ಕುಮಾರಸ್ವಾಮಿಯವರೇ ನಿಮಗೇಕೆ ಉತ್ತರ ಕರ್ನಾಟಕ ಎಂದರೆ ಇಷ್ಟು ಸಿಟ್ಟು?
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವ ತನಕ ಅಥವಾ ಚುನಾವಣೆ ಮುಗಿಯುವರೆಗೆ ನಾನು ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಸಾಲ ಮನ್ನಾ ಮಾಡುತ್ತೇನೆ, ಅಖಂಡ ರಾಜ್ಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ಆದರೆ ಅಧಿಕಾರ ಸಿಗುತ್ತಲೇ ಸಾಲ ಮನ್ನಾ ಮಾಡಲು ಸರ್ಕಾರದ ಬಳಿ ಹಣವಿಲ್ಲ, ಸ್ವಲ್ಪ ಸಮಯ ಕೊಡಿ ಎಂದರು. ಮತ್ತೂ ಮುಂದುವರಿದು ನಾನು ಕಾಂಗ್ರೆಸ್ ಮರ್ಜಿಯಲ್ಲಿರುವ ಮುಖ್ಯಮಂತ್ರಿ ಎನ್ನುವ ಮೂಲಕ ಕುಮಾರಸ್ವಾಮಿಯವರಿಗೆ ಎರಡು ನಾಲಿಗೆ ಇವೆಯೇನೋ ಎನ್ನುವಷ್ಟರಮಟ್ಟಿಗೆ ನಡೆದುಕೊಂಡರು.
ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪ್ರಾಬಲ್ಯವಿಲ್ಲ ಎಂಬ ಕಾರಣಕ್ಕಾಗಿಯೇನೋ, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ನಿರ್ಲಕ್ಷಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಕೆಶಿಪ್ ವರ್ಗಾವಣೆ ಮಾಡುವ ಮೂಲಕ ಕುಮಾರಸ್ವಾಮಿ ಉತ್ತರ ಕರ್ನಾಟಕದ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು.
ಇಷ್ಟಾದರೂ ಉತ್ತರ ಕರ್ನಾಟಕದ ಮೇಲೆ ಮುನಿಸು ಬಿಟ್ಟಂತೆ ಕಾಣದ ಕುಮಾರಸ್ವಾಮಿಯವರು ಈಗ ಉತ್ತರ ಕರ್ನಾಟಕಕ್ಕೆ ಮತ್ತೊಂದು ಶಾಕ್ ನೀಡಿದ್ದು, ಬೆಳಗಾವಿಯಲ್ಲಿ ನಿರ್ಮಾಣವಾಗಬೇಕಿದ್ದ ಆಯುಷ್ ಔಷಧ ತಯಾರಿಕಾ ಘಟಕವನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸುವ ಮೂಲಕ ಉತ್ತರ ಕರ್ನಾಟಕದ ಮೇಲಿರುವ ಸಿಟ್ಟನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದೆ ಎನ್ನಲಾಗುತ್ತಿದೆ.
2017ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿಗೆ ಆಯುಷ್ ಔಷಧ ತಯಾರಿಕೆ ಘಟಕವನ್ನು ಘೋಷಿಸಿದ್ದರು. ಅಲ್ಲದೆ ಬಜೆಟ್ ನಲ್ಲಿ ಔಷಧ ಘಟಕ ಸ್ಥಾಪನೆಗೆ 25 ಕೋಟಿ ರೂಪಾಯಿ ಅನುದಾನ ಸಹ ಮೀಸಲಿಟ್ಟಿದ್ದರು, ಆದರೆ ಈಗ ಬಂದಿರುವ ಕುಮಾರಸ್ವಾಮಿ ಸರ್ಕಾರ ಘಟಕವನ್ನು ಬೆಂಗಳೂರಿಗೆ ವರ್ಗಾಯಿಸಿದೆ.
ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದಿಲ್ಲ ಹಾಗೂ ಬೆಂಗಳೂರಿನ ಜಯನಗರದಲ್ಲಿರುವ ಸರ್ಕಾರಿ ಕೇಂದ್ರೀಯ ಔಷಧ ಘಟಕ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಬೆಳಗಾವಿಯ ಘಟಕವನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಹೇಳಿ ಕುಮಾರಸ್ವಾಮಿಯವರೇ ನಿಮಗೇಕೆ ಉತ್ತರ ಕರ್ನಾಟಕದ ಜನರ ಮೇಲೆ ಇಷ್ಟೊಂದು ಸಿಟ್ಟು? ನೀವು ಹೀಗೆಯೇ ಮಾಡಿದರೆ ಮುಂದೆ ನಿಮಗೆ ಉತ್ತರ ಕರ್ನಾಟಕದ ಜನ ಪಾಠ ಕಲಿಸದೆ ಬಿಡುತ್ತಾರೆಯೇ? ಅಷ್ಟಕ್ಕೂ ನೀವು ಅಖಂಡ ಕರ್ನಾಟಕದ ಸಿಎಂ ಅಲ್ಲವೇ?
Leave A Reply