ಲ, ಜನರದ್ದು, ಹಾಗಿರುವಾಗ ಕೇಳಲು ಅಂಜಿಕೆ ಯಾಕೆ!
Leave A Reply