ಸಾಲಮನ್ನಾ ಮಾಡಲು ಯೋಚಿಸಿದ ಕುಮಾರಸ್ವಾಮಿ ಸರ್ಕಾರದ ಬಳಿ ಇದಕ್ಕೆಲ್ಲ ಹಣ ಇತ್ತೇ?
ವಿಧಾನಸಭೆಯ 224 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕೇವಲ 38 ಸ್ಥಾನಗಳಲ್ಲಿ ಗೆದ್ದರೂ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿರುವ, ದೇವೇಗೌಡರೇ ಕುಮಾರಸ್ವಾಮಿ ಸಾಂದರ್ಭಿಕ ಶಿಶು ಎಂದು ಕರೆದಿರುವ ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಲೇ ನಾಡಿನ ಜನತೆಗೆ ನೀಡಿದ ಮಾತನ್ನು ಮರೆತು, ಬೇರೆಯದ್ದೇ ವರಸೆ ತೆಗೆದರು.
ಹೌದು, ಚುನಾವಣೆಗೂ ಮೊದಲು, ನಾನು ಯಾವುದೇ ಪಕ್ಷದ ಜತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ, ಬೇಕಾದರೆ ಬರೆದುಕೊಡುತ್ತೇನೆ ಎಂದು ಜೋರು ದನಿಯಲ್ಲಿ ಮಾತನಾಡಿದ್ದರು. ಚುನಾವಣೆ ಪ್ರಚಾರದ ವೇಳೆಯಲ್ಲಂತೂ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಘೋಷಿಸಿಬಿಟ್ಟರು. ಆದರೆ ಅಧಿಕಾರ ಹಿಡಿದ ಬಳಿಕ ವರಸೆ ಬದಲಿಸಿದ ಕುಮಾರಸ್ವಾಮಿಯವರು ಕೂಡಲೇ ಸಾಲ ಮನ್ನಾ ಮಾಡಲು ದುಡ್ಡಿಲ್ಲ ಎಂದರು.
ಆದರೆ ಇಂತಹ ಕುಮಾರಸ್ವಾಮಿಯವರ ಸರ್ಕಾರ ಅಧಿಕಾರ ಸ್ವೀಕರಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದೆ. ಹಾಗಂತ ಇವರೇನೂ ಸಮಾರಂಭಕ್ಕಾಗಿ ಖರ್ಚು ಮಾಡಿಲ್ಲ. ಬದಲಾಗಿ ಸಮಾರಂಭಕ್ಕೆ ಆಗಮಿಸಿದ ಗಣ್ಯರು ಬೆಂಗಳೂರಿನಲ್ಲಿದ್ದು, ಒಗ್ಗಟ್ಟು ಪ್ರದರ್ಶಿಸಿ ಹೋಗಲು ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಶೀಘ್ರವೇ ಸಾಲ ಮನ್ನಾ ಮಾಡಲು ದುಡ್ಡಿರದ ಕುಮಾರಸ್ವಾಮಿಯವರು ಇಷ್ಟೆಲ್ಲ ಹೇಗೆ ಖರ್ಚು ಮಾಡಿದರು ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆ ಹಾಗೂ ಟೀಕೆಗೆ ಕಾರಣವಾಗಿದೆ.
ಆರ್.ಟಿ.ಐ. ಕಾರ್ಯಕರ್ತರೊಬ್ಬರು ಸಲ್ಲಿಸಿದ ಅರ್ಜಿಯಲ್ಲಿ ಈ ವಿಷಯ ಬಹಿರಂಗವಾಗಿದ್ದು, ಬರೀ ಗಣ್ಯರು ಬೆಂಗಳೂರಿಗೆ ಬಂದು ಹೋಗಲು ಸರ್ಕಾರದ ಖಜಾನೆಯಿಂದ ಬರೋಬ್ಬರಿ 42 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಒಂದು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಇಷ್ಟೊಂದು ಹಣ ಖರ್ಚು ಮಾಡುವುದು ಬೇಕಿತ್ತಾ, ಇದರಿಂದ ರಾಜ್ಯದ ಜನರಿಗೆ ಏನು ಪ್ರಯೋಜನ ಎಂಬ ಮಾತುಗಳು ಕೇಳಿಬರುತ್ತಿವೆ.
ಹೀಗೆ ಬಂದು ಸರ್ಕಾರದ ಹಣ ಖರ್ಚು ಮಾಡಿರುವವರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಗ್ರ ಪಂಕ್ತಿಯಲ್ಲಿದ್ದು, ಇವರು 8.72 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಉಳಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 1.85 ಲಕ್ಷ ರೂಪಾಯಿ, ಶರದ್ ಯಾದವ್ 1.67 ಲಕ್ಷ, ಅಖಿಲೇಶ್ ಯಾದವ್ 1.02 ಲಕ್ಷ ರೂಪಾಯಿ ಸೇರಿ ಹಲವರು 42 ಲಕ್ಷ ರೂಪಾಯಿ ಬಿಲ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
Leave A Reply