ಅತಿವೃಷ್ಟಿ ಹಾಗೂ ಗುಡ್ಡ ಕುಸಿತದಿಂದ ನಲುಗಿದ ಪ್ರದೇಶಕ್ಕೆ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಭೇಟಿ

ಮಂಗಳೂರು: ಅತಿವೃಷ್ಟಿ ಹಾಗೂ ಗುಡ್ಡ ಕುಸಿತದಿಂದ ನಲುಗಿದ ಜೋಡುಪಾಳ ಪ್ರದೇಶಕ್ಕೆ ಇಂದು ಭಾನುವಾರ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಹಾಗು ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದ್ದಾರೆ. ಮಂಗಳೂರಿನಿಂದ ನೇರವಾಗಿ ಸುಳ್ಯಕ್ಕೆ ತೆರಳಿದ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ, ಸುಳ್ಯ ಪ್ರವಾಸಿ ಮಂದಿರದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸ್ಥಳೀಯ ಶಾಸಕ ಅಂಗಾರ ಅವರನ್ನು ಭೇಟಿಮಾಡಿದರು.
ಭೇಟಿ ಸಂದರ್ಭದಲ್ಲಿ ನೆರೆ ಪೀಡಿತ ಪ್ರದೇಶಗಳ ಮಾಹಿತಿ ಪಡೆದರಲ್ಲದೇ ಜೋಡುಪಾಳ ಪ್ರದೇಶದಲ್ಲಿ ಉಂಟಾದ ಅನಾಹುತಗಳ ಬಗ್ಗೆ ಮಾಹಿತಿ ಕಲೆ ಹಾಕಿದರು.ನಂತರ ಜೋಡುಪಾಳ ಪ್ರದೇಶಕ್ಕೆ ತೆರಳಿ ಹಾನಿಗೊಂಡ ಪ್ರದೇಶದ ಪರಿಶೀಲನೆ ನಡೆಸಿದರು. ನಂತರ ಸಂಪಾಜೆ ನೆರೆಪೀಡಿತ ಪ್ರದೇಶದಲ್ಲಿ ರಚಿಸಲಾಗಿರುವ ನಿರಾಶ್ರಿತರ ಶಿಬಿರಕ್ಕೆ ತೆರಳಿದರು.
ಮನೆ, ಮಠ ಕಳೆದುಕೊಂಡು ಸಂತ್ರಸ್ತರಾಗಿರುವ 240 ಜನರಿಗೆ ಸಾಂತ್ವನ ಹೇಳಿ ಅವರ ಆರೋಗ್ಯ ವಿಚಾರಿಸಿದರು. ಈ ನಡುವೆ ಕೊಡಗಿನಲ್ಲಿ ಜಲಪ್ರಳಯ, ಪಶ್ಚಿಮ ಘಟ್ಟ ಬಾಯ್ದೆರೆಯುತ್ತಿವೆ. ಪಶ್ಚಿಮ ಘಟ್ಟಗಳ ತಪ್ಪಲು ಪ್ರದೇಶದಲ್ಲಿ ಜನರು ಭಯಗ್ರಸ್ಥರಾಗಿದ್ದಾರೆ. ಭಾರೀ ಮಳೆಯಿಂದಾಗಿ ಘಟ್ಟ ಪ್ರದೇಶದ ಉದ್ದಕ್ಕೂ ಭೂಮಿ ಬಿರುಕು ಬಿಡುತ್ತಿದೆ. ಕುದುರೆ ಮುಖ ಪ್ರದೇಶದಲ್ಲೂ ಭೂಕುಸಿತ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಮನೆಮಾಡಿದೆ.
Leave A Reply