ಸಿಎಂ ಕುಮಾರಸ್ವಾಮಿಯವರೇ, ದೇವಾಲಯ ಸುತ್ತುತ್ತಲೇ ಇರುತ್ತೀರೋ? ಅಭಿವೃದ್ಧಿಯತ್ತ ಗಮನಹರಿಸುತ್ತೀರೋ?
ಮೊದಲೇ ಹೇಳಿಬಿಡುತ್ತೇನೆ. ಯಾವುದೇ ರಾಜ್ಯದ ಮುಖ್ಯಮಂತ್ರಿಯಾದವರು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ದೇವಾಲಯಗಳಿಗೆ ಭೇಟಿ ನೀಡುವುದೇ ಮುಖ್ಯಮಂತ್ರಿಯವರ ಕಾರ್ಯವಾಗಬಾರದು ಎಂಬುದು ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದು ಹಾಗೂ ಅದು ಆಡಳಿತಗಾರನ ಲಕ್ಷಣವೂ ಅಲ್ಲ.
ಅಷ್ಟಕ್ಕೂ ದೇವಾಲಯಗಳಿಗೆ ಭೇಟಿ ನೀಡುವುದನ್ನೂ ರಾಜಕೀಯ ಮಾಡಿದ್ದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು. ಬಿಡುವು ಸಿಕ್ಕಾಗಲೆಲ್ಲ ವಿದೇಶಕ್ಕೆ ಹೋಗುತ್ತಿದ್ದ ರಾಹುಲ್ ಗಾಂಧಿ ಗುಜರಾತ್ ಹಾಗೂ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೇ ಘೋಷಣೆಯಾಗುತ್ತಲೇ ದೇವಾಲಯ, ಮಸೀದಿ, ಚರ್ಚ್ ಹಾಗೂ ಮಠಗಳಿಗೆ ಭೇಟಿ ನೀಡುವ ಮೂಲಕ ಮತಬ್ಯಾಂಕ್ ರಾಜಕಾರಣ ಮಾಡಿದ್ದರು.
ಆದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದ ಬಳಿಕ ದೇವಾಲಯ ಸುತ್ತುತ್ತಿದ್ದಾರೆ. ಅದೂ ಎಡೆಬಿಡದೆ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಮೇ 23ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕುಮಾರಸ್ವಾಮಿ ಇದುವರೆಗೆ ಸುಮಾರು 34 ದೇವಾಲಯಗಳಿಗೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕುಕ್ಕೇ ಸುಬ್ರಹ್ಮಣ್ಯ, ಧರ್ಮಸ್ಥಳ ಮಂಜುನಾಥೇಶ್ವರ, ಹರದನಹಳ್ಳಿಯ ಈಶ್ವರ ದೇವಾಲಯ ಸೇರಿ ಕುಮಾರಸ್ವಾಮಿಯವರು 34 ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠ, ಮಂಡ್ಯದ ಆಚಿ ಚುಂಚನಗಿರಿ, ಮೈಸೂರಿನ ಸುತ್ತೂರು ಮಠ ಸೇರಿ ಹಲವು ಮಠಗಳಿಗೆ ಕನಿಷ್ಠ ಆರು ಬಾರಿ ಭೇಟಿ ನೀಡಿದ್ದಾರೆ.
ಖಂಡಿತ ಮುಖ್ಯಮಂತ್ರಿಯವರು ಎಲ್ಲ ದೇವಾಲಯ ಹಾಗೂ ಮಠಗಳಿಗೆ ಭೇಟಿ ನೀಡಿ, ದೇವರ ಹಾಗೂ ಹಿರಿಯ ಆಶೀರ್ವಾದ ತೆಗೆದುಕೊಂಡು ಬರುವುದರಲ್ಲಿ ಯಾವುದೇ ಹುಳುಕಿಲ್ಲ. ಆದರೆ, ರಾಜ್ಯಾದ್ಯಂತ ಮಳೆ ಆವರಿಸಿದೆ. ಮಂಗಳೂರು, ಮಡಿಕೇರಿ, ಉತ್ತರ ಕನ್ನಡದ ಜನವಂತೂ ಅಕ್ಷರಶಃ ಮಳೆಯಿಂದ ನಲಗುತ್ತಿದ್ದಾರೆ. ಬೆಳೆ, ಮನೆ ಕಳೆದುಕೊಂಡು, ವಿದ್ಯುತ್ ಸಂಪರ್ಕವೂ ಇಲ್ಲದೆ ಪರದಾಡುತ್ತಿದ್ದಾರೆ. ಹೀಗಿದ್ದರೂ ಕುಮಾರಸ್ವಾಮಿಯವರು ಕ್ರಮ ಕೈಗೊಳ್ಳದೆ, ಬರೀ ದೇವಾಲಯ ಸುತ್ತಿದರೆ ಹೇಗೆ ಎಂಬ ಮಾತು ಕೇಳಿಬರುವುದು ಸಹಜ.
ಅಷ್ಟೇ ಅಲ್ಲ, ಸಾಲಮನ್ನಾ ಘೋಷಣೆಯಾದರೂ ಹಲವು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಬಹುದೊಡ್ಡ ಜವಾಬ್ದಾರಿ ಮುಖ್ಯಮಂತ್ರಿ ಮೇಲಿದೆ. ಅಲ್ಲದೆ, ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಬಹುತೇಕ ಕಡೆ ಬರ ಆವರಿಸಿದೆ. ಹಣಕಾಸು ಸ್ಥಿತಿ ಸರಿಯಿಲ್ಲ ಎಂದು ಮುಖ್ಯಮಂತ್ರಿಯವರೇ ಹೇಳಿದ್ದಾರೆ.
ಹಾಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ, ಮುಂದೆ ಎಂದಾದರೂ ಬಿಡುವಿದ್ದಾಗ ರಾಜ್ಯದ ಎಲ್ಲ ದೇವಾಲಯಗಳಿಗೂ ಭೇಟಿ ನೀಡುವಿರಿ. ಈಗ ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ನೆರೆ, ಬರ, ಸಾಲದಿಂದ ತತ್ತರಿಸಿ ಹೋಗಿದ್ದು, ನೀವು ಆ ಸಮಸ್ಯೆಯತ್ತ ಗಮನಹರಿಸಿ. ರಾಜ್ಯದ ಜನರ ಕಷ್ಟಕ್ಕೆ ಸ್ಪಂದಿಸಿ. ಇಲ್ಲದಿದ್ದರೆ, ಅಭಿವೃದ್ಧಿ ಹೆಸರಲ್ಲಿ ಆಡಳಿತಕ್ಕೆ ಬಂದ ನಿಮ್ಮನ್ನು ಆ ತಾಯಿ ಚಾಮುಂಡೇಶ್ವರಿಯೂ ಕ್ಷಮಿಸುವುದಿಲ್ಲ.
Leave A Reply